Wednesday, July 15, 2015

# ಶಕುನದಾ ಬೆನ್ನೇರಿ


# ಶಕುನದಾ ಬೆನ್ನೇರಿ  


ಎಂದಿಗಿಂತಲೂ ಬೇಗನೇ ಎದ್ದ ಮಠದ ಸ್ವಾಮಿಗಳ ದೇಹ ನದೀತೀರಕ್ಕೆ ನಡೆದು ಮೂಗುಮುಚ್ಚಿ ನಾಲ್ಕುಬಾರಿ ಮುಳುಗಿ ದಡದಮೇಲಿನ ಬಂಡೆಯಮೇಲೆ ಒದ್ದೆಯಲ್ಲೇ ಕುಳಿತು ಮೊಣಕಾಲಿನ ಮೇಲೆ ಮೊಣಕೈ ಇಟ್ಟು, ಮುಷ್ಟಿಯನ್ನು ತುಟಿಗೆ ಒತ್ತಿ ಕುಳಿತಿತ್ತು. ತನ್ನ ಜೀವನದ ಗುಟ್ಟಿನಂತೆ ತೆಗ್ಗು-ದಿಮ್ಮಿ, ಕಸ-ಕಡ್ಡಿ ಎಲ್ಲವನ್ನೂ ನುಂಗಿ ಯಾರಿಗೂ ತೋರಿಸದೇ ಸಮಾನವಾಗಿ ಹರಿಯುವನೀರಿನ್ನು ಹಿಂಬಾಲಿಸಿದ ದೃಷ್ಟಿ, ದೂರ ತೀರದ ಅದೃಷ್ಯ ಬಿಂದುವಿನಲ್ಲಿ ಕೇಂದ್ರೀಕೃತವಾಗಿ ಮನಸ್ಸು “ಮತ್ತದೇ ಕನಸು, ದಶಕಗಳ ಹಿಂದೆ ನಿದ್ದೆಗೆಡಿಸಿ ನನ್ನ ಅಸ್ತಿತ್ವವನ್ನೇ ಕಿತ್ತು ಕಾಣದಂತೆ ಕಾವುಕೊಟ್ಟು, ಮಾಗಿಸಿತ್ತು. ನನ್ನಿಂದ ಸುಳ್ಳುನುಡಿಸಿ, ನನ್ನನ್ನೇ ಸುಳ್ಳುಮಾಡಿ, ಹುಚ್ಚನನ್ನಾಗಿ ಮಾಡಿತ್ತು. ನನ್ನದನ್ನೆಲ್ಲಾ ಹಿಂದೆಬಿಟ್ಟು, ಆಯಾಸವನ್ನೆಲ್ಲೋ ಉದುರಿಸಿಕೊಂಡು, ಯಾವುದೋ ಶಕುನದ ಮಾತು ಕೇಳಲು ನನ್ನನ್ನು ಹಿಂದೆ ತಿರುಗಿನೋಡಲೂ ಆಗದಂತೆ ಓಡಿಸಿದ್ದ ಕನಸು. ಗಾಳಿಗೆ ತೂರಿಹೋಗಿ ಇಷ್ಟು ವರ್ಷ ಯಾವ ದೈತ್ಯಮರದ ಟೊಂಗೆಗೆ ನೇತುಬಿದ್ದಿತ್ತೋ? ಇಂದು ನನ್ನ ನಿದ್ರೆಯ ವಿಳಾಸವನ್ನು ಹುಡುಕಿಬಂದುಕಿವಿಯಲ್ಲಿ ಯಾವುದೋ ಶಕುನವನ್ನು ಗೊಣಗುತ್ತಿದೆ.” ಎಂದು ರಾತ್ರಿಬಿದ್ದ ದುಸ್ವಪ್ನದ ಬಗ್ಗೆ ನೆನೆಯುತ್ತಿತ್ತು.
ಬದುಕಿನಗತ ಘಟನೆಗಳಲ್ಲಿ ನೆನೆದ ತಲೆಕೂದಲನ್ನು ಸೂರ್ಯನ ಎಳೆಬಿಸಿಲು ಒಣಗಿಸಿತು. ಸ್ವಾಮಿಗಳ ಈ ವಿಚಿತ್ರ ವೇಳಾಪಟ್ಟಿಯನ್ನು ಅನುಮಾನಿಸಿ ಹಿಂಬಾಲಿಸಿ ಬಂದ ಪಟ್ಟದ ಶಿಷ್ಯನ ತಾಳ್ಮೆಯ ಗಂಟು ಬಿಚ್ಚಿ ಮರದ ಹಿಂದಿನಿಂದ ಗುರುಗಳ ಮುಂದೆ ಪ್ರತ್ಯಕ್ಷವಾದ. ಗುರುಗಳು ಅವನು ಬಂದದನ್ನು ಗಮನಿಸಲಿಲ್ಲ.ಗುರುಗಳ ಪಾದ ಸ್ಪರ್ಶ ಮಾಡಿದೊಡನೆ  ಬೆಚ್ಚಿಬಿದ್ದು “ಓ ಮೋಕ್ಷಾ, ಬಂದೆಯಾ, ಏನು ಈಕಡೆ ಬಂದೆ?” ಎಂದರು.
“ಕ್ಷಮಿಸಿ ನಾನು ತಮ್ಮನ್ನು ಹಿಂಬಾಲಿಸಿದೆ, ಆದರೆ ನನಗೆ ಯಾಕೋ ತಾವು ಯಾವುದೋವಿಷಯವಾಗಿ ನೊಂದಿರುವಿದಿ ಎನ್ನಿಸಿತು. ತಾವು ದಯವಿಟ್ಟು” ಎಂದು ಮೋಕ್ಷಾನಂದ ಕೇಳುತ್ತಿದ್ದಂತೆ, ಗುರುಗಳು “ಇಲ್ಲ ಇಲ್ಲ. ಅದೇನಿಲ್ಲಾ, ಸುಮ್ಮನೆ ನನಗೆ ಯಾಕೋ ನಿದ್ದೆ ಬರಲಿಲ್ಲ, ಈ ಕಡೆ ಬಂದೆ ಅಷ್ಟೇ, ಪ್ರಕೃತಿ ಎಷ್ಟು ಚೆನ್ನಾಗಿದೆಯಲ್ಲಾ?” ಎಂದು ಮಾತು ಮರೆಸಲು ಪ್ರಯತ್ನಿಸಿದರು.
ಸ್ವಾಮೀಜಿ ನಾನು ನಿಮ್ಮೊಡನೆ ಸುಮಾರು ಹನ್ನೆರಡು ವರ್ಷ ಕಳೆದಿದ್ದೇನೆ. ನಿಮ್ಮನ್ನು ಅರ್ಥಮಾಡಿಕೊಂಡಿಲ್ಲದಿದ್ದರೂ, ನಿಮ್ಮ ಭಾವನೆಗಳು ನನ್ನನ್ನು ಸ್ಪರ್ಷಿಸುತ್ತವೆ. ಮಠದ ವಾತಾವರಣ ತಾವು ಬಂದಮೇಲೆ ಎಷ್ಟೋ ಸುಧಾರಿಸಿದೆ. ಆದರೆನನ್ನ ಮನಸ್ಸು ಮೊದಲದಿನ ತಾವು ನನ್ನನ್ನು ಮಠಕ್ಕೆ ತಂದಾಗ ಹೇಗಿತ್ತೋ ನಿಮ್ಮ ಆಶೀರ್ವಾದದಿಂದ ಹಾಗೆಯೇ ಇದೆ,ನಾನು ಬದಲಾಗಿಲ್ಲ.

ನೀನು ಮಾತ್ರ ಬದಲಾಗುವುದಿಲ್ಲ ಎನ್ನುತ್ತೀಯಾ, ಆದರೆ ನೋಡೋಣ ಸಮಯ ಎಲ್ಲವನ್ನೂ ಬದಲಾಯಿಸುತ್ತದೆ. ನೀನು ಎಷ್ಟು ದಿನ ಹೀಗೆ ಇರ್ತೀಯಾ? ನೋಡೋಣ

ತಾವು ಸಮಯಕ್ಕಿಂತ ಮುಂಚೆಯೇ ಮುಂದೆ ನಡೆಯುವುದನ್ನು ಹೇಳುತ್ತೀರಾ. ನನಗೆ ಒಂದು ಸಣ್ಣ ಗುರುತು ನೀಡಿದರೆ ಸಾಕು ನಾನು ನನ್ನ ನಡತೆ ತಿದ್ದಿಕೊಳ್ಳುತ್ತೇನೆ. ಆದರೆ

ಏನು ಆದರೆ,
ನಾನು ನಿಮ್ಮನ್ನು ಬಹಳ ಸಲ ಕೇಳಿದ್ದೇನೆ, ತಮ್ಮ ಜೀವನದ ಬಗ್ಗೆ ಹೇಳಿರಿ ಎಂದು ಮತ್ತು ನಿಮಗೆ ಮುಂದೆ ನಡೆಯುವ ಸಂಗತಿಗಳು ಹೇಗೆ ತಿಳಿತ್ತವೆ ಎಂದು ಕೇಳಿದಾಗಲೆಲ್ಲಾ ಸಮಯ ಬರಲಿ ಎಂದು ಹೇಳಿದ್ದಿರಿ. ಇಂದೇ ಆದಿನವೆಂದು ನನಗೆ ಅನ್ನಿಸುತ್ತದೆ, ಮಠದಿಂದ ದೂರವಿದ್ದೇವೆ ದಯವಿಟ್ಟು ಹೇಳಿ.
ಶಿಷ್ಯನ ಪ್ರಾರ್ಥನೆಯನ್ನು ಕೇಳಿ ಮುಗುಳ್ನಕ್ಕ ಗುರು

ಬಹುಶಃ ಕನಸು ಇದನ್ನೆ ಸೂಚಿಸಿತ್ತೇನೋ? ನನಗೆ ವಯಸ್ಸಿನ ಜೊತೆಗೆ ಬುದ್ಧಿಯೂ ಕ್ಷೀಣಿಸಿದಂತಿದೆ
ನನ್ನ ಜೀವನ. ಈ ದಿಕ್ಕಿಲ್ಲದವನ ಜೀವನ ತಿಳಿಯಬೇಕೇ.
ನಾನುಎಷ್ಟೋ ಸ್ವಾಮಿಗಳನ್ನು ನೋಡಿದ್ದೇನೆ. ಮಠ, ಧರ್ಮ, ಸಾಂಪ್ರದಾಯ ಎಂದೇ ಸಮಯಕಳೆದರೆ ತಾವು ಸಮಾಜಮುಖಿಯಾಗಿ ಪ್ರಗತಿಪರ ಕಾರ್ಯಗಳನ್ನು ಮಾಡಿರುವಿರಿ. ಧರ್ಮ-ಜಾತಿಯನ್ನೇ ಎದುರಿಸಿ ಎಷ್ಟೋ ಸಮಾಜಸೇವೆ ಮಾಡಿದ್ದೀರಿ ಅದಕ್ಕೆ ಉದಾಹರಣೆ ನಾನೆ. ಯಾವ ಜಾತಿಯೋ ತಿಳಿಯದು ಅನಾಥ ಮಗುವಾದ ನನ್ನನ್ನು ತಂದು ಈ ಮಠದಲ್ಲಿ ಆಶ್ರಯಕೊಟ್ಟು ಬೆಳೆಸಿದ್ದೀರಿ. ಆದ್ದರಿಂದ ನನ್ನಮೇಲೆ ತಮ್ಮ ಪ್ರಭಾವ ಘಾಡವಾಗಿದೆ. ದಯವಿಟ್ಟು ಹೇಳಿ, ಇಲ್ಲ ಎನ್ನಬೇಡಿ. .
ನನ್ನ ಇಡೀ ಜೀವನ ಒಂದು ಕನಸಿನಿಂದ ದಿಕ್ಕುತಪ್ಪಿ ಸೂತ್ರಕಳೆದುಕೊಂಡು ಸುತ್ತಾಡಿ, ಸುಸ್ತಾಗಿ ಕೊನೆಗೆ ಎಲ್ಲಿಹೋಗುವುದು ತಿಳಿಯದಾದಾಗ ಆ ಕನಸೇ ಇಲ್ಲಿಗೆ ತಂದು ನನ್ನನ್ನು ಮಠಾಧೀಶನನ್ನಾಗಿ ಮಾಡಿತು.

ಒಂದು ಕನಸೇ? ಒಂದು ಕನಸು ನಿಮ್ಮನ್ನು ಹೀಗೆಲ್ಲಾ ಆಡಿಸಿತೇ?

ಅದು ಬರೀ ಕನಸಲ್ಲ, ಒಂದು ಶಕುನ ಆದರೆ ಶುಭವೋ, ಅಶುಭವೋ ತಿಳಿಯದು. ಈ ಕನಸಿನ ಶಕುನವನ್ನು ನಂಬಿ ನನ್ನ ಜೀವನದ ಸುಖಗಳನ್ನು ಕಳೆದುಕೊಂಡೆ, ನನ್ನ ಹೆಸರು, ನೋಟ, ದಾಟಿ ಎಲ್ಲವನ್ನೂ ಈ ಕನಸೇ ಬದಲಾಯಿಸಿತು.
ನನಗೆ ತಿಳಿಯುತ್ತಿಲ್ಲಾ ಸ್ವಾಮಿಗಳೇ. ತಮ್ಮ ಈವರೆಗಿನ ಜೀವನವನ್ನು ಬಿಡಿಬಿಡಿಯಾಗಿ ಹೇಳಿ ದಯವಿಟ್ಟು ತಮ್ಮ ಬಾಲ್ಯದಿಂದ ಹೇಳಿ ಇದೊಂದೆ ನನ್ನ ಪ್ರಾರ್ತನೆ ದಯವಿಟ್ಟು ಇಂದು ಇಲ್ಲ ಎನ್ನಬೇಡಿ ಎಂದು ಕೇಳಿಕೊಂಡ.

ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ನನಗೆ ಬಾಲ್ಯದಿಂದಲೇ ಜ್ಞಾನದ ಜೊತೆಗೆ ಆಚರಣೆಗಳೂ ನನ್ನಲ್ಲಿ ಬೆಳೆದವು. ನನ್ನ ತಾತ ಶಕುನಗಳನ್ನು ಅತಿಯಾಗಿ ನಂಬುತ್ತಿದ್ದ. ಎಳೆವಯಸ್ಸಿನಲ್ಲಿ ತಾತನು ಹೇಳುತ್ತಿದ್ದ ಶಕುನದ ಕಥೆಗಳು ನನಗೆ ಕುತೂಹಲಕಾರಿಯಾಗಿದ್ದವು. ಪ್ರತಿ ಶಕುನದ ಅರ್ಥವನ್ನು ಬಿಡಿಸಿ ಹೇಳುತ್ತಿದ್ದ ತಾತನ ಮಾತುಗಳನ್ನು ಧಾರಣಮಾಡಿಕೊಳ್ಳುವ ಶಕ್ತಿ ಆಗ ನನ್ನ ಮೆದುಳಿಗೆ ಇರಲಿಲ್ಲ. ಬಾಲ್ಯವೆಲ್ಲಾ ಇಂತಹ ಕಥೆಗಳಲ್ಲಿಯೇ ಕಳೆಯಿತು. ಶಾಲೆಯಲ್ಲಿ ಇಂತಹವುಗಳನ್ನು ಹೇಳಿದರೆ ಸ್ನೇಹಿತರು, ಗುರುಗಳು ನಕ್ಕು ಅವಮಾನಿಸುತ್ತಿದ್ದರು. ನಾನೂ ಬರಬರುತ್ತ ಅವುಗಳಿಂದ ದೂರುಳಿದೆ. ನನ್ನ ಎಂ.ಎ ಪದವಿಯೂ ಮುಗಿಸಿದೆ. ಪಿ.ಹೆಚ್.ಡಿ ಪದವಿ ಮಾಡುತ್ತಿರುವಾಗ. ಸಂಶೋಧನೆಯ ಬಗ್ಗೆ ಪೀಠಿಕೆ ಮತ್ತು ಸಂಶೋಧನೆ ಮಾಡಬಯಸುವ ವಿಷಯದ ಮಾದರಿ ತಯಾರಿಸಿ ಒಪ್ಪಿಗೆ ಪಡೆಯಲು ಸುಮಾರು ಒಂದು ತಿಂಗಳು ಕಾಲಾವಕಾಶವಿತ್ತು. ಆದಿನ ಯಾವ ವಿಷಯ ತೆಗೆದುಕೊಳ್ಳಲಿ ಎಂದು ಗೊಂದಲಗೊಂಡು ಯೋಚಿಸುತ್ತಾ ರಾತ್ರಿ ಅರೆಹೊಟ್ಟೆಯಲ್ಲಿ ಮಲಗಿದ್ದೆ ಅಂದೇ ಈ ಕನಸು ನನ್ನನ್ನು ಮೊದಲು ಭೇಟಿಮಾಡಿದ್ದು.

      “ಮೇಜಿನ ಮೇಲೆ ಇಟ್ಟಿಗೆ ಗಾತ್ರದ ದೊಡ್ಡ ಪುಸ್ತಕ, ಅಕ್ಷರಗಳನ್ನು ನೋಡಿ ಅವು ನನ್ನದೇ ಬರಹ ಎಂದು ಖಾತ್ರಿಯಾಯಿತು, ಇದ್ದಕ್ಕಿದ್ದಂತೆ ಜೋರಾಗಿ ಗಾಳಿ ಬೀಸೀತು.  ಪುಸ್ತಕದಿಂದ ಒಂದೊಂದೇ ಹಾಳೆ ಗಾಳಿಗೆ ಪಳಪಳ ಸದ್ದು ಮಾಡುತ್ತಾ ಹಾರತೊಡಗಿದವು. ಗಾಳಿ ಜೋರಾದಷ್ಟು ಹಾಳೆಗಳು ಪುಸ್ತಕದಿಂದ ನೆಗೆದು ಹಾರಾಡುತ್ತಿವೆ. ಹಿಡಿಯಲು ಹೋಗಲು ಆಗುತ್ತಿಲ್ಲ. ಕುರ್ಚಿಯಿಂದ ಮೇಲೇಳಲಾಗುತ್ತಿಲ್ಲ. ಹಾರಿ ಹೋಗಿ ಬಾಗಿಲಿಗೆ ಬಡಿದು ಜೋರಾಗಿ ಮಾಡಿದ ಶಬ್ದದಿಂದ ಎಚ್ಚರಗೊಂಡೆ” ಅಮ್ಮ-ಅತ್ತಿಗೆಯರ ಅಳುವ ಕೂಗು ರೆಪ್ಪೆಯನ್ನು ಬೇಗನೇ ತೆಗೆಯುವಂತೆ ಮಾಡಿತು. ಕೋಣೆ ಬಾಗಿಲನ್ನು ತೆರೆದ ಅಣ್ಣ ತನ್ನ ದುಖಃ ತುಂಬಿದ ಧ್ವನಿಯಲ್ಲಿ ತಾತ ಹೋಗ್ಬಿಟ್ರು ಅಂದ. ನಿನ್ನೆ ಕಾಗೆಮಟ್ಟು ನೋಡಿ ಅಮ್ಮ ಹಬ್ಬಿಸಿದ ಸುಳ್ಳು ಸುದ್ದಿ ಇಂದು ನಿಜವಾಯ್ತು. ಅಕ್ಕನ ಪರಿವಾರ ಅಳುತ್ತಾ ಬಂದು ನಕ್ಕು ಮತ್ತೆ ಅಳುತ್ತಾ ಹೋಗುವಂತೆ ಮಾಡಿತು. ನನ್ನನ್ನು ಬಹಳ ಮುದ್ದಿನಿಂದ ಸಾಕಿದ ತಾತನ ಅಂತ್ಯಕ್ರಿಯೆಯ ನಂತರ ಅವರಿಲ್ಲದ ಆ ಕೋಣೆಯನ್ನೇ ನನ್ನ ಓದುವ ಕೋಣೆಯಾಗಿ ಮಾಡಿಕೊಂಡೆ.

ಕೋಣೆಯಲ್ಲಿ ಏನೋ ಹುಡುಕುವಾಗ ನನ್ನ ಕನಸಿನಲ್ಲಿ ಬಂದ ಪುಸ್ತಕವನ್ನೇ ಹೋಲುವ ಪುಸ್ತಕ ಸಿಕ್ತು. ಬರೀ ಶಕುನಗಳೇ ತುಂಬಿದ್ದ ತಾತನ ಪುಸ್ತಕ, ಅಲ್ಲಲ್ಲಿ ಅರೆಪೂರ್ಣಗೊಂಡ ಚಿತ್ರಗಳು, ಏನೂ ಅರ್ಥವಾಗದ ರೀತಿ ಗೀಚಿದ್ದ ಗೆರೆಗಳು, ಬಹುಷಃ ಮಾನಸಿಕ ರೋಗಿಯ ವಿಕೃತ ಮನಸ್ಸಿನಿಂದ ಏನೊ ಬಿಡಿಸಲು ಹೋಗಿ ಗೀಜಿ ಹಾಳುಮಾಡಿದ ಚಿತ್ರಗಳಂತೆ ಕಂಡವು. ವಲ್ಲದ ಮನಸ್ಸಿನಿಂದ ಓದಲು ಪ್ರಾರಂಭಿಸಿದೆ. ಪಿ.ಹೆಚ್.ಡಿ ಮಾಡುವುದಾದರೆ “ಭಾರತೀಯ ಸಂಪ್ರದಾಯದಲ್ಲಿನ ಶಕುನಗಳ ಒಂದು ಅಧ್ಯಯನ” ಈ ವಿಷಯವಾಗಿ ಅಧ್ಯಯನಮಾಡುವಂತೆ ಯಾವುದೋ ಶಕ್ತಿ ಒತ್ತಾಯ ಮಾಡಿಸಿದಂತಾಯ್ತು. ವಿಶ್ವವಿಧ್ಯಾಲಯದ ಮುಖ್ಯಸ್ತರು ಮರುಮಾತಿಲ್ಲದೇ ಒಪ್ಪಿದರು. ಅಧ್ಯಯನಕ್ಕೆ ಬೇಕಿದ್ದ ಎಲ್ಲಾ ಮಾಹಿತಿಗಳು ತಾತನ ಪುಸ್ತಕದಲ್ಲಿದ್ದವು. ಡಾ|| ಪದವಿ ಪಡೆದು ಬೀಗುತ್ತಾಬಂದು ಪ್ರಮಾಣ ಪತ್ರವನ್ನು ತಾತನ ಫೋಟೋಮುಂದಿಟ್ಟು, ಸಂತೋಶದಿಂದ ತುಂಬಿದ ಹೊಟ್ಟೆಯಲ್ಲಿ ಸಿಹಿ ಪೆಡಕ್ಕೆ ವಿಶೇಷ ಕೋಟಾ ಕೊಟ್ಟು ತಳ್ಳಿದೆ. ಅಂದು ರಾತ್ರಿ ಆ ಕನಸು ಎರಡನೇ ಬಾರಿ ನಿದ್ರೆಯನ್ನು ಹೊಕ್ಕು ತನ್ನದೇ ಅಡುಗೆ ಮಾಡತೊಡಗಿತು.
      “ಜೋರಾಗಿ ಬೀಸುವ ಗಾಳಿಗೆ ಪಕ್ಷಿಯಂತೆ ಹಾರುವ ಹಾಳೆಗಳು, ಕಣ್ಣಿಗೆ ಸ್ಪಷ್ಟವಾಗಿ ಕಾಣುವ ನನ್ನ ಕೈಬರಹ. ಹಿಡಿದು ಸಂಗ್ರಹಿಸಲು ಆಗುತ್ತಿಲ್ಲ. ಹಿಡಿದರೆ ಸಿಗುತ್ತಿಲ್ಲ. ಕಿಟಕಿಯಿಂದ ತೂರಿ ಅಣ್ಣನ ಮಕ್ಕಳ ಉಸುಕಿನ ಮನೆಯಮೇಲೆ ಬಿದ್ದ ಹಾಳೆ ಮಡಚಿ ರಾಕೆಟ್ ಆಗಿ ಮತ್ತೆ ಕಿಟಕಿಯನ್ನು ತೂರಿಬಂದು ನನ್ನ ತೋಳನ್ನು ಚುಚ್ಚುತ್ತಿದ್ದಂತೆ ಎಚ್ಚರವಾಯ್ತು.” ಹಾಳೆಯ ಜೊತೆಗೆ ಹಾರಿಹೊಗಿದ್ದ ನಿದ್ರೆಯನ್ನು ಕಾಯುತ್ತಾ ಯಾವುದೋ ಪುರವಣಿ ಓದುತ್ತಿದ್ದಾಗಶುಭ ಶಕುನ ಎನ್ನುವಂತೆ ಇಂಡಿಯನ್ ನ್ಯಾಶಿನಲ್ ಕಮಿಟಿ ಆಫ್ ರಿಸರ್ಚನ ಜಾಹಿರಾತು. ಅಂಗೀಕೃತ ವಿಶ್ವವಿದ್ಯಾಲಯದಿಂದ ಪಡೆದ ಪಿ.ಹೆಚ್.ಡಿ ಪದವಿಯನ್ನು ಮಂಡಿಸುವ ಅವಕಾಶ ಕಲ್ಪಿಸಿತು. ಒಂದುವೇಳೆ ಅಧ್ಯಯಕ್ಕೆ ಶಾಸ್ತ್ರವಾಗುವ ಅರ್ಹತೆ ಇದ್ದಲ್ಲಿ ಭಾರತದ ಪ್ರಸಿದ್ಧ ವಿಶ್ವವಿದ್ಯಾಲಯದಲ್ಲಿ ಆ ವಿಷಯವಾಗಿ ಪದವಿಯನ್ನು ತೆರೆಯುವ ಯೋಜನೆ ಮತ್ತು ಅರ್ಹ ಅಧ್ಯಯನಗಳಿಗೆ ಉತ್ತಮ ಸಂಭಾವನೆ ಕೊಡುವುದಾಗಿ ಘೋಶಿಸಿತ್ತು.

ಕಮಿಟಿಯ ಈ ವೇದಿಕೆಯಲ್ಲಿ ಭಾಗವಹಿಸಲು ದೆಹಲಿ ಪ್ರಯಾಣಕ್ಕೆ ಸಜ್ಜಾದೆ. ಅಲ್ಲಿ ವೈಜ್ಞಾನಿಕ ಮತ್ತು ಉಚ್ಛಮಟ್ಟದ ಸಿದ್ದಾಂತಗಳ ಜೊತೆಗೆ ಹಗುರವಾದ ವಿಷಯಗಳೂ ಮಂಡನೆಯಾದವು. ನನ್ನ ವಿಷಯದ ಮಂಡನೆನಂತರ ದಲ್ಲಾಲಿಯೊಬ್ಬ ಬಂದು ಸಂಭಾವನೆಗೆ ಅರ್ಹತೆ ಪಡೆಯಲು ಇದ್ದ ಹಣದಿಂದ ತೆರೆದುಕೊಳ್ಳುವ ಹಿಂಬಾಗಿಲಬಗ್ಗೆ ವಿವರಿಸಿದ. ನಾನು ಅದನ್ನು ಸುಮ್ಮನೆ ಬಿಡದೆ ತಗಾದೆ ತೆಗೆದು ಮುಖ್ಯಸ್ತರ ಗಮನಕ್ಕೆ ತಂದೆ. ಯಾವುದೋ ದೊಡ್ಡ ಅನಾಹುತವಾದಂತೆ ನಟಿಸಿ ಅವನಿಗೆ ತಕ್ಕ ಶಾಸ್ತಿಮಾಡುವುದಾಗಿ ಹೇಳಿ ಸಮಾಧಾನಮಾಡಿ ಕಳುಹಿಸಿದರು. ನನ್ನ ಘನಕಾರ್ಯದ ಫಲ ಕೊನೆಯ ದಿನದ ಚರ್ಚೆಯಲ್ಲಿ ಸಿಕ್ಕಿತು. ನಿನ್ನ ಈ ಮೂಢನಂಬಿಕೆಯ ಪುಸ್ತಕಕ್ಕ್ಕೆ ಡಾ||  ಪದವಿ ನೀಡಿದ ವಿಶ್ವವಿದ್ಯಾಲಯದ್ದೇ ತಪ್ಪು, ಇಂತಹ ವಿಷಯಗಳಿಗೆ ಹೇಗೆ ಡಾ|| ಕೊಟ್ರು ಎಂದು ಅವಮಾನಿಸಿ ಕಳಿಸಿದರು. ಈ ವೇದಿಕೆಯಿಂದ ನಾನೇನೂ ಬಯಸಿದ್ದಿಲ್ಲ, ಆದರೂ ಅವಮಾನಗೊಂಡಮನಸ್ಸು ಬೇಸರದಲ್ಲಿ ನೆಂದು ನಡಗುತ್ತಿತ್ತು. ಇನ್ನೂ ಎರಡ್ಮೂರು ದಿನ ಇದ್ದು ದೆಹಲಿ ಸುತ್ತಿ ಊರಿಗೆ ಹೋದರಾಯ್ತು ಅಂದುಕೊಂಡಿದ್ದೆ. ಬೇಸರ ಮನಸ್ಸಿನ ಉತ್ಸಾಹವನ್ನು ಕರಗಿಸಿದ್ದರಿಂದ ಊರಿಗೆ ಪ್ರಯಾಣ ಬೆಳೆಸಿದೆ.

ನೊಂದ ಮನಸ್ಸು ನಿದ್ರೆಯ ಸವಿಯನ್ನು ಮೂಸುತ್ತಿದ್ದಂತೆ ಬೇಡದ ಅಥಿತಿಯಂತೆ ಬಂದ ಕನಸು ಮುಂದುವರೆಯಿತು. “ಅತ್ತಿಗೆ ತನ್ನ ಮಕ್ಕಳಿಗೆ ಮಂಡಕ್ಕಿ ಕಲಿಸಿಕೊಡಲು ಆ ಪುಸ್ತಕದ ಹಾಳೆಗಳನ್ನೇ ಹರಿದು ಪಟ್ಟಣ ಸುತ್ತುತ್ತಿದ್ದಾಳೆ, ತಿಂದವರು ಅದೇ ಪುಸ್ತಕದ ಹಾಳೆಗಳಿಂದ ಕೈ ತಿಕ್ಕಿಕೊಳ್ಳುತ್ತಿದ್ದಾರೆ, ನಾನೂ ಸಹ. ಕಷ್ಟಪಟ್ಟು ಅಧ್ಯಯನ ಮಾಡಿ ಬೇಡದ ಅವಮಾನದ ರುಚಿ ತೋರಿಸಿದ್ದ ಪುಸ್ತಕ, ಶಕುನದ ಪುಸ್ತಕದ ಸ್ಥಿತಿ ಅದಕ್ಕೇ ತಡೆಯಲಾಗಲಿಲ್ಲ. ಸಿಟ್ಟಿನಿಂದ ಹಾಳೆಯೊಂದು ನನ್ನ ಕೈ ಕಚ್ಚಿ ತೇಲಿ ದೂರ ಹೋಯಿತು” ಅದನ್ನು ಹಿಂಬಾಲಿಸಿದ ನಿದ್ರೆ ಎಚ್ಚರಗೊಂಡಿತು.  ಕಣ್ಣು ಬಿಟ್ಟೊಡನೆ ವಾಸ್ತವ ಅರ್ಥವಾಗುವಷ್ಟರಲ್ಲಿ ಮನಸ್ಸಿನ ಬೇಸರವೂ ಒಂದು ಶಕುನ ಎಂಬ ಸತ್ಯ ತಿಳಿಯಿತು.ನಾನು ಪ್ರಯಾಣ ಮಾಡುತ್ತಿದ್ದ ರೈಲು ಅಪಘಾತವಾಗಿತ್ತು. ನಾನೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ. ಆ ಶಕುನದ ಪುಸ್ತಕ ಆರೀತಿ ಉಪಯೋಗವಾಗಬಾರದು ಎಂದುಕೊಂಡೆ. ಕಮಿಟಿಯಲ್ಲಿ ನನಗಾದ ಅವಮಾನ ಸೇಡಾಗಿ ಪರಿಣಮಿಸಿತ್ತು ಹೇಗಾದರೂ ಮಾಡಿ ನನ್ನ ಸೇಡನ್ನು ತೀರಿಸಿಕೊಳ್ಳಬೇಕು ಎನ್ನಿಸಿತು.

ನನ್ನ ಎದುರಿಗೆ ಬಲಮೂಲೆಯಲ್ಲಿ ಮಲಗಿದ್ದ ಪ್ರಯಾಣಿಕನ ಕಡೆಯವರು ಅವನನ್ನು ನೋಡಲು ಬಂದಾಗ, ಅವನು ಹುಚ್ಚನಂತೆ ಆಡಿದ. ಬಹುಶಃ ತಲೆಗೆ ಏಟು ಬಿದ್ದಿದ್ದರಿಂದ ಅವನು ಆರೀತಿ ಮಾಡುತ್ತಿರಬಹುದು ಎಂದು ವೈದ್ಯರು ಅವನ ಕುಟುಂಬದವರನ್ನು ಸಮಾಧಾನ ಮಾಡುತ್ತಿದ್ದರು. ಮರು ಕ್ಷಣವೇ ನನ್ನ ಕಿವಿಯಲ್ಲಿ ಹಾಳೆಗಳ ಶಬ್ದ ಪ್ರಾರಂಭವಾಯಿತು. ಅವಮಾನಿಸಿ ನನ್ನ ಬೆನ್ನ ಹಿಂದೆ ನಕ್ಕ ಆ ಕಮಿಟಿ ಸದಸ್ಸರ ಮುಖಚಿತ್ರಗಳು ಮನಸ್ಸಿನಲ್ಲಿ ಮೂಡುತ್ತಿದ್ದಂತೆ ಮನಸ್ಸು ವಿಕಾರವಾಯಿತು. ಸೇಡಿನ ಬೀಜ ಮೊಳೆತು ಗಿಡವಾಗಿ ಹೂಬಿಟ್ಟಿತ್ತು. ಸೇಡಿನ ಹೂವಿನ ಬಣ್ಣವಿಲ್ಲದ ದಳ “ನೀನೂ ಆ ಹುಚ್ಚನಂತೆ ನಟಿಸು ಆಗ ನಿನ್ನ ಜೀವನದ ಜವಾಬ್ದಾರಿಗಳೆಲ್ಲಾ ಅಳಸಿ ನಿನ್ನ ಸಂಶೋಧನೆಗೆ ಹೆಚ್ಚು ಸಮಯ ಸಿಗುತ್ತದೆ. ನಿನ್ನ ಶ್ರಮಕ್ಕೆ ಅವಮಾನಿಸಿದವರಿಗೆ ನೀನಾರು ಎಂದು ತೋರಿಸಲು ಸಾಧ್ಯವಾಗುತ್ತದೆ. ನೀನು ನಿನ್ನ ಕುಟುಂಬದವರ ಕಣ್ಣಮುಂದಿದ್ದರೆ ಅವರಿಗೆ ಅದೇ ಸಾಕು. ಯೋಚಿಸಬೇಡಅಪ್ಪ, ಅಣ್ಣ ಬರುತ್ತಿದ್ದಾರೆ. ನೀನಿನ್ನು ಹುಚ್ಚ, ಅಷ್ಟೇ ನಟಿಸು. ನಾಳೆ ನಿನ್ನ ಶಕುನ ಶಾಸ್ತ್ರವಾಗಿ ನಿಂತಾಗ ಅದರ ಟೊಂಗೆಗೇ ನಿನ್ನ ಶತೃಗಳು ನೇಣು ಬಿಗಿದುಕೊಳ್ಳುತ್ತಾರೆ, ನೀನೀಗ ಹುಚ್ಚನಷ್ಟೇಹುಚ್ಚನಂತೆ ಯಾರಿಗೂ ಅನುಮಾನ ಬರದಂತೆ ನಟಿಸು” ಎಂದು ಪಿಸುಗುಟ್ಟಿ, ಅಣ್ಣನಹಿಂದೆ ಅಡಗಿ ಮಾಯವಾಯಿತು. ಹುಚ್ಚನಂತೆ ನಟಿಸಿದೆ, ಒಂದು ತಿಗಳಲ್ಲೇ ಅತ್ತು ಸುಮ್ಮನಾಗಿ ನನ್ನ ಕೋಣೆಯಲ್ಲಿ ಬಿಟ್ಟು ತಮ್ಮ ಕೆಲಸಗಳಲ್ಲಿ ಮಗ್ನರಾದರು.

ನಾನು ನನ್ನ ಅಧ್ಯಯನವನ್ನು ಕೋಣೆಯ ನಾಲ್ಕು ಗೋಡೆಯ ಮಧ್ಯೆ ಪ್ರಾರಂಭಿಸಿದೆ. ಮೂರು ಹೊತ್ತು ಊಟ ಒಳ್ಳೆ ನಿದ್ರೆ ಸಂಜೆ ಮನೆಯ ಹಿಂದಿನ ಮೈದಾನದಲ್ಲಿ ಸುತ್ತಾಟ. ಯಾರಾದರೂ ನನ್ನ ಹುಚ್ಚಿನ ನಾಟಕವನ್ನು ಅನುಮಾನಿಸಿದರೆ, ಓಡಿಬಂದು ಮನೆಯಹೊರಗೆ ನಿಂತು ಏ ಬಿಲ್ಡಿಂಗ್ ಬಿಳ್ತದೆ ಎಲ್ಲರೂ ಹೊರಗಡೆ ಬರ್ರೀ ಎಂದು ಜೋರಾಗಿ ಕಿರುಚುತ್ತಿದೆ. ಅನುಮಾನಿಸಿದರವರಿಗೆ ಖಚಿತವಾಗುತ್ತಿತ್ತು ಉಳಿದವರಿಗೆ ಇವನಿಗೆ ಹುಚ್ಚು ಜಾಸ್ತಿಯಾಗಿದೆ ಅನ್ನಿಸುತ್ತಿತ್ತು. ಅದೇ ವೇಳಾಪಟ್ಟಿಯಲ್ಲಿ ನಾಲ್ಕೈದು ವರ್ಷಗಳನ್ನು ಕಳೆದೆ. ಶಕುನಗಳ ಬಗ್ಗೆ ಅಧ್ಯಯನ ನನಗೆ ತುಂಬಾ ಕುತೂಹಲಕಾರಿ ವಿಷಯಗಳನ್ನು ತೆರೆದಿಟ್ಟಿತ್ತು. ತಾತನ ಚಿತ್ರಗಳಪೈಕಿ ಅನೇಕವು ಅರ್ಥವಾಗಿದ್ದವು ಪ್ರತಿ ಶಕುನದ ಹಿಂದಿನ ರಹಸ್ಯ ತಿಳಿಯುವಷ್ಟು ಎನ್ನುವಂತಿರಲಿಲ್ಲ. ತಾತನು ಕೊನೆಯ ಅಧ್ಯಾಯದಲ್ಲಿ ಪ್ರಾಣಿಗಳು ಈ ರೀತಿನ ಶಕುನಗಳನ್ನು ಬೇಗನೇ ಪತ್ತೆಹಚ್ಚುವುದರ ಜೊತೆಗೆ ಅಪಾಯವಿದ್ದಲ್ಲಿ ರಕ್ಷಿಸಿಕೊಳ್ಳುತ್ತವೆ. ಮುಂದೆ ಆಗುವ ಅಪಘಾತ, ಅನಾಹುತಗಳÀ ಬಗ್ಗೆ ಮನುಶ್ಯನಿಗಿಂತ ಪ್ರಾಣಿಗಳಿಗೇ ಮೊದಲು ತಿಳಿಯುತ್ತವೆ. ಭೂಕಂಪವಾಗುವ ಮುನ್ನ ಎಲ್ಲಾ ನಾಯಿಗಳೂ ಜೋರಾಗಿ ಬೊಗಳುತ್ತವೆ. ಹಾಗೇ ಎಲ್ಲಾ ಪ್ರಾಣಿಗಳಿಗೂ ಈ ವಿಶೇಷ ಶಕ್ತಿ ಇರುತ್ತದೆ. ಮನುಶ್ಯನಿಗೆ ಈ ಶಕ್ತಿ ಬರಬೇಕೆಂದರೆ ಬಹುಶಃ ಅವನೂ ಪ್ರಾಣಿಯಂತೆ ಎಲ್ಲಾ ಬಂಧನಗಳನ್ನು ಬಿಟ್ಟು ಸ್ವತಂತ್ರವಾಗಿ ಜೀವಿಸಿದಾಗ ಅಂದರೆ ಕಾಡಿನಲ್ಲಿ ತಾನೂ ಒಂದು ಪ್ರಾಣಿಯಂತೆ ಜೀವನ ನಡೆಸಿದಾಗ, ಅವನೂ ಒಂದು ಪ್ರಾಣಿಯಂತೆ ಪ್ರಕೃತಿಯಲ್ಲಿ ಬೆರೆತಾಗ ಪ್ರಕೃತಿಯೇ ಅವನಿಗೆ ಶಕುನಗಳನ್ನು ಪತ್ತೆಹಚ್ಚುವುದನ್ನು ಹೇಳಿಕೊಡುತ್ತದೆ ಎಂದು ಪ್ರಾಸ್ತಾಪಿಸಲಾಗಿತ್ತು.

ಅದರಂತೆ ನಾನೂ ಸಹ ಕಾಡಿಗೆ ಹೋಗಿ ಪ್ರಾಣಿಯಂತೆ ಜೀವಿಸುವುದೆಂದು ನಿರ್ಧಾರ ಮಾಡಿದೆ. ಅಧ್ಯಯನಕ್ಕೆ ಬೇಕಾದ ಸಾಮಗ್ರಿಗಳನ್ನು ಜೊಡಿಸಿಕೊಂಡು ಒಂದು ದಿನ ರಾತ್ರಿ ಮನೆಯಿಂದ ಹೊರಬಂದವನು ಯಾವುದೋ ರೈಲ್ ಹತ್ತಿ ಎಲ್ಲೋ ಇಳಿದು ಯಾವುದೋ ಕಾಡಿಗೆ ಹೋದೆ. ಕಾಡಿನಲ್ಲಿ ನಾನು ಒಂದು ಪ್ರಾಣಿಯಂತೆ ಬದುಕಿದೆ. ಸುಮಾರು ಎಂಟು ವರ್ಷಗಳಿಗೂ ಹೆಚ್ಚು ಕಾಲ ಗೆಡ್ಡೆ ಗೆಣಸು, ಎಳೆ ಪ್ರಾಣಿಗಳ ಮಾಂಸ ತಿನ್ನುತ್ತಾ ಕಾಡಲ್ಲಿದ್ದೆ. ನಗ್ನವಾಗಿ ಒಂದು ಕಾಡು ಪ್ರಾಣಿಯಂತೆ ಜೀವನ ನಡೆಸಿದೆ. ಮಾತು ಮರೆತೆ, ಶಕುನ ಕಲಿತೆ, ಮುಂದೆ ಆಗಬಹುದಾದ ಎಲ್ಲಾ ಸಂಗತಿಗಳು ತಿಳಿಯತೊಡಗಿದವು. ಪ್ರಾಣಿಗಳು ಮಾನವನಿಗಿಂತ ಮುಂದುವರೆದಿವೆ ಎಂದು ತಾತನ ಬಾಯಿಂದ ಕೇಳಿದ್ದೆ ಆದರೆ ಸತ್ಯವಾಗಿ ಕಾಡಲ್ಲಿ ಪರೀಕ್ಷಿಸಿದೆ. ಕಾಡಲ್ಲಿ ಅನೇಕ ವಿಸ್ಮಯಗಳನ್ನು ನೋಡಿದೆ, ಅನುಭವಿಸಿದೆ.

ಒಮ್ಮೆ ಕಾಡಲ್ಲಿ ನಡೆದುಹೋಗುತ್ತಿರುವಾಗ, ಒಂದು ಮಂಗ ನನ್ನೆದುರುಗಿನ ಮರದ ಮೇಲೆ ಕುಳಿತು ನನ್ನನ್ನು ನೋಡುತ್ತಾ ಜೋರಾಗಿ ಕೂಗತೊಡಗಿತು. ಈ ಮಂಗನ ಜೊತೆಗೆ ಅಳಿಲುಗಳು ತಮ್ಮ ಗೂಡಿನೊಳಗಿಂದಲೇ ಕಿಚಿಪಿಚಿ ಸದ್ದು ಮಾಡುತ್ತಿದ್ದವು. ಏನಿದು ಎಂದು ಯೋಚಿಸುವಷ್ಟರಲ್ಲಿ ಯಾವುದೋ ಪ್ರಾಣಿಯ ಕೊಳೆತ ಮಾಂಸದ ವಾಸನೆ ಮೂಗನ್ನು ಮುಚ್ಚುವಂತೆ ಮಾಡಿತು. ನಾನು ಮೂಗು ಮುಚ್ಚಿಕೊಂಡು ಮುಂದೆ ನಡೆದೆ ಕೋತಿ ಅಳಿಲುಗಳ ಕಿರುಚುವ ಶಬ್ದ ಜೋರಾಗಿ ಮತ್ತೆ ಸುಮ್ಮನಾದವು. ಆ ಪ್ರಣಿಗಳು ನನಗೆ ಏನೋ ಹೇಳುತ್ತಿವೆ ಅಂತ ಗೊತ್ತಾದ ತಕ್ಷಣ ನಿಂತುಬಿಟ್ಟೆ. ಬಹಳ ಎಚ್ಚರದಿಂದ ಹೆಜ್ಜೆಗಳನ್ನು ನಿಧಾನವಾಗಿ ಇಟ್ಟು ಚಲಿಸತೊಡಗಿದೆ. ಕಣ್ಣಮುಂದೆಒಂದು ಭಯಾನಕ ದೃಷ್ಯನಿಂತಿತ್ತು. ಒಂದು ಊಬು, ಅದರ ಸುತ್ತ ಸತ್ತ ಪ್ರಾಣಿಗಳ ಅರೆಬರೆ ತಿಂದ, ಗಬ್ಬು ನಾರುವ ಮಾಂಸದಮುದ್ದೆಗಳು. ಅಲ್ಲಿಂದ ಹಿಂದಕ್ಕೆ ಬಂದು ಮರದ ಕೆಳಗೆ ಕೂತು ಯೋಚಿಸತೊಡಗಿದೆ. ಆ ಯೋಚನೆ ನನ್ನನ್ನು ವಶೀಕರಿಸಿದಂತಾಗಿ ಅಲೆದಾಡಿದೆ, ನನಗೇ ತಿಳಿಯದಂತೆ ನಾನು ಪ್ರಜ್ಞಾಹೀನನಾಗಿ ಒಂದು ಕಾಡು ಪ್ರಾಣಿಯಂತೆ ಜೀವನ ನಡೆಸಲಾರಂಭಿಸಿದೆ. ಆನೆಯ ಘೀಳು, ನರಿಯ ಔಲು, ಕತ್ತೆಯ ಕಿರುಚಾಟ, ಹೇಸರಗತ್ತೆಯ ನಗು ಎಲ್ಲವೂ ಅರಿತೆ ಅವುಗಳ ಧ್ವನಿ ಸಂಕೇತಗಳನ್ನು ಪತ್ತೆಹಚ್ಚಿ ಅಪಾಯಗಳಿಂದ ಪಾರಾಗಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡೆ.

      ಬಹುಶಃ ನನ್ನ ಶಕ್ತಿ ಯಾವಕ್ರೂರ ಮೃಗಗಳಿಗೂ ಕಡಿಮೆ ಇಲ್ಲ ಅನ್ನಿಸುವಂತೆವರ್ತಿಸುತ್ತಿದ್ದೆ. ಕಾಡುಹಂದಿಗಳ ಜೊಗೆ ಕಾದಾಟ, ನರಿಯ ಬಾಯಿ ಸಿಗಿದದ್ದು ಒಂದೇ ಎರಡೇ ಎಷ್ಟೋ ಬಾರಿ ನನ್ನ ಮೇಲೆ ಆಕ್ರಮಣ ಮಾಡಿದ ಪ್ರಾಣಿಗಳನ್ನು ಕೊಂದು ಅವನ್ನೇ ತಿಂದೆ. ಒಮ್ಮೆ ಒಂದು ನರಿಯ ಜೊತೆ ಕಾದಾಡುವಾಗ ಬೆನ್ನು, ತೊಡೆ ಮತ್ತು ತೋಳುಗಳಮೇಲೆ ಆದ ಪಂಜಿನ ಗೀರುಗಳಿಂದ ಅಧಿಕ ರಕ್ತಸ್ರಾವವಾಗಿ ಜ್ವರಬಂದು ಬಹಳದಿನಗಳ ವರೆಗೆ ನರಳಿದ್ದೆ, ಅದೇ ಕಡೆ ಮುದೆ ಯಾವತ್ತೂ ಯಾವ ಪ್ರಾಣಿಯೊಡನೆಯೂ ಕಾದಾಟವಾಗಲಿಲ್ಲ. ಏಕೆಂದರೆ ಅದು ಯಾವುದೋ ಶಕ್ತಿ ನನಗೆ ಮುನ್ಸೂಚನೆ ಕೊಟ್ಟುಬಿಡುತ್ತಿತ್ತು. ಆಕ್ರಮಣಕ್ಕೆ ಯಾವುದೇ ಪ್ರಾಣಿ ಬರುತ್ತಿದೆ ಇಲ್ಲಿಂದ ತಪ್ಪಿಸಿಕೊಳ್ಳಬೇಕು ಎಂದು ಮತ್ತು ನನಗೆ ಪ್ರಾಣಿಗಳ ಕೂಗಾಟ ಹಾಗೂ ಬೀಸುವ ಗಾಳಿಯಲ್ಲಿನ ವಾಸನೆಯ ವೆತ್ಯಾಸವೂ ತಿಳಿಯುತ್ತಿತ್ತು. ಹೀಗೇ ಅಲೆಯುತ್ತಾ ಕಾಡುಮನುಶ್ಯನ ರೀತಿ ಜೀವನ ಸಾಗಿಸುತ್ತಿದ್ದೆ.

ಮೊದಮೊದಲು ಮನೆಯವರನ್ನು ನೆನೆದು ಅಳುತ್ತಿದ್ದೆ. ಅವರ ನೆನಪು ಬಂದು ಕಾಡಿನಿಂದ ಓಡಿಹೋಗಲು ಪ್ರಯತ್ನವೂ ಪಟ್ಟೆ ಆದರೆ ಪ್ರತಿ ಪ್ರಯತ್ನದಿಂದ ಹೊಸ ವಿಚಾರಗಳು ಹೊಳೆದು ಆ ಕಾಡಲ್ಲಿ ನಾನು ಉಳಿಯುವಂತೆ ಮಾಡಿದವು. ನಾನು ಕಾಡಿಗೆ ಬಂದು ಸುಮಾರು ವರ್ಷಗಳು ಕಳೆದಿದ್ದವು ಎನ್ನಬಹುದು. ಆಗ ಕಾಡಿನಲ್ಲಿದ್ದ ಅಲೆಯುವಾಗ ಯಾವುದೋ ದೇವಿಯ ದೇವಸ್ಥಾನ ಕಾಣಿಸಿತು. ಅಲ್ಲಿ ಯಾರೋ ಮನುಶ್ಯ ವಾಸಿಸುತ್ತಿರುವಹಾಗೆ ಕಂಡಿತು. ಗುಡಿಯ ಹತ್ತಿರದಲ್ಲಿ ಕಟ್ಟಿಗೆ ಮತ್ತು ಹುಲ್ಲಿನಿಂದ ಕಟ್ಟಿದ ಗುಡಿಸಲಿತ್ತು. ಅಲ್ಲಿ ಒಬ್ಬ ಮುದಿ ಸ್ವಾಮೀಜೀ ವಾಸಿಸುತ್ತಿದ್ದ. ಮರೆಯಲ್ಲಿ ನಿಂತು ನಾಲ್ಕೈದು ದಿನ ಅವನ ಓಡಾಟವನ್ನು ಗಮನಿಸಿದೆ. ಅವನು ನೀರಿನಿಂದ ದೇವಿ ಮೂರ್ತಿಯನ್ನು ತೊಳೆದು ಹೂಗಳಿಂದ ಪೂಜೆ ಮಾಡಿ. ಹಣ್ಣುಗಳನ್ನು ಎಡೆ ಇಡುತ್ತಿದ್ದ. ಅವನು ಗುಡಿಯಿಂದ ತನ್ನ ಬಿಡಾರಕ್ಕೆ ಹೋಗಿ ಧ್ಯಾನ ಮಗ್ನನಾಗಿ ಕುಳಿತುಕೊಳ್ಳುತ್ತಿದ್ದ. ಆಗ ದೇವಿಗೆ ಇಟ್ಟಿದ್ದ ಹಣ್ಣುಗಳನ್ನು ನಾನು ತಿನ್ನುತ್ತಿದ್ದೆ. ಬರಬರುತ್ತಾ ಆ ಸ್ವಾಮೀಜಿಗೆ ಅನುಮಾನ ಪ್ರಾರಂಭಿಸಿತು. ಅವನು ಒಂದು ದಿನ ಹಣ್ಣುಗಳನ್ನು ಇಡಲಿಲ್ಲ. ನಾನು ಅವನ ಬಿಡಾರದ ಹತ್ತಿರ ಹೋದೆ. ಯಾರು ಇಲ್ಲವೆಂದು ಭಾವಿಸಿ ಗುಡಿಸಲ ಒಳಗೆ ಹೋದೆ, ಧ್ಯಾನಮುದ್ರೆಯಲ್ಲಿಕುಳಿತ ಅವನು ನನ್ನನ್ನು ನೋಡಿದೊಡನೆಯೇ ಬೆಚ್ಚಿಬಿದ್ದ. ನಾನು ಮೂಲೆಯಲ್ಲಿಟ್ಟಿದ್ದ ಹಣ್ಣಿನ ಪುಟ್ಟಿಯನ್ನು ಹಿಡಿದು ಹೊರಗಡೆ ಓಡಿಬಂದು ಗುಡಿಯ ಎದುರಿಗಿನ ಕಲ್ಲುಬಂಡೆಯ ಮೇಲೆ ಕುಳಿತು ತಿನ್ನುತ್ತಿದ್ದೆ. ಅವನು ನನ್ನೊಡನೆ ಸ್ನೇಹಮಾಡಬಯಸಿದ್ದನು ಎಂದು ಅರಿವಾಯ್ತು ಅವನ ಗುಡಿಸಲಲ್ಲೇ ವಾಸಮಾಡಲಾರಂಭಿಸಿದೆ. ಅವನು ನನಗೆ ಸ್ನಾನ ಮಾಡಿಸಿ ತನ್ನ ಬಟ್ಟೆಗಳನ್ನು ಉಡಿಸಿದ. ಅವನ ಮಾತುಗಳು ನನಗೆ ಅರ್ಥವಾಗುತ್ತಿದ್ದವು ಆದರೆ ಉತ್ತರಿಸಲು ನನಗೆ ಭಾಷೆ ಮರೆತುಹೋಗಿತ್ತು. ಅವನು ನನಗೆ ಮತ್ತೆ ಭಾಷೆ ಕಲಿಸಿದ. ನಾನು ನನ್ನ ಹಿಂದಿನ ಜೀವನವನ್ನು ಹೇಳಿದೆ.

ಅವನ ಜೀವನವನ್ನೂ ಕೇಳಿದೆ ಅವನ ಹೆಸರು ಆತ್ಮಾನಂದ ಹಾಗೂ ಅವನು ಸುಮಾರು ನೂರು ವರ್ಷಕ್ಕೂ ಹೆಚ್ಚಿನ ವಯಸ್ಸಾದವನು ಎಂದು ಹೇಳಿಕೊಂಡಿದ್ದ. ತಾನು ಸಾಯುವ ಮೊದಲು ಇಲ್ಲಿಗೆ ಯಾರೋ ಬರುತ್ತಾರೆ ಎಂದು ದೇವಿಯ ಸಂದೇಶವಿತ್ತು ಎಂದು ಹೇಳಿದ. ಸುಮಾರು ಒಂದು ವರ್ಷ ನಾನು ಅವನೂ ಒಟ್ಟಿಗೇ ಜೀವನ ಮಾಡಿದೆವು. ಅವನಿಂದ ನನಗೆ ಮರುಜನ್ಮವಾದಂತಾಯಿತು. ನಾನು ಮರೆತ ಭಾಷೆ ನೆನಪುಗಳನ್ನು ಮರಳಿ ನನಗೆ ತಂದುಕೊಟ್ಟವನು ಎಂದು ನನಗೆ ಅವನಲ್ಲಿ ಗೌರವ ಮತ್ತು ಅಭಿಮಾನವಿತ್ತು. ನನಗೆ ತಿಳಿಯುತ್ತಿದ್ದ ಶಕುನಗಳನ್ನು ಅವನಿಗೆ ಹೇಳುವ ಮುನ್ನ ಅವನು ಅರ್ಥವನ್ನು ಬಿಡಿಹೇಳುತ್ತಿದ್ದ. ಒಂದು ದಿನ ಮುಂಜಾನೆ ಅವನನ್ನು ನನ್ನಿಂದ ಎಬ್ಬಿಸಲು ಆಗಲಿಲ್ಲಾ ತೀರಿಕೊಂಡಿದ್ದ. ಅವನನ್ನು ಗುಂಡಿತೋಡಿ ಮುಚ್ಚಿ ಅಂತ್ಯಸಂಸ್ಕಾರ ಮಾಡುತ್ತಿದ್ದಂತೆ ನನಗೆ ಬೇಸರ ಕಾಡಿತು. ಒಂದು ವರ್ಷ ಮಾನವನ ಜೊತೆಗಿದ್ದ ಒಡನಾಟ ಸುಮಾರು ಏಳು ವರ್ಷಗಳು  ಪ್ರಾಣಿಗಳೊಡನೆ ಇದ್ದ ಸಂಬಂಧಗಳನ್ನು ಅಳಸಿಹಾಕಿತ್ತು. ಕಾಡಿನಲ್ಲಿ ಏಕಾಂಗಿಯಾದಂತೆ ಅನ್ನಿಸಿತು. ಹೆಚ್ಚೆಂದರೆ ಒಂದು ತಿಂಗಳೂ ನಾನು ಆ ಕಾಡಿನಲ್ಲಿ ಇರಲು ಸಾಧ್ಯವವಾಗಲಿಲ್ಲ. ಅವನ ಬಟ್ಟೆ ಬರೆಗಳನ್ನು ಒಂದು ಚೀಲದೊಳಕ್ಕೆ ಹಾಕಿಕೊಂಡು ಗುಡಿಸಲು ಖಾಲಿಮಾಡಿ ಒಂದೇ ದಿಕ್ಕಿನಲ್ಲಿ ಪ್ರಯಾಣ ಮಾಡಲಾರಂಭಿಸಿದೆ.

ಹತ್ತು ಹದಿನೈದುದಿನಗಳಲ್ಲೇ ನಾನು ಕಾಡಿನಲ್ಲಿ ಬರುವಾಗ ಎದುರಾದ ಗುರುತುಗಳು ಕಂಡವು. ನಾನು ಸರಿದಾರಿಯಲ್ಲಿ ಹೋಗುತ್ತಿದ್ದೇನೆ ಎಂದು ಇನ್ನೂ ಜೋರಾಗಿ ಹೆಜ್ಜೆಇಟ್ಟು ಸಾಗಿದೆ. ಒಂದು ನಡುರಾತ್ರಿ ತಂತಿಯ ಬೇಲಿ ಜಿಗಿದು ಒಂದು ದೊಡ್ಡ ರಸ್ತೆಯಮೇಲೆ ನಡೆದುಕೊಂಡು ಹೋಗುತ್ತಿದ್ದೆ. ಯಾವುದೋ ವಾಹನದ ಸದ್ದು ಕೇಳಿಸಿತು. ಹೆದರಿ ಬಚ್ಚಿಟ್ಟುಕೊಂಡೆ ನಂತರ ಅದೇ ರಸ್ತೆಯಲ್ಲಿ ಸಾಗಿದೆ. ಮತ್ತೊಂದು ವಾಹನ ಬಂತು ಈಬಾರಿ ಹೆದರಬಾರದೆಂದು ನಿಶ್ಚಯಿಸಿ ಹಾಗೆಯೇ ನಡೆದೆ.

ಯಾವುದೋ ಕೇಸರಿ ಬಣ್ಣದ ಮಠದ ದೊಡ್ಡ ಕಾರು ನನ್ನ ಪಕ್ಕದಲ್ಲಿ ಬಂದು ನಿಂತಿತು. ಕಾರಿನಿಂದ ಯಾವುದೋ ಸ್ವಾಮಿ ಇಳಿದು ನನ್ನನ್ನು ಯಾವ ಊರಿಗೆ ಹೊರಟಿದ್ದೀರಿ? ಎಂದು ಪ್ರಶ್ನಿಸಿದರು. ನನಗೆ ಗೊತ್ತಿದ್ದ ಊರು ಒಂದೇ ಶಾಹಪುರ ಎಂದೆ. ನಾವು ಅದೇ ದಾರಿಯಲ್ಲಿ ಹೋಗುತ್ತಿದ್ದೇವೆ ತಾವು ಬರಬಹುದು ಎಂದು ಕಾರಿನಲ್ಲಿ ಕೂರಿಸಿಕೊಂಡು ಹೊರಟರು. ಕಾರಿನ ವೇಗ ಅತಿಯಾಗಿದ್ದರಿಂದ ನನಗೆ ಹೆದರಿಕೆಯಾಯಿತು. ಬಹಳ ವರ್ಷಗಳ ಬಳಿಕ ವಾಹನದಲ್ಲಿ ಚಲಿಸುತ್ತಿರುವುದರಿಂದ ಉಬ್ಬಳಿಕೆ ಬರುತ್ತಿತ್ತು, ಅದಕ್ಕೆ ಸ್ವಾಮೀಜಿಯವರು ನಿಂಬೆಹಣ್ಣನ್ನು ಕೊಟ್ಟು ಅದರ ವಾಸನೆ ನೋಡುವಂತೆ ಹೇಳಿದರು. ಕಾರಿನ ವೇಗ ಜಾಸ್ತಿ ಇದ್ದುದರಿಂದ ಕಾರನ್ನು ಮೆಲ್ಲಗೆ ಓಡಿಸಲು ಕೇಳಿಕೊಂಡೆ. ಅದಕ್ಕೆಸ್ವಾಮೀಜಿಗಳು ಮೆಲ್ಲಗೆ ಹೋದ್ರೆ ಊರು ಯಾವಾಗ ಮುಟ್ಟಬೇಕು? ಅಂದು ನನ್ನನ್ನು ಸುಮ್ಮನಿರಿಸಿದರು. ಕಾರಿನ ವೇಗಕ್ಕೆ ಸರಿಯಾಗಿ ಯಾವುದೋ ಹಕ್ಕಿ, ಬಹುಶಃ ಶಕುನದ ಹಕ್ಕಿ ಕೂಗತೊಡಗಿತು. ಈ ಕಾರಿಗೆ ಕಾಡುಬೆಕ್ಕು ನನ್ನನ್ನು ಏರಿಸಿಕೊಳ್ಳುವ ಸ್ವಲ್ಪ ಹಿಂದೆಯೇ ಎದುರಾಗಿತ್ತು ಎಂದು ಅವರು ಮಾತನಾಡಿಕೊಳ್ಳುತ್ತಿದ್ದಂತೆ ನನ್ನ ಕಿವಿಯಲ್ಲಿ ಶಕುನವೊಂದು ಪಿಸುಗುಟ್ಟಿತು. ತಕ್ಷಣ ನಾನು ನನ್ನ ಕರ್ಕಶ ಧ್ವನಿಯಲ್ಲಿ ನಿಲ್ಸಿ ನಲ್ಸಿ ಎಂದು ಜೋರಾಗಿ ಕಿರುಚಿದೆ. ಒಂದು ತಿರುವಿನನಲ್ಲಿ ಕಾರನ್ನು ನಿಲ್ಲಿಸಿದರು. ನಾನು ಕಾರಿನಿಂದ ಇಳಿದು ಆಕಡೆ ಈಕಡೆ ನೋಡುತ್ತಿದ್ದಂತೆ ಧಬ್ ಎಂದು ಸಿಡಿಲಿನಂತೆ ಯಾವುದೋ ಶಬ್ದ ಕೇಳಿಸಿತು. ಶಬ್ದ ಬಂದ ದಿಕ್ಕಿನಲ್ಲೇ ಓಡಿದೆವು ತಿರುವು ಮುಗಿಯುತ್ತಿದ್ದಂತೆ ಎರಡು ಭಾರೀ  ಲಾರಿಗಳು ಒಂದನ್ನೊಂದು ಗುದ್ದಿಕೊಂಡು ರೋಡಿಗೆ ಅಡ್ಡಲಾಗಿ ನಿಂತಿದ್ದವು. ನಾವೇನಾದ್ರೂ ನಿಲ್ಲಿಸಿಲ್ಲಾ ಅಂದ್ರೆ ಯಾರು ಉಳಿತಿದ್ದಿಲ್ಲಾ ಅಂತ ಡ್ರೈವರ್ ಹೇಳಿದ ಕೂಡಲೇ ಸ್ವಾಮೀಜಿಯವರು ನನ್ನನ್ನು ತಬ್ಬಿಕೊಂಡು ಯಾರು ನೀನು ಎಂದು ಪ್ರಶ್ನಿಸಿದರು. ನನಗೆ ನನ್ನ ಹೆಸರೂ ತಕ್ಷಣ ಜ್ಞಾಪಕಕ್ಕೆ ಬರದೆ ಆತ್ಮಾನಂದ ಎಂದೊಡನೆ ಸ್ವಾಮೀಜಿಗಳು ನನ್ನ ಕಾಲಿಗೆ ಬಿದ್ದು “ತಮ್ಮನ್ನು ಗುರುತಿಸಲು ಆಗಲಿಲ್ಲಾ ಕ್ಷಮಿಸಿ. ತಮ್ಮ ತೇಜಸ್ಸು ಕಂಡಾಗಲೇ ಅಂದುಕೊಂಡೆ ತಾವುಗಳು ಮಹಾಯೋಗಿಗಳು ಎಂದು. ದಯವಿಟ್ಟು ಕ್ಷಮಿಸಿ”. ಎಂದು ಮತ್ತೆ ಕಾರನ್ನು ನಾವಿದ್ದಲ್ಲಿಗೆ ತರೆಸಿ ಬೇರೇ ದಾರಿಯಾಗಿ ಹೊರಟರು.

ಮುಂಜಾನೆಯ ಇಬ್ಬನಿ ಕರಗುವಷ್ಟರಲ್ಲಿ ಸುಖ ನಿದ್ರೆಯೂ ಆಗಿತ್ತು. ಊರು ತಲುಪುವಷ್ಟರಲ್ಲಿ ಊರಿನ ವಾತಾವರಣಕ್ಕೆ ದೇಹ ಒಗ್ಗಿಕೊಂಡಿತ್ತು. ನಾನು ಹೇಳಿದ ವಿಳಾಸದಲ್ಲಿ ನನ್ನನ್ನು ಇಳಿಸಿ ನನಗೆ ವಿಧಾಯ ಹೇಳಿ ಹೊರಟರು. ಕಾರು ದೂರವಾಗುತ್ತಿದ್ದಂತೆ ಮನಸ್ಸಿನಲ್ಲಿ ಒಂದು ಹೊಸರೀತಿಯ ಸಂತೋಷ ಪ್ರಾರಂಭವಾಯ್ತು. ಸಂಸಾರದ ಪರಿವಿಲ್ಲದೇ, ತಂದೆತಾಯಿ, ಅಣ್ಣ ಅಕ್ಕಂದಿರ ಪ್ರೀತಿ ಕಾಣದೇ ಸುಮಾರು ಹೆಚ್ಚುಕಡಿಮೆ ಒಂದು ದಶಕಕ್ಕಿಂತ ಹೆಚ್ಚಿನ ಸಮಯ ಒಂಟಿ ಜೀವನ ನಡೆಸಿದ್ದೇನೆ. ಹೇಳಲಾರದಷ್ಟುಸಂತೋಷ ಮನಸ್ಸಿನಿಂದ ಮುಗುಳ್ನಗೆಯಾಗಿ ಉಕ್ಕುತ್ತಿತ್ತು. ಅಲ್ಪಸ್ವಲ್ಪ ನೆನಪಿನಲ್ಲಿದ್ದ ವಿಳಾಸವನ್ನು ಕೇಳುತ್ತಾ ಗುರುತುಗಳ ಜಾಡುಹಿಡಿಯುತ್ತಾ ನಾನು ನನ್ನ ಕುಟುಂಬವಿದ್ದ ಮನೆಯ ಕಡೆ ಹೊರಟೆ. ಮೆದುಳಿನ ಯಾವುದೋ ಗೂಡಲ್ಲಿ ಜೇಡರ ಬಲೆಯಹಿಂದೆ ಧೂಳುಹಿಡಿದು ಬಿದ್ದಿದ್ದ ಅಪ್ಪ-ಅಮ್ಮ ಹಾಗೂ ಅಣ್ಣ-ಅತ್ತಿಗೆ ಮತ್ತು ಅವರ ಮಕ್ಕಳ ಮುಖಗಳನ್ನು ನೆನಪು ಮಾಡಿಕೊಳ್ಳುತ್ತಾ ಹೊರಟೆ. ಊರು ಬಹಳ ಬದಲಾಗಿ ಬೆಳೆದು ದೊಡ್ಡ ನಗರವಾಗಿತ್ತು. ಗುರುತುಗಳನ್ನು ಅಳಸಿ ಕಾಲೂರಿ ನಿಂತ ದೊಡ್ಡ ದೊಡ್ಡ ಕಟ್ಟಡಗಳು ಆಕಾಶಕ್ಕೆ ಅಡ್ಡವಾಗಿ ನಿಂತುಕೊಂಡಿದ್ದವು. ಕೊನೆಗೆ ಪೂರ್ವಕ್ಕೆ ಮುಖಮಾಡಿದ್ದ ನನ್ನ ಕುಟುಂಬ ವಾಸಿಸಿದ್ದ ಮನೆ ನನ್ನಕಣ್ಣಿಗೆ ಬಿದ್ದು ಮನೆಯ ಚಿತ್ರ ಅಳಸಿ ದೊಡ್ಡ ಕಟ್ಟಡ ಕಂಡಿತು. ಆ ಕಟ್ಟಡಕ್ಕೆ ಸುಮಾರು 50 ಹೆಜ್ಜೆ ದೂರದಲ್ಲಿದ್ದೆ. ಸಂತೋಷದಲ್ಲಿ ಮುಳುಗಿದ್ದೆ. ಕಟ್ಟಡದಲ್ಲಿ ಅನೇಕ ಕುಟುಂಬಗಳು ವಾಸವಿದ್ದುದು ಕಾಣುತ್ತಿತ್ತು. ಕಟ್ಟಡಕ್ಕೆ ಹತ್ತಿರವಾಗುತ್ತಿದ್ದಂತೆ ಮತ್ತೇ ಆ ಶಕುನ ಕಿವಿಯಲ್ಲಿ ಪಿಸುಗುಡಲು ಪ್ರಾರಂಭಿಸಿತು. ಕಟ್ಟಡದ ಮೇಲ್ಛಾವಣಿಯಿಂದಕಾಗೆಗಳು ದೂರ ಚದುರಿದವು. ಗಾಳಿಯ ಬೀಸುವಿಕೆಯಲ್ಲಿ ಏರುಪೇರಾಯಿತು. ನಾಯಿಗಳು ಜೋರಾಗಿ ಬೊಗಳಲು ಪ್ರಾರಂಭಿಸಿದವು. ಮೂರನೇ ಮಹಡಿಯಿಂದ ಜೋರಾಗಿ ಬೊಗಳುತ್ತಾ ಬಂದ ನಾಯಿ ಕಟ್ಟಡವನ್ನು ನೋಡುತ್ತಾ ಬೊಗಳಲು ಪ್ರಾರಂಭಿಸಿತು. ಕಟ್ಟಡದ ಕೋಣೆಗಳಿಂದ ಪಾತ್ರೆಗಳು ಬಿದ್ದ ಸದ್ದು ಕೇಳಿಸುತ್ತಿದ್ದಂತೆ, ಯಾವುದೋ ಕಾಡು ಪ್ರಾಣಿಯಂತೆ ದೂರದವರೆಗೆ ಕೇಳಿಸುವಂತೆ “ಎಲ್ಲರೂ ಹೊರಗಡೆ ಓಡಿ ಕೆಳಗೆ ಬನ್ನಿ” ಎಂದು ನಿಂಬೆಹಣ್ಣು ಹಿಡಿದ ಮುಷ್ಠಿಯನ್ನು ಎತ್ತಿ ಜೋರಾಗಿ ಕಿರುಚಿದೆ. ಕೇಳಿಸಿದವರು ತಕ್ಷಣ ಓಡಿಬಂದರು, ಕೇಳಿಸದವರು ಓಡಿಹೋಗುತ್ತಿರುವವರನ್ನು ನೋಡಿ ಕಟ್ಟಡದ ಎಲ್ಲಾ ಮನೆಗಳಿಂದ ಹೊರಬಂದು ನನ್ನ ಹಿಂದೆ ಗುಂಪಾಗಿ ನಿಂತರು. ಕೆಲವೇ ಕ್ಷಣಗಳಲ್ಲಿ ಕಣ್ಣೆದುರೇ ಧಪ್ ಎಂದು ಆ ಭಾರೀ ಕಟ್ಟಡ  ಕುಸಿದುಬಿತ್ತು. ಕಿಟಕಿ ಬಾಗಿಲ ಕನ್ನಡಿಗಳು ಸೂರ್ಯನ ಬೆಳಕನ್ನು ನನ್ನ ಕಣ್ಣಿಗೆ ಬಿಟ್ಟು ಕಣ್ಣು ಮುಚ್ಚುವಂತೆ ಮಾಡುತ್ತಿದ್ದವು. ಕಣ್ಣು ಮುಚ್ಚಿದರೆ ಮತ್ತೇ ಅದೇ ಶಕುನದಕನಸು ತುಂಡು ತುಂಡಾಗಿ ಕಾಣಿಸತೊಡಗಿತು. ಆ ಪ್ರಖರ ಬೆಳಕಿಗೆ ಒಂದು ಕ್ಷಣವೂ ಕಣ್ಣು ಮುಚ್ಚದೇ ಕಣ್ಣುಗಳನ್ನು ಇನ್ನೂ ದೊಡ್ಡದಾಗಿ ಬಿಟ್ಟು ನೋಡುತ್ತಾ ನಿಂತೆ. ಸಿಡಿಲಿನಂತೆ ಘರ್ಜಿಸಿ, ಜ್ವಾಲಾಮುಖಿಯಂತೆ ಧೂಳನ್ನು ಉಗುಳುತ್ತಾ ನೆಲಸಮವಾದ ಕಟ್ಟಡದ ಮುಂದೆ ಕಿಟಕಿ, ಬಾಗಿಲ ಗಾಜುಗಳು ಕನ್ನಡಿಯಂತೆ ನನ್ನೆದುರು ಪ್ರತಿರೂಪವನ್ನು ತೋರುತ್ತಾ ನಿಂತವು. ಆ ಕನಸಿನ ವಿರುದ್ಧ ಆವೇಶಗೊಂಡಿದ್ದ ನನ್ನ ಎದೆಯುಸಿರು ನಿಧಾನವಾಗಿ ಶಾಂತವಾಗುತ್ತಿದ್ದಂತೆ ಕನ್ನಡಿಯಲ್ಲಿ ನನ್ನ ಪ್ರತಿರೂಪ ನನ್ನನ್ನು ಹೊಗಳಿ, ದೊಡ್ಡಸ್ಥಾನಕ್ಕೇರಿಸಿ ಸನ್ಮಾನವನ್ನು ಮಾಡಿದಂತೆ ಕಂಡಿತು. ಕನ್ನಡಿಯಲ್ಲಿ ನಾನು ನನ್ನನ್ನೇ ನೋಡಿ ನಂಬಲಾಗಲಿಲ್ಲ. ಜಡೆಗಟ್ಟಿದ ಉದ್ದನೆಯ ಕೂದಲು, ಗಡ್ಡ, ಮೀಸೆ. ಕೊರಳಲ್ಲಿ ದೊಡ್ಡ ದೊಡ್ಡ ತುಳಸಿ ಮಾಲೆ,  ಕೈಗೆ ಸುತ್ತಿದ ರುದ್ರಾಕ್ಷಿ ಮಾಲೆ. ಹಣೆಯನ್ನು ಮುಚ್ಚಿದ ವಿಭೂತಿ. ಮೈಬಣ್ಣಕ್ಕೊಪ್ಪುವ ಕಾಶಾಯ ಬಟ್ಟೆ. ಬೆನ್ನಹಿಂದ ಪೂರ್ವದಿಕ್ಕಿನಲ್ಲಿ ಉದಯಿಸಿ ಸಾಗುತ್ತಿದ್ದ ಸೂರ್ಯನ ಪ್ರಭಾವಳಿ. ಭಕ್ತಿಯಿಂದ ಕೈಮುಗಿದು ಧನ್ಯವಾದಗಳನ್ನು ಹೇಳುವ ಜನರ ಗುಂಪುಗಳು ಎಲ್ಲವೂ ನನಗೆ ಹೊಸ ಅನುಭವವನ್ನು ಕೊಟ್ಟವು. ತಕ್ಷಣ ಮಾಧ್ಯಮದವರು ಧಾವಿಸಿ ಎಲ್ಲರನ್ನೂ ವಿಚಾರಿಸಿದರು.

ಮಾಧ್ಯಮದವರಿಗೆ ಜನರು “ಸ್ವಾಮಿಗಳು ಎಲ್ಲಿಂದ ಬಂದ್ರೋ ಏನೋ ಗೊತ್ತಿಲ್ಲ. ಇವರು ಹೇಳಲಿಲ್ಲಾ ಅಂದ್ರೆ ನಾವೆಲ್ಲಾ ಬಿಲ್ಡಿಂಗ್‍ನಲ್ಲೇ ಸಮಾಧಿ ಆಗಿರ್ತಿದ್ವಿ.” ಎಂದು ತಿಳಿಸಿದರು. ನನ್ನ ಸಂದರ್ಶನವನ್ನೂ ಮಾಡಿದರು. ನಾನು ಸತ್ಯಹೇಳಲು ಹಿಂದೇಟು ಹಾಕಿದೆ ಅಥವಾ ಆ ಶಕುನವೇ ಆರೀತಿ ನನ್ನಿಂದ ಆಡಿಸಿತೇ? ಎಂದು ಇಂದಿಗೂ ತಿಳಿದಿಲ್ಲ. ಹೆಸರು ಆತ್ಮಾನಂದ, ಊರು ಎಲ್ಲಿರುತ್ತೇನೋ ಅದೇ ನನ್ನೂರು. ತಂದೆ ತಾಯಿಗಳು ಇಲ್ಲೇ ಇದ್ದರು ಆದರೆ ಎಲ್ಲಿಹೋದರೋ ಗೊತ್ತಿಲ್ಲ ಎಂಬ ನನ್ನ ಉತ್ತರಗಳು ಬಹುಶಃ ಊಧ್ರ್ವಲೋಕದಿಂದ ಇಳಿದುಬಂದ ಆಧ್ಯಾತ್ಮ ಗುರುವನ್ನಾಗಿಸಿದವು. ಆ ದಿನ ಕಳೆಯುವಷ್ಟರಲ್ಲಿ ರಾಜಕಾರಣಿಗಳು, ಉದ್ಯೋಗಸ್ತರು, ಸನ್ಯಾಸಿಗಳು, ಮಠದ ಸ್ವಾಮಿಗಳು ಅನೇಕರು ಬಂದು ನನ್ನನ್ನು ಕಂಡು ಮಾತಾಡಿಸಿ ಹೊದರು. ಅನೇಕರು “ನಮ್ಮ ತಂದೆ ಹೇಳಿದ ರೀತಿಯೇ ಇದ್ದೀರಿ, ನಮ್ಮ ತಾತನವರು ಹೇಳುತ್ತಿದ್ದರು ಹಾಗೆಯೇ ಇದ್ದೀರಿ” ಎಂದು ಗುಣಗಾನ ಮಾಡಿ ಹೋದರು. ಕೊನೆಗೆ ಇದೇ ಮಠದಿಂದ ಭಾರಿ ವಾಹನವೊಂದು ಬಂದು ನನ್ನ ಸ್ಥಾನ ಇಂದಿಗೂ ಖಾಲಿ ಬಿದ್ದಿದೆ ದಯವಿಟ್ಟು ಬಂದು ಮಠದ ಅಧಿಪತ್ಯ ಸ್ವೀಕರಿಸಬೇಕೆಂದು ಕೇಳಿಕೊಂಡರು. ಅಂಧಶ್ರದ್ಧೆ ತುಂಬಿದ ಸಮಾಜವನ್ನು ತಿದ್ದಲು ಒಂದು ಅವಕಾಶ ಎಂದು ಯಾವುದೋ ಲೆಕ್ಕಾಚಾರ ಮಾಡಿ ಮರುಮಾತಾಡದೇ ಇಲ್ಲಿಗೆ ಬಂದು ಮಠದ ಅಧಿಪತ್ಯ ಸ್ವೀಕರಿಸಿದೆ. ಒಮ್ಮೆ ನೀನು ಭಿಕ್ಷೆಬೇಡುವುದನ್ನು ಕಂಡು ಯಾಕೋ ಮರುಕವುಂಟಾಗಿ ನಿನ್ನನ್ನು ಮಠಕ್ಕೆ ತಂದೆ. ಈಗ ನೀನು ನನ್ನನ್ನೇ ಪ್ರಶ್ನೆಮಾಡುವ ಇಪ್ಪತ್ತು ವರ್ಷದ ದೊಡ್ಡಮನುಶ್ಯ ಎಂದು ಮೋಕ್ಷಾನಂದನ ತೋಳು ತಟ್ಟಿದರು.

ಇದು ನನ್ ಕಥೆ. ಇಲ್ಲಿಂದ ಮುಂದೆ ಎಲ್ಲಿಗೂ ಓಡೋ ಆಸೆನೂ ಇಲ್ಲ, ಶಕ್ತಿನೂ ಇಲ್ಲ. ಈ ಮಠನಾ ಅಭಿವೃದ್ಧಿ ಮಾಡೋದೇ ನನ್ ಕೆಲ್ಸಾ ಅಷ್ಟೇ. ಸರಿ ನಡಿ ಹೋಗೋಣ, ಮಠದ ಲೆಕ್ಕಪತ್ರಗಳನ್ನ ನೋಡಿ ಬಹಳ ದಿನ ಆಯ್ತು ಸ್ವಲ್ಪ ನೋಡೋದ್ರಲ್ಲಿ ಸಹಾಯ ಮಾಡು ಬಾ, ನನಗೂ ಕಣ್ಣು ಮಂದ ಆಗಿವೆ ಎಂದು ಒಣಗಿದ ಮಡಿಯನ್ನು ಜಾಡಿಸಿಕೊಳ್ಳುತ್ತಾ ನೆಲನೋಡುತ್ತಾ ಕೈಬೀಸುತ್ತಾ ಮಠದ ಕಡೆ ಹೊರಟರು. ಗುರುಗಳ ನೆರಳನ್ನು ಹಿಂಬಾಲಿಸಿಕೊಂಡು ನಡೆದ ಮೋಕ್ಷಾನಂದ ಮಠ ಸಂಮೀಪಿಸುತ್ತಿದ್ದಂತೆ ಇಷ್ಟಕ್ಕೂ ನಿಮ್ಮ ನಿಜವಾದ ಹೆಸರೇನು ಸ್ವಾಮೀಜಿ.
ಕಮಲನಾಭ ಇರಬಹುದು !                                               

ಗೌತಮ್ ಪಿ ರಾಠಿ
ಬಳ್ಳಾರಿ
ಮೊ:8553111700

No comments:

Post a Comment

Thank You and have a great time