Thursday, July 16, 2015

# ಒಂದು ಬದುಕಿನ ಸುತ್ತ

# ಒಂದು ಬದುಕಿನ ಸುತ್ತ 


ಒದ್ದೆ ಕಣ್ಣುಗಳಿಂದ ಯೋಚನೆ ಮಾಡುತ್ತಾ ಕುಳಿತಿದ್ದ ಮುರುಳಿ ಹತ್ತಿರ ಒಬ್ಬ ಪರಿಚಯಸ್ತ ಬಂದು, ನೂರು ಪಾಂಪ್ಲೆಟ್ ಇರುವ ಕಟ್ಟನ್ನು ಕೊಟ್ಟು “ನನ್ನಯೋಗ್ಯತೆ ಇಷ್ಟೆ ಪಾ. ಏನು ಮಾಡೋದು? ನಮ್ಮಂಥ ಬಡವ್ರ ಮಕ್ಳಿಗೆ ಇಂಥಾ ಖಾಯಿಲೆ ಬರಬಾರ್ದು, ಎಲ್ಲಾ ದೇವರಾಟ ಇದ್ನ ಈಸ್ಬೇಕು ಅಷ್ಟೇ.” ಎಂದು ಹೋದ. ಮುರಳಿ ಮನೆಗೆ ಹೋಗಿ ಈ ವಿಚಾರವಾಗಿ ಮುದ್ದಿನ ಮಡದಿ ಗಂಗಮ್ಮನ ಹತ್ತಿರ ವಿವರಿಸುವಾಗ ಪಾಂಪ್ಲೆಟ್ ತೆರೆದು ಓದಿದ “ಸಾರ್ / ಮೇಡಂ, ನಾವು ಮುರಳಿ ಮತ್ತು ಗಂಗಮ್ಮ ಎಂಬ ಬಡ ದಂಪತಿಗಳು. ಕಳೆದ ವರ್ಷ ನಮ್ಮ ಮದುವೆಯಾಯ್ತು. ನಮಗೆ ತಂದೆ-ತಾಯಿ ಯಾರೂ ದಿಕ್ಕಿಲ್ಲ. ನಮಗೆ ಐದು ತಿಂಗಳ ಮಗು ಇದೆ. ಆದರೆ ಎರಡು ತಿಂಗಳಿಂದ ಇರುವ ಒಂದೇ ಮಗು ಬ್ಲಡ್‍ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದೆ. ಚಿಕಿತ್ಸೆಗೆ ಹೆಚ್ಚು ಹಣಖರ್ಚಾಗುತ್ತದೆ. ನಮ್ಮ ದುಡಿಮೆ ಎಲ್ಲಿಯೂ ಸಾಲದು ಮತ್ತು ಗುರುತು ಪರಿಚಯ ಇಲ್ಲದ ನಮಗೆ ಯಾರೂ ಸಾಲವನ್ನು ನೀಡುತ್ತಿಲ್ಲ. ಆದ್ದರಿಂದ ಈ ಪತ್ರದ ಮೂಲಕ ನಾವು ತಮ್ಮಲ್ಲಿ ಸಹಾಯವನ್ನು ಮಾಡಿ ಎಂದು ಕೇಳಿಕೊಳ್ಳುತ್ತಿದ್ದೇನೆ. ತಾವು ದಯವಿಟ್ಟು ದೊಡ್ಡ ಮನಸ್ಸು ಮಾಡಿ ನಮಗೆ ತಮ್ಮ ಕೈಲಾದ ಸಹಾಯ ಮಾಡಬೇಕೆಂದು ಪ್ರಾರ್ಥಿಸುತ್ತಿದ್ದೇವೆ. ಓದಿದ ಬಳಿಕ ಚೀಟಿಯನ್ನು ದಯವಿಟ್ಟು ಹಿಂದಕ್ಕೆಕೊಡಿ.”

ಎರಡು ವರ್ಷದ ಹಿಂದೆ ಯಾವುದೋ ಹಳ್ಳಿನಲ್ಲಿ ಟೊಕ್ಕು ಜಾತಿಗಲಭೆಗೆ ಕಾರಣವಾದ ಇವರಿಬ್ಬರ ಅಂತರ್ಜಾತಿಯ ವಿವಾಹ, ಸಿಟಿ ಹೊರಗಿನ ಕೊಳಗೇರಿಯ ಗುಡಿಸಲೊಂದ್ರಲ್ಲಿ  ವಾಸ ಮಾಡುವ ಹಾಗೆ ಮಾಡಿತ್ತು.  ಮಗು ಹುಟ್ಟಿದ ಮೇಲೆ ಖುಶಿ ಪಡಬಹುದು ಎಂದು ಊಹಿಸಿ ಇಬ್ಬರೂ ತವರಿಗೆ ಹೋದರೆ “ನಮ್ ಯಣಕ್ಕೂ ಬರಬ್ಯಾಡ್ರಿ, ಜಾತಿಕೆಟ್ ಮದುವ್ಯಾಗಿ ಊರಿಗೆ ಊರು ಗುದ್ಯಾಡಂಗ ಮಾಡಿದ್ರಿ, ನಮ್ ಪಾಲಿಗೆ ನೀವು ಅವತ್ತೇ ಸತ್ತೋದ್ರಿ, ಎಲ್ಲಾನಾ ಹಾಳಾಗೋಗ್ರಿ, ನಮಗೆ ಮಕ ತೋರುಸ್‍ಬ್ಯಾಡ್ರಿ” ಅನ್ನೋ ತಂದೆ-ತಾಯಿಗಳ ಛೀಮಾರಿ, ಬಹಿಷ್ಕಾರ ಈ ಸಿಟಿ ಗುಡಿಸಲಿಗೆ ಮತ್ತೆ ತಳಿದ್ವು. ಮಗನ ಜನನದ ಸಂಭ್ರಮದಲ್ಲಿ ಅವೆಲ್ಲಾ ನೋವುಗಳು ಮನಸ್ಸಿಗೆ ತಾಗಲಿಲ್ಲ. ಮಗನಿಗೆ ತಂದೆಯ ಹೆಸರು ಇಡಲೂ ಮನಸಾಗದ ರೀತಿಯಲ್ಲಿ ಮುರಳಿ-ಗಂಗಮ್ಮರ ಮಾವಂದಿರು ಇವರ ಮನಸ್ಸನ್ನು ಕೊಂದಿದ್ದರು. ಮಗು ಹುಟ್ಟಿ ಮೂರು ತಿಂಗಳಲ್ಲಿ ಮಗುವಿನ ಆರೋಗ್ಯದಲ್ಲಿ ಏನೋ ಏರುಪೇರು ಆಗ್ತಿದೆ ಅಂತ ಆ ಟೆಸ್ಟು ಈ ಟೆಸ್ಟು ಬರ್ದು, ಇವರು ಕೂಡಿಟ್ಟ ಹಣ, ಸಿಕ್ಕಿದ್ ಸಾಲನೆಲ್ಲಾ ಕಬಳಿಸಿದ ಆಸ್ಪತ್ರೆ, ಕೂಸಿಗೆ ಬ್ಲಡ್‍ಕ್ಯಾನ್ಸರ್ ಇದೆ ಆದಷ್ಟು ಬೇಗ ಚಿಕಿತ್ಸೆ ಕೊಡಬೇಕು ಹಣ ಜಾಸ್ತಿ ಖರ್ಚಾಗುತ್ತೆ ಅನ್ನೋ ಭೀತಿಯನ್ನು ಒಡ್ಡಿತು. ಚಿಕಿತ್ಸೆಗೆ ಹಣಜೋಡಿಸಲು ಎಲ್ಲರ ಬಳಿ ಸಾಲಕ್ಕೆ ಕೈ ಒಡ್ಡಿದರೂ, ಗುರುತು ಪರಿಚಯ ಕಡಿಮೆ ಇರುವ ಇಂತಹ ಜೋಡಿಗೆ ಆ ಸಿಟಿಯಲ್ಲಿ ಯಾರು ಸಹಾಯ ಮಾಡ್ತಾರೆ?

“ನಾನು ಯಾವ್ ಪಾಪ ಮಾಡಿದ್ದೆ? ಯಾರಿಗೆ ಏನ್ ಮೋಸ ಮಾಡಿದ್ದೆ? ಒಂದಿನಾ ಬಿಡ್ದಂಗೆ ಪೋಜೆ ಮಾಡೀನೀ. ತಾಯಿ ಎದೆಹಾಲು ಬಿಟ್ರೆ ಏನೂ ಕುಡಿಲಾರದ್ ಕಂದಮ್ಮನಿಗೆ ಯಾಕ್ ಇಂತಾರೋಗ ಕೊಟ್ಟೆ? ನನಿಗ್‍ಕೊಡು ಆರೋಗಾನ, ಸಿಟ್ಟಿದ್ರೆ ನನ್ ತಗಂಡೋಗ್, ಈ ಕೂಸಿನ್ ಮ್ಯಾಲ್ಯಾಕ್ ತೋರುಸ್ತೀ ನಿನ್ ರೋಸಾನಾ?” ಬಹುಷಃ ಯಮಧರ್ಮನು ಪ್ರತ್ಯಕ್ಷವಾದ ಮೊದಲ ಭೇಟಿಯಲ್ಲಿ ಮುರಳಿ ಕೇಳಬೆಕಾದ ಮಾತಿರಬಹುದು. ಮನದಲ್ಲಿ ಬೆಂದು ಕಣ್ಣಲ್ಲಿ ಉಕ್ಕಿದ ನೀರು ತುಟಿಯ ವರೆಗೆ ಹರಿಯುತ್ತಿದ್ದಂತೆ ದವಡೆಯ ಸಿಟ್ಟು ಮಾಡಿದಕಟಕಟ ಸದ್ದು ಗಂಗಮ್ಮನ ಮನಸ್ಸಿಗೆ ತಟ್ಟಿ, ಮುರಳಿಯ ಕಣ್ಣು ವರೆಸಲು ಮುಂದಾದಳು. ಗಂಗೆಯ ಕೈ ಬಳೆ ಸದ್ದು ಮುರಳಿ ಕಿವಿಗೆ ತಾಕುತ್ತಿದ್ದಂತೆ, ತಾನೇ ಕಣ್ಣು ವರೆಸಿಕೊಂಡು, “ಸರಿ ನಡಿ ಹೋಗಾನ” ಎಂದು ಪಕ್ಕದಲ್ಲಿದ್ದ ಪಾಂಪ್ಲಟ್ ಕಟ್ಟನ್ನು ಕೈಗೆತ್ತಿಕೊಂಡು ಮುರಳಿ ಗುಡಿಸಲಿಂದ ಹೊರಬಂದ. ಕೂಸನ್ನೆತ್ತಿಕೊಂಡು ಗಂಗಮ್ಮ ಹೊರಬಂದಳು. ಸಿಟಿಹೊರಗಿನ ತಿಪ್ಪೆ ರಾಶಿಯ ಬದಿ ಇದ್ದ ಗುಡಿಸಲನ್ನು ನೆರಿಕೆ ಬಾಗಿಲಿಂದ ಮುಚ್ಚಿ ಸೀದಾ ಬಸ್‍ಸ್ಟಾಂಡಿಗೆ ನಡೆದರು. ಬಂದ ಬಸ್ಸುಗಳನ್ನೆಲ್ಲಾ ಏರಿ ಇಳಿದು ಬೇಡಲಾರಂಭಿಸಿದರು. ಕೆಲವರು ಪಾಂಪ್ಲೆಂಟ್‍ನ್ನು ಕೂಲಂಕುಶವಾಗಿ ಓದಿ ಇವರ ಮುಖಗಳನ್ನು ನೋಡಿ ಸಹಾಯ ಮಾಡಿದರು. ಓದದೇ ಕೆಲವರು ಸಹಾಯ ಮಾಡಿದರು. ಕೆಲವರು ಓದಿಯೂ ಸುಮ್ಮನಿದ್ದು ಬರಿ ಚೀಟಿಯನ್ನು ಹಿಂದಕ್ಕೆಕೊಟ್ಟರು. ಉಳಿದವರು ಚೀಟಿ ಕೊಡಲು ಹೋದಾಗ ಬೇಡ ಎಂದು ನಿಲ್ರ್ಯಕ್ಷಿಸಿದರು.
      ಫುಟ್‍ಪಾತ್‍ನಲ್ಲಿ ನಾಲ್ಕು ಇಡ್ಲಿ ಕಟ್ಟಿಸಕೊಂಡು ಮನೆಸೇರಿದಾಗ ಸುಮಾರು ರಾತ್ರಿ ಎಂಟಾಗಿರಬಹುದು. ಬಂದ ಚಿಲ್ಲರೆಎಲ್ಲಾ ಎಣಿಸಿದ ಮುರಳಿ “ಒಂದು ಇಡಿ ್ಲಕಮ್ಮಿ ತಂದಿದ್ರೆ ಎರಡ್ನೋರ್ ಆಗ್ತಿತ್ತು” ಅಂದು ಪಕ್ಕದಲ್ಲಿದ್ದ ಬಾರಿಗೆ ಹೋಗಿ  ಚಿಲ್ಲರೆಗಳನ್ನ ಗಟ್ಟಿ ಮಾಡಿಸಿಕೊಂಡು ಬಂದ. ಕಣ್ಣಿರಿನೊಂದಿಗೆ ಇಡ್ಲಿಯನ್ನು ನಂಚಿಕೊಂಡು ತಿಂದ ಗಂಗೆ, ಮಗುವಿಗೆ ಹಾಲುಣಿಸಿ ಸಗಣಿ ಸಾರಿಸಿದ ನೆಲದಮೇಲೆ ಅಡ್ಡಾದಳು. ಮೈಯಲ್ಲಿ ವಿಷ ಇದ್ರೂ, ಹಾಲಿನಂತೆ ನಗೋ ಮಗುವಿನ ಮುಖ ಗಂಗಮ್ಮ ಮತ್ತು ಮುರುಳಿಗೆ ಸ್ಪೂರ್ತಿ ತಂದಿದ್ದರೆ, ಎರಡು ತಿಂಗಳಲ್ಲಿ ಚಿಕಿತ್ಸೆ ಆಗಿಲ್ಲಾ ಅಂದ್ರೆ ಮಗು ಉಳಿಯೋದಿಲ್ಲ ಅಂದ ಡಾಕ್ಟರ್ ಮಾತು ಅವರ ಆಯಾಸ, ದಣಿವನ್ನು ಮೆದುಳಿನ ಗಮನಕ್ಕೆ ತರದೇ ಅಲೆದಾಡುವ ಅವರ ಕಾಲುತುಳಿತಕ್ಕೆ ಸಿಲುಕುವಂತೆ ಮಾಡಿತ್ತು.

      ಗುಡಿಸಲ ಮೂಲೆಯಲ್ಲಿ ಇಟ್ಟಿದ್ದ ಸಣ್ಣಗಾತ್ರದ ವಿಷದ ಬಾಟಲಿಯನ್ನು ನೋಡುತ್ತಾ ಮುರಳಿ “ಇದನ್ನ ತಗಾಳ ದಿನ ಬರಬಾರ್ದು ಗಂಗಾ” ಎಂದ. “ಬರಲ್ಲಾ ಬಿಡು, ಇಬ್ಬರಿಗೆ ಒಂದೇ ಮಗು ಇರೋದು, ನಾವು ಮಾಡಿಲ್ಲದ ತಪ್ಪಿಗೆ ದೇವ್ರು ಎಲ್ಲಾ ಕಸ್ಕಂಡು ಮಗೂಗೆ ಇಂಥ ಕಾಯಿಲೆ ಕೊಟ್ಟು ಪರೀಕ್ಷೆ ಮಾಡ್ತದಾನ ಅಷ್ಟೆ. ಎಲ್ಲಾ ಸರಿ ಆಗ್ತತೆ ಬಿಡು. ಮುಂದಿನ ವಾರ ಡಾಕ್ಟ್ರು ಬರಾಕೇಳ್ಯಾರಲಾ ನಾನು ಹೋದಾಗ ಹಣ ಹೊಂದಿಕೆ ಮಾಡ್ತಿದಿವಿ, ಯಾವಾಗ ಅಡ್ಮಿಟ್ ಮಾಡ್ಕೊಂತೀರಿ ಅಂತ ಕೇಳಿ ಬರ್ತಿನಿ. ನೀಚಿಂತೆ ಬಿಡು ಮುರುಳಿ, ಎಲ್ಲಾ ಸರಿಹೋಗ್ತತೆ.” ಎಂದು ಮುರಳಿಗೆ ದುಖಃ ತುಂಬಿದ ಧ್ವನಿಯಿಂದ ಸಮಾಧಾನ ಮಾಡಿದಳು.    “ಸುಮಾರು ಒಂದು ಇಪ್ಪತ್ತು ಒಪ್ಪತ್ತೈದ್ ಸಾವಿರ ಆಗಿರಬಹುದು. ಇನ್ನೂ ಇಪ್ಪತ್ತು ಸಾವಿರ ನಾವು ಗೆದ್ದಿ, ನಮ್ ಮಗ ನಮಗೆ ಉಳಿತಾನ. ನಾಳೆಯಿಂದ ಸ್ವಲ್ಪ ಬೇಗ ಹೋಗಿ ಕೇಳಬೇಕು, ರಾತ್ರಿ ಹೊತ್ತಾಗಿ ಬರಬೇಕು ಹಂಗಾದ್ರೆ ಜಲ್ದಿ ರೊಕ್ಕ ಹೊಂದ್ಸುಬೋದು” ಎಂದು ಮನದಲ್ಲಿ ಲೆಕ್ಕಾಚಾರ ಮಾಡಿ ಮಲಗಿದ್ದ ಮುರಳಿ, ಬೆಳಿಗ್ಗೆ ತಿಪ್ಪಯಲ್ಲಿ ಒದ್ದಾಡಿ ಚಿನ್ನಾಟವಾಡುತ್ತಿದ್ದ ಹಂದಿಗಳ ಸುಪ್ರಭಾತದಿಂದ ಎಚ್ಚೆತ್ತು. ಗಂಗೆಯನ್ನು ಎಬ್ಬಿಸಿ ರಾತ್ರಿಯ ಯೋಜನೆಯನ್ನು ವಿವರಿಸಿದ. ಗಂಗೆಗೆ ಮುರಳಿಯ ಭರವಸೆಯೇ ಆನಂದವನ್ನು ತಂದುಕೊಟ್ಟು ಹುರುಪಿನಿಂದ ನಡೆದಳು. ಪ್ರತಿರಾತ್ರಿ ಎಣಿಸಿ ಗಟ್ಟಿಮಾಡಿಸಿದರೂ ಹಣ ಮೂರಂಕಿಯಿಂದ ನಾಲ್ಕಂಕಿಗೆ ಜಿಗಿಯಲೇಇಲ್ಲ.

      ನಾಲ್ಕುದಿನದ ಬಳಿಕ ಗುಡಿಸಲಿನ ಹೊರಗೆ ಕೂತು ಬೆನ್ನ ಹಿಂದೆ ಎರಡೂ ಕೈಯೂರಿ ಆಕಾಶದ ಚುಕ್ಕಿಗಳನ್ನು  ನೋಡುತ್ತಾ “ಡಾಕ್ಟ್ರುಏನಂದ್ರು?” ಎಂದ ಮುರಳಿ ಮಾತಿಗೆ “ಡಾಕ್ಟ್ರು ಊರಿಗೋಗ್ತಿದಾರಂತೆ, ಸೋಮವಾರ ಬೆಳಿಗ್ಗೆ ಬರ್ತಾರಂತೆ, ಸೋಮವಾರ ಬಂದು ಮಗೂನಾ ಅಡ್ಮಿಟ್ ಮಾಡು ಅಂದ್ರು” ಎಂದು ತುಸು ಉತ್ಸಾಹದ ಧ್ವನಿಯಿಂದ ಹೇಳಿದಳು. “ನಾವು ಕಳ್ಕಂಡ್ವಿ ಅನ್ಕಂಡೆ, ನೀನೆಳಿದ್ದೇ ಸರಿ. ಎಲ್ಲಾ ಸರಿಗಾಗ್ತತೆ. ನಮ್ ಮಗ ನಮ್ಗೆ ಸಿಕ್ತಾನ” ಎಂದು ಮುರುಳಿ ಹೇಳಿತ್ತಿದ್ದಂತೆ ಆಕಾಶದ ಚುಕ್ಕಿಯೊಂದು ಚಿಮ್ಮಿ ಪಕ್ಕದ ತಿಪ್ಪೆಯ ಹಿಂದೆ ಮಾಯವಾಯ್ತು. ಇಬ್ಬರೂ ಒಬ್ಬರ ಮುಖ ಒಬ್ಬರು ನೋಡಿಕೊಂಡು ಮುಗುಳ್ನಕ್ಕು ಕೂಸನ್ನೆತ್ತಿ ಮುದ್ದಿಸಿದರು.

      ಮರುದಿನ ಬಸ್‍ಸ್ಟಾಂಡ್ ನಲ್ಲಿ “ಆಪರೇಶನ್ನಿಗೆ ಎಷ್ಟು ದಿನ ಐತೆ” ಎಂದು ಕೇಳಿದ ಪರಿಚಯದ ಪ್ರಯಾಣಿಕನಿಗೆ “ನಾಡಿದ್ದು ಹೋಗಿ ಅಡ್ಮಿಟ್ ಮಾಡ್ಬೇಕು” ಎಂದು ಸಾವಕಾಶವಾಗಿ ಮುರುಳಿ ಉತ್ತರಿಸಿದ. “ನಾನು ಊರ್ಗೋಗಿ ಅಪ್ಪ-ಅವ್ವುಗ ಹೇಳ್ತೀನಿ, ನೋಡಾನಾ ಅವರೇನಾರ ಸಹಾಯ ಮಾಡ್ತಾರೇನೋ ಅಂತ.” ಎಂದ ಪ್ರಯಾಣಿಕನ ಮಾತು ಇನ್ನು ಮುಂದುವರಿತಿದ್ದಂಗೆ ಬಸ್ ಚಾಲೂ ಆಯ್ತು. ರಾತ್ರಿ ರಾಮಮಂದಿರದ ಪ್ರಸಾದ ತೊಗೊಂಡು ಮಗುವಿನ ಹಣೆಗೆ ಕುಂಕುಮ ಇಟ್ಟು ಗುಡಿಸಲ ಕಡೆಗೆ ನಡೆದರು. ದಾರಿಯಲ್ಲಿ ನೆಲದಿಂದ ತಲೆಎತ್ತಿ ಅಣಗಿಸಿ ಕೊಂಕು ನಗುತ್ತಾ ನಿಂತಿದ್ದ ಕಲ್ಲಿಗೆ ಎಡವಿದ ಗಂಗಮ್ಮನ ಕಾಲಿನ ಹೆಬ್ಬೆರಳು ಉಗುರು ಮುರಿದು ರಕ್ತ ವಸರಿತ್ತು. ಅಮ್ಮಾ! ಎಂದು ಕೂಗಿ, ಹಾಗೇ ನಡೆದ ಗಂಗಮ್ಮಳ ನೋವು ಮಗುವಿಗೆ ತಾಕಿತೆಂಬಂತೆ ಮಗು ಅಳಲಾರಂಭಿಸಿತು. ಮುರಳಿ ಎತ್ತಿ ಮುದ್ದಾಡುತ್ತಾ ಅಲ್ಲಿನೋಡು ಚಂದಪ್ಪ! ಚಂದಪ್ಪ ನೋಡು ಚಂದಪ್ಪ! ಎಂದು ಸಮಾಧಾನ ಮಾಡುತ್ತಾ ಮನೆಬಂತು, ಮನೆಬಂತು ಎನ್ನುತ್ತಾ ಮನೆಗೆ ಸಮೀಪವಾದರು. ಗುಡಿಸಲು ಹತ್ತಿರವಾಗುತ್ತಿದ್ದಂತೆ ಗಂಗಮ್ಮಳಿಗೆ ಏನೋ ಮರೆತಂತೆ ಅನ್ನಿಸಿತು. “ಮುರಳಿ ಏನೋ ಮರ್ತಿದೀವಿ ಅನ್ಸತದೆ” ಎಂದ ಗಂಗೆಗೆ ಉತ್ತರವಾಗಿ “ಮನೆ ಹತ್ರ ಬಂತು ಏನು ಮರ್ತಿಲ್ಲಾ ಇವನ್ನ ಎತ್ಗೋ ಬಾಗ್ಲು ತೆಗೀತೀನಿ” ಎಂದು ನೆರಿಕೆ ಬಾಗಿಲು ತೆಗಿಯಲು ಎತ್ತಿಗೊಂಡಿದ ಮಗುವನ್ನು ಗಂಗೆಗೆ ಕೊಡುತ್ತಿದ್ದತೆ ಮಗುವಿನ ಗೋಣು ಬಿದ್ದುಹೋಗಿತ್ತು. ಮೂಗಿನಿಂದ ತುಸು ರಕ್ತ ವಸರಿ ಹೆಪ್ಪುಗಟ್ಟಿತ್ತು. ನೋಡುನೋಡುತ್ತಿದ್ದಂತೆ ಇಬ್ಬರೂ ನೆಲಕ್ಕೆ ಕುಸಿದರು ಮಗುವನ್ನು ಗುಡಿಸಲ ಮುಂದೆ ಮಲಗಿಸಿ, ಪಾಪು, ಪಾಪೂ! ಎಂದು ಕರೆಯಲಾರಂಭಿಸಿದರು. ಕಣ್ಣಾಮುಚ್ಚಾಲೆಯಲ್ಲಿ ಬಾರದ ಊರಿಗೆ ಹೋಗಿ ಅಡಗಿದ್ದ ಮಗುವಿಗೆ ತಂದೆ-ತಾಯಿಯ ಕೂಗು ಕೇಳಿಸಲಿಲ್ಲ, ಮಗು ಅಳಲಿಲ್ಲ, ನಗಲಿಲ್ಲ. ಗಂಗಮ್ಮ ಕಣ್ಣುಗಳಿಂದ ಬತ್ತಿದ ನದಿಯೊಂದು ಪ್ರಾಯಾಸದಿಂದ ಹರಿದು ಗದ್ದದ ತುದಿಯಿಂದ ತೊಟ್ಟಿಕ್ಕುತ್ತಿತ್ತು. ಜಗತ್ತೇ ಈ ರಾತ್ರಿಯ ಕತ್ತಲಲ್ಲಿ ಮೂಕವಾಗಿತ್ತು. ಬೀಸುವ ಗಾಳಿ, ಗಾಳಿಗೆ ಸದ್ದು ಮಾಡುತ್ತಿದ್ದ ತಿಪ್ಪೆಯ ಕಸ, ಎಲ್ಲವೂ ಮೌನ ತಾಳಿದ್ದವು. ಆಕಾಶದ ನಕ್ಷತ್ರಗಳು ಬೀಸುವ ಗಾಳಿಗೆ ಕಸದತಿಪ್ಪೆಯಲ್ಲಿ ಸಿಕ್ಕಿಕೊಂಡು ಅಲಿಗಾಡುತ್ತಾ, ಬೆಳಕಿನ ಎಂಜಲನ್ನು ಉಗುಳುವ ಪ್ಲಾಸ್ಟಿಕ್ ಹಾಳೆಗಳ ತುಣುಕುಗಳಂತೆ ಕಂಡವು. ಅಲ್ಲಿ ಎಲ್ಲವೂ ಮುಗಿದು ಹೋಗಿದ್ದವು, ಎಲ್ಲವೂ ನಿಂತುಹೋಗಿದ್ದವು, ಎಲ್ಲವೂ ಮೌನತಾಳಿ ಕಲ್ಲುಗಳಂತೆ ಕೂತಿದ್ದವು.

      ಇವರ ಅಳುವನ್ನು ಕೇಳಿ ತಿಪ್ಪೆಯ ಆಜೂ ಬಾಜೂ ಇದ್ದ ಹಂದಿ ಸಾಕುವವರು ಬಂದು ಕಷ್ಟ ಕೇಳದೇ ಅವರ ಅಳುವಿನಿಂದಲೇ ಅರಿತು ಗಂಭೀರವಾಗಿ ನಿಂತು ಶೋಕ ವ್ಯಕ್ತಪಡಿಸಿದರು. ಬೆಳಿಗ್ಗೆ ವರಿಗೆ ಕಾಯಾಕಾಗಲ್ಲ, ವಾಸ್ನೆ ಜಾಸ್ತಿ ಆಗ್ತತೆ ಎಂದು ಮುರಳಿ ಗಂಗೆಯರನ್ನು ಒಪ್ಪಿಸಿ ಸ್ಮಶಾನಕ್ಕೆ ಹೋಗಲು ಸಿದ್ದಪಡಿಸಿದರು. ಮುರಳಿ ಮಗುವಿನ ದೇಹವನ್ನು ಹೂವಿನಂತೆ ಸೂಕ್ಷ್ಮವಾಗಿ ಎತ್ತಿಕೊಂಡು ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಿ ಗುಡಿಸಲಿಗೆ ಹಿಂತಿರುಗಿದರು. ಗುಡಿಸಲ ಮುರುಕು ಗೋಡೆಗೆ ಆನಿಕೊಂಡ ಮುರಳಿಯ ಎದೆಗೆ ಗಂಗೆಯು ತಲೆಕೊಟ್ಟು ಕೂತು ಅತ್ತಳು. ಬಿಸಿ ಕಣ್ಣೀರು ಮುರಳಿಯ ಹೃದಯವನ್ನು ಸುಡುತ್ತಿತ್ತು. ಎದ್ದು ಮೂಲೆಯಲ್ಲಿನ ವಿಶದ ಬಾಟಲಿಯನ್ನೂ ತೆಗೆದು ಕುಡಿಯಲೂ ಆಗದಂತೆ ವಿಧಿಯಾಟ ವಿಶವನ್ನು ಮೈಮನಸ್ಸಿನಲ್ಲಿ ಬೆರೆಸಿ ನೊರೆಯುಗುಳುತ್ತಾ ಗಹಗಹಿಸಿ ನಗುತ್ತಿತ್ತು. ನೊಂದ ಮನಗಳೆÉರಡಕ್ಕೂ ಯಾವುದೋ ಮಾಯೆ ನಿದ್ರೆಯನ್ನೂ ಕರುಣಿಸಿತು. ಸುಮಾರು ಮೂರುತಾಸುಗಳ ನಿದ್ದೆ ಇರಬಹುದು, ಸೂರ್ಯ ದೇವನು ತನ್ನ ಪಯಣಕ್ಕೆ ರಥವನ್ನು ಸಿದ್ದಗೊಳಿಸುತ್ತಿದ್ದ ಸಮಯವಿರಬಹುದು. ಯಾವುದೋ ಮಗುವಿನ ಅಳುವ ಕೂಗು ಅವರಿಗೆ ಸುಪ್ರಭಾತ ಹಾಡಿತ್ತು. ಆ ಮಗುವಿನ ಅಳು ಕಿವಿಗೆ ಇಂಪು ಮತ್ತು ಉತ್ಸಾಹವನ್ನು ತಂದುಕೊಟ್ಟಿತ್ತು. ಇಬ್ಬರೂ ಗುಡಿಸಲಿಂದ ಹೊರಬಂದರು. ಭ್ರಮೆ ಎಂದು ತಿಳಿದು ಮತ್ತೆ ಗುಡಿಸಲೊಳಗೆ ಹೋಗಿ ವಿಶದ ಬಾಟಲಿಯ ಮುಚ್ಚುಳ ತೆಗೆಯುತ್ತಿದ್ದಂತೆ ಮಗು ಅಳುವ ಶಬ್ದ ಸ್ಪಷ್ಟವಾಗಿ ಕೇಳಿಸಿತು.

ಬಾಟಲಿಯನ್ನು ಕೈಲಿ ಹಿಡಿದು ಹೊರಬಂದ ಮುರಳಿಗೆ ಮತ್ತೆ ಮತ್ತೆ ಆ ಅಳು ಕೇಳಿಸಿತು. ಇಬ್ಬರಿಗೂ ಕೇಳಿಸಿತು. ಇಬ್ಬರೂ ಅಳುವನ್ನು ಹುಡುಕಿಕೊಂಡು ಹೊರಟರು. ತಿಪ್ಪೆಯ ಮೂಲೆ ಮೂಲೆ ಹುಡುಕಿದರು. ಒಮ್ಮೆ ಹತ್ತಿರವಾಗಿ ಒಮ್ಮೆ ದೂರವಾಗಿ ಮಾಯಾ ಯುದ್ಧದಂತೆ ಆ ಮಗುವಿನ ಅಳು ಇಬ್ಬರನ್ನೂ ಸತಾಯಿಸಿತು. ಕೊನೆಗೆ ತಿಪ್ಪೆಯ ಮೂಲೆಯೊಂದರಲ್ಲಿ ಯಾರೋ ಹೆತ್ತು ಸಮಾಜದಿಂದ ಮರೆಮಾಚಲು ತಿಪ್ಪೆಗೆ ಎಸೆದ ಕುರೂಪಿ ಮಗು ತನ್ನ ಮುಷ್ಟಿಯನ್ನು ಭಿಗಿ ಹಿಡಿದು ಕಾಲುಗಗಳನ್ನು ಬಡಿಯುತ್ತಾ ಅಳುತ್ತಿತ್ತು. ಮಗುವನ್ನು ಕಂಡೊಡನೇ ಹೊಸ ಚೈತನ್ಯ ಇಬ್ಬರ ಮುಖದಲ್ಲಿ ಉಕ್ಕಿತು. ಊಟ ನಿದ್ರೆಗಳು ಸರಿಯಾಗಿ ಅನುಭವಿಸದ ಮುರಳಿಯ ಕಣ್ಣುಗಳವರೆಗೆ ಸಂತೋಷ ಹರಿಯದೇ ತುಟಿಗೆ ಬಂದು ನಿಂತಿತ್ತು. ಇಬ್ಬರೂ ಮಗುವನ್ನು ಎತ್ತಿಕೊಂಡು ಅಪ್ಪಿ ಮುದ್ದಿಸಿದರು. ನಿತ್ರಾಣ ದೇಹಗಳಲ್ಲಿ ಶಕ್ತಿಯ ಚಿಲುಮೆಯೊಂದು ಸಂಚರಿಸಿದಂತೆ ಇಬ್ಬರೂ ಗಿಡಿಸಲಿಗೆ ಬಂದು ಮಗುವಿಗೆ ಸ್ನಾನಾದಿಗಳನ್ನು ಮಾಡಿಸಿ ಕಾಡಿಗೆಯಿಂದ ದೃಷ್ಟಿಬೊಟ್ಟಿಟ್ಟು ಮುಗುಳ್ನಕ್ಕರು. ಮಗುವನ್ನೆತ್ತಿಕೊಂಡು ಹೊರಬಂದ ಮುರಳಿ ಒಮ್ಮೆ ಮೇಲೆ ತೂರಿ ಹಿಡಿದು ಮುದ್ದಿಸಿದ. ಮಗು ನಗುತ್ತಿದ್ದಂತೆ ಗಂಗೆಯೂ ನಕ್ಕಳು. ಮಗುವನ್ನು ಮತ್ತೊಮ್ಮೆ ಆಕಾಶಕ್ಕೆ ತೂರಿದ ಸೂರ್ಯನ ಎಳೆ ಬಿಸಿಲಿಗೆ ಅಡ್ಡವಾಗಿ ಮಗು ತನ್ನ ನೆರಳನ್ನು ಮುರಳಿಯ ಮುಖಕ್ಕೆ ಚೆಲ್ಲಿ ಮುರಳಿಯ ಗಂಟುಹುಬ್ಬನ್ನು ಬಿಡಿಸಿ, ಕಣ್ಣರಳಿಸಿ ನಗುವಂತೆ ಮಾಡಿತು. ದಂಪತಿಗಳ ಜೀವನದಲ್ಲಿ ಮತ್ತೊಮ್ಮೆ ಸಂತೊಷ ಉಕ್ಕಿತು. ದಿನವೆಲ್ಲಾ ಆನಂದದಿಂದ ಕಳೆದರು. ರಾತ್ರಿ ಹೊಟ್ಟೆತುಂಬಾ ಹಾಲುಕುಡಿದು ನಗುತ್ತಾ ಆಟವಾಡುತ್ತಿದ್ದ ಮಗುವನ್ನು ನೋಡಿ ಗಂಗೆಯ ಮನ ಸಂತೋಷದಿಂದ ನೆನೆಯಿತು. ಆಕಾಶ ನೋಡುತ್ತಿದ್ದ ಮುರಳಿ “ಗಂಗಾ, ಆಕಾಶದಾಗೆ ಅಷ್ಟೊಂದ್ ಚುಕ್ಕಿ ಅದಾವಲಾ, ಒಂದೋದ್ರೆ ಏನೂ ಕಡಿಮೆ ಅನ್ಸಲ್ಲಾ” ಅಂದ.
                                           
ಗೌತಮ್ ಪಿ ರಾಠಿ
ಬಳ್ಳಾರಿ
ಮೊ: 8553111700

No comments:

Post a Comment

Thank You and have a great time