# ಕ್ಷೌರದ ದಿನ

# ಕ್ಷೌರದ ದಿನ 

ಮುಖ ತೊಳೆದು ಕನ್ನಡಿಯನ್ನು ಉಜ್ಜಿದರೂ ಒಂದಿಷ್ಟೂ ಹೆಚ್ಚದ ಸೌಂದರ್ಯ್ಲ. ಹೆಜ್ಜೆ ಹಿಂದಿಟ್ಟು ಸ್ವಲ್ಪ ತಲೆ ಬಗ್ಗಿಸಿ ಹುಬ್ಬು ಎತ್ತರಿಸಿ ಓರೆಯಿಂದ ನೊಡಿದರೂ ಅಷ್ಟೇ. ಗುಟ್ಟು ರಟ್ಟಾಗುವಷ್ಟರಲ್ಲೇ ಹಿಂದಿನಿಂದ ಅಮ್ಮನ ಕೂಗು “ಏನು ಅನಿಷ್ಟ ಮುಖದಮೇಲೆ, ತಲೆಮೇಲೆ ಮೊದ್ಲು ಹೋಗಿ ತೆಗುಸ್ಕೊಂಡ್ ಬಾ”. ಧ್ವನಿ ಪ್ರತಿಧ್ವನಿಸುವಷ್ಟರಲ್ಲಿ ಕೈ ಕಾಸಿಗಾಗಿ ಚಾಚಿತ್ತು, ಕಾಲು ಚಪ್ಪಲಿ ಹುಡುಕಿತ್ತು ಕಣ್ಣುಗಳು ಮಾತ್ರ ಹಾಗೇ ಕನ್ನಡಿಯನ್ನು ನೋಡುತ್ತಿದ್ದವು.
ನಿಜಕ್ಕೂ ಇದೊಂದು ಗೋಳು, ಈಗಿನ ಪ್ಯಾಷನ್‍ಗೂ ಸಹ ಅರ್ಥವಿದೆ. ಹಿಂದಿನಕಾಲದಿಂದಲೂ ಮಾನವನ ಉಡುಗೆ, ತೊಡಿಗೆ, ಭಾಷೆ ಮತ್ತು ಅಲಂಕಾರಗಳೂ ಅಂದಿನ ಸಮಾಜದ ವಾಸ್ತವದ ಪ್ರಜ್ಞೆಯನ್ನು ತರುತ್ತವೆ ಇಂದಿನ ಫ್ರೆಂಚ್ ಮುಂತಾದ ಕುರುಚಲು ಗಡ್ಡ ಸಾಮಾಜಿಕ ಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ. ಹೇಗೆ ಅಂತೀರಾ?! ಸ್ವಾಮೀ ಒಂದು ಕ್ಷೌರ ಮಾಡಸೋಕೆ 3-4 ಗಂಟೆ ಕ್ಯೂ ನಿಲ್ಬೇಕು ರೀ. ಜನಸಂಖ್ಯೆ ಸ್ಪೋಟ ಎಷ್ಟಾಗಿದೆ ಅಂತಾ ಆವಾಗ್ಲೇ ಗೊತ್ತಾಗೋದು.
ಪರ್ವಾಗಿಲ್ಲಾ ಇದು ಕೆಲವು ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರತ್ತೆ ಆದರೂ ಕ್ಯೂ ಹೆಚ್ಚೇನು ಬೇಸರ ಅನ್ನಿಸೊಲ್ಲ ಅನ್ನೋದು ಕಷ್ಟಸಾಧ್ಯ, ಕೋತುಕೊಳ್ಳೋಕೆ ಬೆಂಚು ಹಾಕಿರ್ತಾರೆ, ತಾಜಾ ತಾಜಾ ಜಾಹಿರಾತು ಹೊತ್ತ ದಿನಪತ್ರಿಕೆಗಳು, ಮತ್ತೊಂದು ಕಲರ್ ಟಿ.ವಿ ಬೇರೆ ಇರತ್ತೆ. ಆದರೂ ಹೊತ್ತು ಹೋಗೋದು ಕಷ್ಟ. ಪತ್ರಿಕೆಗಳಂತೂ ಜಾಹಿರಾತುಮಯ, ಇನ್ನೂ ಟಿ.ವಿನಾ ಹದಗೆಟ್ಟೋಗಿದೆ. ಬುದ್ದಿವಂತರಾಗಿ ಬುದ್ದಿಮಾಂದ್ಯರ ತರಹ ಅತ್ಯಲ್ಪ ಬಟ್ಟೆ ಹಾಕಿ ಕುಣಿತಾರೆ, ನಮ್ಮ ಗಂಡಸರು ಮೈತುಂಬ ಬಟ್ಟೆ ಹಾಕಿದ್ದಲ್ದೇ ಹೆಣ್ಣಿಮಕ್ಕಳ ವೇಲ್ ಬೇರೆ ಹಾಕೋತಾರೆ.
ಕೂತ್ಕೊಳ್ಳೋಕೆ ಜಾಗಾ ಸಿಕ್ತು ಪಕ್ಕದಲ್ಲಿದ್ದ ಪತ್ರಿಕೆ ಕೈಲಿ ಹಿಡಿದೆ, ದಿನಪತ್ರಿಕೆಗಳಲ್ಲಿ ಜಾಹಿರಾತು ಬಿಟ್ಟರೆ ಈ ಹೊಲಸು ಸರಕಾರದ ಹುಚ್ಚಾಟ ಉಳಿದ ಕಾಲಂಗಳಲ್ಲಿ ಅಪಘಾತ ಸುದ್ದಿಗಳು ಅದಕ್ಕೂ ಮಿಕ್ಕಿ ಉಳಿದರೆ ಜನಪರ ಬೇಡಿಕೆ ತೀರಿಕೆಗಳು, ನನಗಂತೂ ನುಡಿಮುತ್ತು ಕಾಲಂ ಎರಡೇ ಸಾಲಿದ್ದರೂ ಬಹಳ ಇಷ್ಟ, ಓದಿ ಕೆಳಗಿಟ್ಟೆ ಕ್ಯೋ ಸ್ವಲ್ಪ ಕರಗಿತ್ತು, ಟಿ.ವಿ ಕಡೆ ನೋಡಿದೆ ಶುರು ಗೇನ್, ಸ್ಲಿಂ, ಮಕ್ಕಳ ಸಂತಾನ ನಿಲ್ಲಿಸೋ ಎಮೆರ್ಜಜನ್ಸೀ ಕಾಂಟರ್‍ವರ್ಸಿಗಳು, ನಾವು ಎಲ್ಲೇ ಹೋಗ್ಲಿ ನಾಯಿ ನಮ್ಮ ಹಿಂದೆ ಬರತ್ತೋ ಅಥವಾ ನಾವು ನಾಯಿ ಹಿಂದೆ ಹೋಗ್ತೀವೋ? ಆ ಸುಡುಗಾಡು ನಾಯಿ ತನ್ನ ಸೈಜಿಗೆ ಮೀರಿದ ಕೆಲ್ಸ ಮಾಡುತ್ತೆ, ಗಂಡಸರ ಶೇವಿಂಗ್ ಕ್ರೀಮ್‍ಗೂ ಸುಂದರ ಹೆಣ್ಣಿಗೂ ಏನ್ರೀ ಸಂಬಂಧ, ಮೊನ್ನೆ ತಾನೇ ನನ್ನ ಸೌಂದರ್ಯದ ಗುಟ್ಟು ಈ ಕ್ರೀಮ್ ಎಂದ ನಟಿ ಇವತ್ತು ಬೇರೆ ಕ್ರೀಮ್ ಹಚ್ಕೊಳ್ಳಿ ಅಂತಾಳೆ, ರಾಮನ ಹೆಂಡತಿ ಆಗಿ ರಾಮದಾಸನ ಹೆಂಡತಿ ಆಗಿ ನಟಿಸಿದ ಇನ್ನೊಬ್ಬ ನಟಿ ಕಾಸಿನಾಸೆಗೆ ಮಾಂಸ ತೋರಲು (ಮಾರಲು) ಮುಂದಾಗಿದ್ದಾಳೆ. ಇನ್ನೂ ಸ್ವಲ್ಪ ಹೊತ್ತು ಹೀಗೆ ಸಂಕುಚಿತ ಮನಸ್ಸಿನವನಾದರೆ ಹುಚ್ಚು ಹಿಡಿಬಹುದು ಎಂದು ತಿಳಿದು ನಿಟ್ಟುಸಿರು ಬಿಟ್ಟು ಎದುರಿಗಿರೋ ಕನ್ನಡಿ ನೋಡುತ್ತಿದ್ದಂತೇ ಕಷೌರಿಕ ಕತ್ತರಿಯನ್ನು ಲಟ್-ಲಟ್ ಎನ್ನಿಸುತ್ತಾ ಸಾರ್ ತಮ್ಮದು ಶೇವಿಂಗಾ? ಅಥವಾ  ಕಟಿಂಗಾ?  ಎಂದ. ಎರಡೂ ಮಾಡಪ್ಪಾ ಅಂದು ಕುರ್ಚಿಗೆ ಕುಳಿತೆ, ಮೆತ್ತನೆಯ ಕುರ್ಚಿ ಸಿಂಹಾಸನದಂತೆ ಅನ್ನಿಸಿತು, ಕ್ಷೌರಿಕ ಮೈಮೇಲೆ ಬಟ್ಟೆ ಹೊದಿಸಿ ಗಂಟಲಿಗೆ ಗಂಟು ಹಾಕಿದ, ಸ್ಪ್ರೇಯರ್ ನಿಂದ ನೀರು ಚಿಮುಕಿಸಿದ ತಣ್ಣಗೆನಿಸಿತು ಎಣ್ಣೇ ಶ್ಯಾಂಪೂ ಹಾಕಿ ದಟ್ಟ ಕಾಡಿನಂತೆ ಬೆಳೆಸಿದ್ದ ಕೂದಲನ್ನು ಕತ್ತರಿಯಿಂದ ತೊಂಡರಿಸುತ್ತಿದ್ದ ನನಗೇ ತಿಳಿಯದಂತೆ ಹಾಗೇ ನಿದ್ದೆಯಲ್ಲಿ ಜಾರಿದೆ, ಕಟಿಂಗ್ ಮುಗಿದ ನಂತರ ಎಬ್ಬಿಸಿ ಸಾರ್ ಹಾಗೆ ಮಲ್ಕೊಂಡ್ರೆ ಹೆಂಗೆ ಸಾರ್ ತಮ್ಮದು ಮಷಿನ್ ಅಲ್ವಾ ಗೊತ್ತು ಸಾರ್ ತಾವು ಬ್ಲೇಡ್ ಹಾಕೊಲ್ಲಾ ಅನ್ನುತ್ತಾ ಟ್ರಿಮ್ಮರ್ ಮಷೀನ್‍ನ್ನು ಸಿದ್ದಪಡಿಸಿದ ವರ್ಷಕ್ಕೆ ಕೆಲವೊಮ್ಮೆ ಬರುವ ನಮ್ಮಂತಹ ಗಿರಾಕಿಗಳ ಇಷ್ಟ ಕಷ್ಟ ನೆನಪಿದೆಯಲ್ಲಾ ಎಂದು ಖುಷಿಯಾಯಿತು, ಆ ಟ್ರಿಮ್ಮರ್‍ನ ಸದ್ದಿಗೆ ನಿದ್ದೆ ಆವಿಯಾಯಿತು. ಒಂದು ವಿಶೇಷ ಅಂದರೆ ಕ್ಷೌರಕನ ನಡುವಳಿಕೆ ನನಗೆ ಇಷ್ಟವಾಗಲಿಲ್ಲಾ ಅವನ ಒಡೆಯ ಇದ್ದಾಗ ಮಾತ್ರ ಬಹಳ ಬಿರುಸಿನಿಂದ ಕೆಲಸ ಮಾಡ್ತಿದ್ದ ಸ್ವಲ್ಪ ಕಣ್ಮರೆಯಾದರೆ ಸಾಕು ಟಿ.ವಿ ಕಡೆ ನೋಡ್ಕೊಂಡು ಹಲ್ಲುಕಿರೀತಾ ನಿಧಾನಗತಿಯಲ್ಲಿ ಅವನ ಕೆಲಸ ಸಾಗುತ್ತಿತ್ತು. ಗಿರಾಕಿಗೆ ಯಾವಭಾಗ ಕತ್ತರಿಸ್ತಿದೀನಿ ಅನ್ನೋ ಪರಿಜ್ಞಾನವನ್ನೂ ಮರೆತ ರೀತಿಯಲ್ಲಿ ಅವನನ್ನ ಟಿ.ವಿ ನುಂಗಿಹಾಕುತ್ತಿತ್ತು. ಕುತುಗೆ ಎಡಕ್ಕೆ ಕತ್ತರಿಸೋದು ಮುಗಿದರೆ ಅವನು ಬಲಕ್ಕೆ ಬರುತ್ತಿರಲಿಲ್ಲಾ ಗಿರಾಕಿಗಳ ಕುತುಗೇನೇ ತನ್ನ ಎಡಕ್ಕೆ ತಿರುಗಿಸಿಕೊಂಡು ಕೆಲ್ಸಾ ಮಾಡ್ತಿದ್ದಾ. ಒಟ್ಟು ಅವ ಟಿ.ವಿ ನೋಡ್ತಾನೇ ಕೆಲ್ಸ ಮಾಡಬೇಕು ಅನ್ನೋದು ಅವನ ಹಟ..
ಏ ತಮ್ಮಾ ನನ್ನದು ಚರ್ಮದ್ದು ಕುತಿಗೆ ಪಾ, ಪ್ಲಾಸ್ಟಿಕ್ ಕುತ್ಗೆ ಅಲ್ಲಾ ಹಾಗೆ ನೀ ತಿರಿಗಿಸಿದ್ರೆ ನೋವಾಗತ್ತೆ. ಸಾರ್ ಮಷಿನ್ ದು ವಯರ್ ಸಣ್ಣದು ಸಾರ್ ಸುಧಾರಿಸಿಕೊಳ್ಳಿ, ತಮಾಷೆ ಮಾಡ್ಬೇಡಿ ಸಾರ್ ಹಿ ಹಿ ಹಿಹಿ. . . ನನ್ನ ಮೈದಾನ್ ಸಾಫ್ ಆಯ್ತು, ನನಗೆ ಹೊದಿಸಿದ್ದ ಬಟ್ಟೆಯನ್ನು ತೆಗೆದು ಮೃದುವಾಗಿ ಮೈಮೇಲೆ ಬಿದ್ದಿದ್ದ ಕೂದಲನ್ನು ಜಾಡಿಸಿದ ಕುರ್ಚಿಯಿಂದ ಎದ್ದು ಕನ್ನಡಿಯಲ್ಲಿ ಮುಖ ನೋಡಿಕೊಂಡಾಗ ದೇವರು ಮನುಷ್ಯನನ್ನು ಸೃಷ್ಟಿಸಿದರೆ ಒಬ್ಬ ಕ್ಷೌರಿಕ ಮತ್ತು ದರ್ಜಿ ಅವನನ್ನು ನಾಗರೀಕನನ್ನಾಗಿ ಮಾಡುತ್ತಾರೆ ಎಂಬ ಸತ್ಯ ತಿಳಿಯಿತು,
ದೇವರು ಎಂದ ತಕ್ಷಣ ದೇವಲೋಕಕ್ಕೆ ಜಿಗಿದ ಮನಸ್ಸು ದೇವರಿಗೆ ಯಾರೂ ಷೇವ್ ಮಾಡೋಲ್ಲಾ ಆದರೂ ಅದು ಹೇಗೆ ದೇವರು ದಾಡಿಬೆಳೆಯೋದನ್ನ ಕಂಟ್ರೋಲ್ ಮಾಡ್ತಾನೆ ಎಂದು ನೆನೆದು ಮುಗುಳ್ನಕ್ಕೆ ಅದಕ್ಕೆ ಪ್ರತಿಯಾಗಿ ಕ್ಷೌರಿಕ ಈಬಾರಿ ಚೆನ್ನಾಗಿ ಆಗಿದೆ ಅಲ್ವಾ ಸಾರ್ ಎಂದ. ತುಂಬಾ ಥ್ಯಾಂಕ್ಸ್‍ಪಾ ಬಾಯ್, ಹೊರಬಿದ್ದಾಗ ಕೈ ಗಳು ಶ್ಯಾಂಪೂ ಕೊಳ್ಳಲು ಚಿಲ್ಲರೆ ಹುಡುಕುತ್ತಿದ್ದವು.