# ಹೀಗೊಂದು ಬೇಟೆ
            ಹೀಗೊಂದು ಬೇಟೆ 
      By the way A Hunt by the  Pride


          ಉಕ್ಕಿದ ನೆಲದ ನಗುವನ್ನು ತಂಗಾಳಿಯು ಸೀಳಿಕೊಂಡು ಎಲ್ಲಾ ಜೀವಜಂತುಗಳ ಮೈತೊಳೆಯುತ್ತಿತ್ತು.  ಎಲೆಗಳ ಮೆರುಗನ್ನು ಮುತ್ತಿಕ್ಕುತ್ತಾ ಹಕ್ಕಿಗಳಿಗೆ ಕಚಗುಳಿ ಇಟ್ಟು ನಗಿಸುತ್ತಿತ್ತು. ಜಿಂಕೆ, ಮೊಲಗಳು ಚಂಗನೆ ಹಾರುತ್ತಾ ನೆಲದ ಹುಲ್ಲುಹಾಸಿನ ಮೇಲೆ ಉರುಳುತ್ತಾ ದಿನದ ಶುಬಾರಂಭವನ್ನು ಸಂತೋಷದಿಂದ ಆಚರಿಸುತ್ತಿದ್ದವು. ಮುಂಜಾನೆ ಮಧಯಾಹ್ನವಾಗುವ ಸಮಯ, ಜಿಂಕೆಯ ಹಿಂಡೊಂದು ಹುಲ್ಲು ಮೇಯುತ್ತಿವೆ, ಮೊಲ, ಅಳಿಲುಗಳು ಮೋಡಗಳನ್ನು ಮುಟ್ಟಲೆಂದೇ ಬಾನೆತ್ತರಕ್ಕೆ ನೆಗೆದು ತನ್ನ ಬಾಹುಗಳನ್ನು ಬಿಚ್ಚಿಕೊಂಡ ಮರದ ಕೆಳಗಿನ ಒಣ ಎಲೆಗಳನ್ನು ಸದ್ದು ಮಾಡುತ್ತಾ ಅಲ್ಲಿ ಬಿದ್ದಿದ್ದ ಹಣ್ಣುಗಳನ್ನು ತಿನ್ನುತ್ತಿವೆ. ಅರಣ್ಯದ ಈ ಸುಂದರ ಸಾಮೂಹಿಕ ಉಪಹಾರ ಸೇವನೆ ಭೂಮಿ ತಾಯಿಯನ್ನು ನಗುವಿಗೆ ಮೆರಗನ್ನು ತಂದುಕೊಡುತ್ತಿದ್ದವು.

            ಎಲ್ಲವೂ ಮೈಮರೆತು ಪ್ರಕೃತಿ ಸೊಬಗಿನಲ್ಲಿ ತೇಲುತ್ತಾ ತಮ್ಮ ತಮ್ಮ ದೇಹ ಮತ್ತು ಮನಸ್ಸನ್ನು ತಣಿಸುತ್ತಿವೆ. ಅದೇನಾಯಿತೋ? ಇದ್ದಕ್ಕಿದ್ದಂತೆ ತಂಗಾಳಿಯು ತನ್ನ ಹೆಜ್ಜೆಗಳನ್ನು ಹಿಂದಕ್ಕೆ ಇಡುತ್ತಾ ನಿಧಾನವಾಗಿ ಮಾಯವಾಯಿತು. ಹಕ್ಕಿಗಳ ನಗು ಪಿಸುಮಾತಾಗಿ ನಿಶ್ಯಬ್ದವನ್ನು ತಲುಪಿತು. ಕೆಲವೇ ಕ್ಷಣಗಳಲ್ಲಿ ಸ್ಮಶಾನ ಮೌನ ಇಡೀ ಕಾಡನ್ನೇ ಆವರಿಸುವಂತೆ ಭಾಸವಾಯಿತು. ಆ ಭಯಾನಕತೆ ದೂರವಿರಲಿಲ್ಲ, ಭೂಮಿಯ ನಗುವಿನ ಅಂಚಿನಲ್ಲೇ ಹೊಂಚುಹಾಕಿ ಕುಳಿತಿತ್ತು. ತನ್ನ ಮಿಂಚಿನ ಕಣ್ಣಿನಿಂದ ತನ್ನೊಡಲ ರಕ್ತದಾಹದ ಬೇಗೆಯನ್ನು ತೀರಿಸುವ ಬೇಟೆಯನ್ನೇ ನೋಡುತ್ತಾ, ಶಬ್ದವನ್ನು ಕೊಲ್ಲುವಂತಹ ಸೂಕ್ಷ್ಮ ಹೆಜ್ಜೆಗಳನ್ನಿಟ್ಟು ಜಿಂಕೆಗಳ ಹಿಂಡನ್ನು ಸುತ್ತುವರೆಯುತ್ತಿತ್ತು. ಮೈಮರೆತು ಮೆಲ್ಲುತ್ತಿರುವ ಜಿಂಕೆಗಳಿಗೆ ಪ್ರಕೃತಿ ಮಾತೆಯ ಈ ಸೂಕ್ಷ್ಮ ಕುರುಹುಗಳನ್ನು ಗ್ರಹಿಸಲು ಆಗಲಿಲ್ಲ. ರಕ್ತದಾಹಿಗಳು ಎಂಟು ದಿಕ್ಕುಗಳಿಂದ ಆವರಿಸಿ ಕೇಂದ್ರದ ಕಡೆಗೆ ತೆವಳುತ್ತಾ ಜಿಂಕೆಗಳಿಗೆ ಹತ್ತಿರವಾದವು. . .

            ಎದೆಯನ್ನು ಸೀಳುವಂತಹ ತೀಕ್ಷ್ಣವಾದ ಪಂಜುಗಳನ್ನು ಬಿಡಿಸಿ ಜಿಂಕೆಗಳೆಡೆಗೆ ಚಂಗನೆ ಸಿಂಹದ ಜೊತೆಗೆ ನೆಗೆದ ಘರ್ಜನೆ ಮೌನವನ್ನು ಕೊಂದು ಮುಂದಿನ ಬಲಿಗಾಗಿ ಓಡಿತ್ತು. ಪಕ್ಷಿಗಳೆಲ್ಲಾ ಬಾನೆತ್ತರಕ್ಕೆ ಹಾರಿದವು, ಸಾವನ್ನು ಅತ್ಯಂತ ಹತ್ತಿರದಿಂದ ಕಂಡ ಜಿಂಕೆಗಳು ತಮ್ಮ ಶಕ್ತಿಯನ್ನೆಲ್ಲಾ ಕಾಲುಗಳಿಗೆ ಹಾಕಿ ಉಸಿರು ಭಿಗಿ ಹಿಡಿದು ದಿಕ್ಕಾಪಾಲಾಗಿ ಓಡಿತ್ತಿದ್ದವು. ಅವುಗಳ ಪಕ್ಕದಲ್ಲಿ ನೆಗೆದು  ಮೇಲೆ ಅಪ್ಪಳಿಸಿ ಜಿಂಕೆಗಳ ಹೃದಯದ ವೇಗವನ್ನು ದ್ವಿಗುಣಗೊಳಿಸುತ್ತಾ ಕ್ಷಣ ಕ್ಷಣಕ್ಕೂ ಜೀವದ ಬೆಲೆಯನ್ನು ತಂದುಕೊಡುತ್ತಾ ಗಜವೈರಿಗಳ ಗರ್ವದ ಬೇಟೆ ಶಿಸ್ತಿನಿಂದ ಸಾಗಿತ್ತು. ಪ್ರಾಣವನ್ನು ಪಣವಿಟ್ಟು ಓಡುತ್ತಿದ್ದ ಜಿಂಕೆಯ ಕಾಲು ಸೋತು, ಪ್ರಾಣ ಸಿಂಹದ ದವಡೆಯಲ್ಲಿ ಅವಿತುಕುಳಿತು ದೇಹವನ್ನು ಇಣುಕಿ ನೋಡುವಷ್ಟರಲ್ಲಿ ಹರಿದು ಹಂಚಿಹೋಗಿತ್ತು. ಪಾಲಿನ ಮೇಲೆ ಪಾಲು ಹಂಚಿಕೊಂಡು, ಒಡಲನ್ನು ಸಂತೃಪ್ತಿಗೊಳಿಸಿಕೊಂಡು, ದೂರ ಬಂಡೆಯಮೇಲೆ ಒರಗಿಕೊಂಡು ಮೈ ಕೈ ಗಳನ್ನು ನೆಕ್ಕುತ್ತಿದ್ದ ಸಿಂಹಗಳಿಗೆ ನಿದ್ರೆ ಆವರಿಸಿತು.

ಅಡಗಿ ಕುಳಿತಿದ್ದ ತಂಗಾಳಿ ಮತ್ತೆ ಪಸರಿಸಲು ಪ್ರಾರಂಭಿಸಿತು. ಹಕ್ಕಿಗಳು ಪಿಸುಗುಟ್ಟಿದವು, ತನ್ನ ಮಿತ್ರನನ್ನು ಕಳೆದುಕೊಂಡ ಜಿಂಕೆಗಳು ಭಯ ಮತ್ತು ದುಖಃದಿಂದ ಸುತ್ತಲೂ ನೇಡುತ್ತಾ ಎಚ್ಚರಿಕೆಯಿಂದ ಓಡಾಡತೊಡಗಿದವು. ಮದ್ಯಾಹ್ನ ಸಂಜೆಂiÀiನ್ನು ಭೇಟಿಮಾಡುವ ಸಮಯ, ಮರದ ಕೆಳಗೆ ಸದ್ದಿಲ್ಲದೆ ನಿಧಾನವಾಗಿ ಬುಡದ ಅಂಚಿನಲ್ಲಿಯೇ ಕದ್ದು ಕುಳಿತು ಒಣ ಹಣ್ಣನ್ನು ತಿನ್ನುತ್ತಿದ್ದ ಜೋಡಿಮೊಲಗಳ ಕಣ್ಣಲ್ಲಿನ ಭಯ ಆವಿಯಾಗುತಿದ್ದಂತೆ ಧಬ್ ಎಂಬ ಶಬ್ದ! ಮತ್ತೆ ಹೃದಯಬಡಿತ ದ್ವಿಗುಣಗೊಂಡು ಎಲ್ಲಾ ಪ್ರಾಣಿಗಳು ಚದುರಿದವು, ಹಕ್ಕಿಗಳು ಗರಿಬಿಡಿಸಿ ಈಜಿದವು. ಆದರೆ ಯಾವುದೇ ಆತಂಕ ಇರಲಿಲ್ಲ. ವನಮಾತೆ ಭಯದಿಂದ ತತ್ತರಿಸಿದ ಮೊಲಗಳಿಗೆಂದೇ ಭಾರವಾದ ಪ್ರಾಯತುಂಬಿದ ಹಣ್ಣನ್ನು ಭೂಮಿಗೆ ಎಸೆದಿದ್ದಳು. ಶಬ್ದದಿಂದ ಆತಂಕಗೊಂಡ ಜೀವಗಳು ನಿಜತಿಳಿದು ನಿಟ್ಟುಸಿರು ಬಿಟ್ಟು ಸಂಜೆಯನ್ನು ಸ್ವಾಗತಿಸಿದವು. . . . .