# ಮನಸೆಳೆದ ಒಣಮರ


# ಮನಸೆಳೆದ ಒಣಮರ 

          ನಾನು ಶಿಕ್ಷಕ ವೃತ್ತಿಗೆ ಸಂದರ್ಶಕ್ಕೆ ಹೋದಾಗ ಜೂನ್ 2 ಗುರುವಾರ. ಸಂದರ್ಶನ ಆದ್ದರಿಂದ ನನ್ನ ದಾಡಿ ಸಣ್ಣದಾಗಿಸಿ. ಒಳ್ಳೆ ಬಟ್ಟೆ ಧರಿಸಿ ಹೋದೆ, ಶಾಲೆಯ ಹತ್ತಿರ ಹೋಗುತ್ತಿದ್ದಂತೆ ತಕ್ಷಣ ಕಂಡಿದ್ದು ಶಾಲೆಯ ನಾಮಪಲಕ, ಸರಿಯಾದ ಜಾಗದಲ್ಲಿ ಇರಲಿಲ್ಲ ಮತ್ತು  ಹೆಸರು ಮಸುಕಾಗಿತ್ತು.  ಬಹಳ ವಯಸ್ಸಾದ ಪಲಕ. ಶಾಲೆಯ ಆವರಣವೇ ಮೈದಾನ ಮೈದಾನವೇ ಆವರಣ ಅಂದರೆ ಬಹಳ ದೊಡ್ಡ ಆವರಣ. ಎರಡು ಅಂತಸ್ತಿನ ಶಾಲೆಗೆ ಯಾವುದೇ ಕಾಂಪೌಂಡ್ ಇರಲಿಲ್ಲ, ಶಾಲೆಗೆ 6 ಮೆಟ್ಟಿಲುಗಳು ಏರಿದರೆ ಎದುರಿಗಿದ್ದ ಕೋಣೆಯಲ್ಲಿ ಭಗವಾನ್ ವಿಷ್ಣುವಿನ ದಶಾವತಾರದ ವರ್ಣಚಿತ್ರ, ಶಾಲೆಯ ಮೆಟ್ಟಿಲು ಹತ್ತಿ ಬಲಕ್ಕೆ 10 ಹೆಜ್ಜೆÉ ಇಟ್ಟರೆ ಮೋಲೆಯಲ್ಲಿ ಕಛೇರಿ. ಶಾಲೆ ಮೆಟ್ಟಿಲೇರುತ್ತಲೆ ಮನ ಸೆಳೆದದ್ದು ಶಾಲೆಯ ಕಟ್ಟಡÀದೆತ್ತರಕ್ಕೆ ಬೆಳೆದ ಒಂದು ಒಣ ಬೇವಿನಮರ. ಹೌದು, ಒಣ ಬೇವಿನಮರ. ಇದರಲ್ಲೇನಿದೆ ಆಶ್ಚರ್ಯ ಅನ್ನಬಹುದು ಆದರೆ ನಿಜವಾಗಿಯೂ ನನಗೆ ಅದೊಂದು ಆಶ್ಚರ್ಯ. ಆ ಮರ ಒಣಗಿದೆ ಆದರೆ ಅದಕ್ಕೆ ತುಸು ಹತ್ತಿರವಿದ್ದ ಯಾವ ಮರವೂ ಒಣಗಿರಲಿಲ್ಲ್ಲ, ಅದರ ಬುಡದಲ್ಲಿ ಬೆಳೆದಿದ್ದÀ ಸಣ್ಣಪುಟ್ಟ ಗಿಡಗಳು ಹಚ್ಚಹಸಿರಾಗಿವೆ !. . .

           ನನಗೆ ಸುಮಾರು ವರ್ಷದಿಂದ ಅಂದರೆ ವಿಕ್ರಮರ್ಕನ ಬೇತಾಳದ ಕಥೆ ಓದಿದಾಗಲಿಂದ ಯಾವುದೇ ಒಣ ಮರ ಕಂಡರೆ ಸ್ವಲ್ಪ ಅದನ್ನು ನೋಡಬೇಕೆನ್ನುಸುತ್ತದೆ. ನಿಜಕ್ಕೂ ಆ ಒಣ ಮರ ನನ್ನನ್ನು ಸಿಟ್ಟಿನಿಂದ ನೋಡುತ್ತಿದೆ ಎನ್ನಿಸಿತು. ಅದನ್ನು ನೋಡಿದಕೋಡಲೇ ನಾನು ಯೋಚಿಸಿದ್ದು ಈ ಮರ ಮತ್ತೆ ಚಿಗುರುವುದರೊಳಗೆ ನಾನು ಈ ಶಾಲೆಯಲ್ಲಿ ನನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವುದು ಎಂದು. ನನ್ನ ಯೋಚನೆ ಸರಿಯಾಗಿ ಫಲಕಾರಿಯಾಯಿತು ಆದಿನ ಚೆನ್ನಾಗಿ ನನ್ನ ಸಂದರ್ಶನವಾಯಿತು. ಹೇಳಿಕೊಳ್ಳುವಂತಹ ವಿಷೇಶತೆ ಏನೂ ನಡೆಯಲಿಲ್ಲ ಆದರೆ ನನ್ನನ್ನು ಸಂದರ್ಶಿಸಿದ ವ್ಯಕ್ತಿ ಸುಮಾರು ನಾಲ್ಕುವರೆ ಅಡಿ ಎತ್ತರ ಇರಬಹುದು, ಆ ಶಾಲೆಯ ಮುಖ್ಯ ನಿರ್ವಹಣೆಗೆ ಸಂಬಂಧಿಸಿದವರು. ಆತನ ಕನ್ನಡಕದಿಂದ ಬರುವ ನೋಟಗಳು ಬಹಳ ತೀಕ್ಷ್ಣವಾಗಿದ್ದವು ನನಗೆ ಆತ ಸೂಕ್ಷ್ಮ ವ್ಯಕ್ತಿ ಅನ್ನಿಸಲಿಲ್ಲ ಸ್ವಲ್ಪ ಒರಟಾಗಿ ಕಾಣಿಸಿದ. ಮಾಮೂಲಿನಂತೆ ಎಲ್ಲಾ ಶಾಲಾ ಒಡೆಯರು ಹೀಗೇ ಕೆಲವರು ಸೌಮ್ಯರೀತಿಯವರಾದರೆ ಮತ್ತೆ ಕೆಲವರು ಅವರಿಗೆ ಮಾನವ ಹೃದಯ ಇದೆಯೆಂಬುದೇ ಮರೆತಿರುತ್ತಾರೆ. ಆತ ಬಹಳ ಬುದ್ಧಿವಂತ ಉಳಿದವರು ಶತದಡ್ಡರು ಎನ್ನುವ ಮನೋಭಾವ ಹೊಂದಿದವನು ಎಂದು ಅವನ ಮುಖದಲ್ಲಿ ಎದ್ದುಕಾಣುತ್ತಿತ್ತು. ಸಂದರ್ಶನದಲ್ಲಿ ಅನೇಕ ಪ್ರಶ್ನೆಕೇಳುವುದು ಸರ್ವೇಸಾಮಾನ್ಯ ಆದರೆ ಇಲ್ಲಿ ಕೆಲವು ವಿಷೇಶ ಪ್ರಶ್ನೆಗಳು ಕೇಳಲಾಯಿತು ಅವು ನನಗೆ ಇಂದಿಗೂ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದೆ ಎನನಿಸುತ್ತಿಲ್ಲಾ, ಯಾವುದೋ ದೊಡ್ಡÀ ಸವಾಲಾಗಿರುವ ಹುದ್ದೆಗೆ ಕೇಳುವ ಪಶ್ನೆಗಳು ಅನ್ನಿಸಿದವು. ಆತ ಕೇಳಿದ ಕೆಲವು ಪ್ರಶ್ನೆಗಳು ಮತ್ತು ಆ ಪ್ರಶ್ನೆಗಳಿಗೆ ನನ್ನ ಉತ್ತರ ಹೀಗಿದ್ದವು---------

ಸಂದರ್ಶನ
ಸಂದರ್ಶಕ: (ನನ್ನ ರೆಸೂಮ್ ನೋಡಿ ಕೆಳಗಿಟ್ಟು) ಓಕೆ ಗೌತಮ್ ಸರ್ ನೀವು ಈ ಹಿಂದೆ ಎಲ್ಲಿಯಾದರು ಕೆಲಸ ಮಾಡಿದ್ದೀರ?
ನಾನು: ಹೌದು ಸರ್ ನಾನು ಕಳೆದ ವರ್ಷ “ವೀರಶೈವ ವಿಧ್ಯಾವರ್ಧಕ ಸಂಘದ ವಿವೇಕಾನಂದ ಪಬ್ಲಿಕ್ ಶಾಲೆ, ಸಿರುಗುಪ್ಪ” ದಲ್ಲಿ ಶಿಕ್ಷಕನಾಗಿ ಕೆಲಸ ಮಾಡಿದ್ದೇನೆ.
ಸಂ: ಮತ್ತೆ ನನ್ನ ರೆಸೂಮ್ ಕೈಗೆತ್ತಿಕೊಂಡು ನೋಡುತ್ತಾ ನಿಮ್ಮದು ಕಂಪ್ಯೂಟರ್ ಹಾರ್ಡವೇರ್ ಆಗಿದೆ ಟೆಕ್ನಿಕಲ್ ಕಡೆಗೆ ಹೋಗಬಹುದಲ್ವಾ?
ನಾನು: ನಿಜ ಸರ್ ಆದರೆ ನನಗೆ ಈ ವೃತ್ತಿಯೇ ಸಂತೋಷ, ನನಗೆ ಶಿಕ್ಷಕ ವೃತ್ತಿ ಬಹಳ ಇಷ್ಟ.
ಸಂ: ಓಕೆ ಗೌತಮ್ ಸರ್ ನಿಮ್ಮ ಇಂಗ್ಲೀಷ್ ಇನ್ನು ಅಭಿವೃದ್ದಿ ಆಗಬೇಕು. ಬಹಳ ನಿರರ್ಗಳವಾಗಿ ಮಾತಾಡಬೇಕು.
ನಾನು: ಖಂಡಿತ ಸರ್ ನಾನು ಅದರ ಬಗ್ಗೆ ಗಮನ ಕೊಡ್ತೀನಿ.
ಸಂ: ಓಕೆ…….. ಇದರÀ ಅಳತೆ ಎಷ್ಟಿರಬಹುದು ಅಂತ ಹೇಳುತ್ತಾ ಎರಡೂ ತೋರುಬೆರಳುಗಳನ್ನು ಟೇಬಲ್ ಅಂಚಿನ ಮಧ್ಯೆ ಇಟ್ಟು ಎರಡೂ ಬೆರಳನ್ನು ಅಗಲಿಸಿದ ಟೇಬಲ್‍ನ ಎರಡೂ ಅಂಚಲ್ಲಿ ಎರಡು ಬೆರಳುಗಳು ಹೋಗಿ ನಿಂತವು,
ನಾನು: ಸುಮಾರು 2.5 ರಿಂದ 3 ಅಡಿಗಳಿರಬಹುದು ಸರ್.
ಸಂ: ಸರಿ ಇದರ ಅಳತೆ ಗೊತ್ತಿಲ್ಲ ನೀವು ಅಳತೆಪಟ್ಟಿ ಉಪಯೋಗಿಸದೆ ಇದರ ಮಧ್ಯಬಿಂದುವನ್ನು ಸರಿಯಾಗಿ ಹೇಗೆ ಗುರುತಿಸುತ್ತೀರಿ?
(ನನಗೆ ನಿಜವಾಗಲೂ ಅರ್ಥವಾಗಲಿಲ್ಲ, ಒಂದು ಕ್ಷಣ ವಿಕ್ರಮಾರ್ಕನ ಬೇತಾಳದ ಪ್ರಶ್ನೆ ಅನ್ನಿಸಿತು, ನಾನು ಕ್ಷಮಿಸಿ ಸರ್ ಎಂದೆ)
ಸಂ: (ತಕ್ಷಣ ಎದುರಿಗಿದ್ದ ಹಾಳೆಯಮೇಲೆ ಒಂದು ಸರಳರೇಖೆ ಎಳೆದ) ಇದರ ಮಧ್ಯಬಿಂದುವನ್ನು ಕಂಡುಹಿಡಿಯಿರಿ ಅದು ಅಳತೆ ಪಟ್ಟಿ ಉಪಯೋಗಿಸಕೂಡದು!
ನಾನು: (ಆ ಹಾಳೆ ಹಿಡಿದು ನನ್ನತ್ತ ಎಳೆದುಕೊಂಡೆ) ಬಹಳ ಸರಳ ಸರ್ ಒಂದು ಕೈವಾರದ ಸಹಾಯದಿಂದ ಸುಲಭವಾಗಿ ಕಂಡುಹಿಡಿಯಬಹುದು!
ಸಂ: ಹೇಗೆ ಗುರುತಿಸಬಲ್ಲಿರಿ?
ನಾನು: ಈ ರೇಖೆಯ ಒಂದು ಅಂತ್ಯಬಿಂದುವಿನಲ್ಲಿ ಕೈವಾರವನ್ನು ಇಟ್ಟು ರೇಖೆಯ ಅರ್ಧಕ್ಕಿಂತ ಹೆಚ್ಚಿನ ಅಳತೆ ತೆಗೆದುಕೊಂಡು ಮೇಲೆ ಮತ್ತು ಕೇಳಗೆ ಎರಡು ಖಂಸಗಳನ್ನು ರಚಿಸಬೇಕು ಅದೇರೀತಿ ರೇಖೆಯ ಇನ್ನೊಂದು ಅಂತ್ಯ ಬಿಂದುವಿನಲ್ಲಿ ಕೈವಾರವನ್ನಿಟ್ಟು ಮೇಲೆ ಕೆಳಗೆ ಎರಡು ಖಂಸಗಳು ಛೇದಿಸುವಂತೆ ಖಂಸಗಳನ್ನು ಎಳೆಯಬೇಕು, ನಂತರ ಎರಡೂ ಛೇದಿಸಿದ ಬಿಂದುಗಳನ್ನು ಸರಳರೇಖೆಯಿಂದ ಸೇರಿಸಿದಾಗ ಆ ರೇಖೆಗಳೆರಡೂ ಮಧ್ಯಬಿಂದುವಿನಲ್ಲಿ ಛೇದಿಸುತ್ತವೆ ! ಎಂದು ಹೇಳುತ್ತಿರುವಾಗ ಮಧ್ಯ ಬಾಯಿ ಹಾಕಿ
ಸಂ: ಸರಿ ನೀವು ಪೈತಾಗೊರಸ್‍ನ ಪ್ರಮೇಯವನ್ನು ಮಕ್ಕಳಿಗೆ ಹೇಗೆ ಕಲಿಸುತ್ತೀರ?
ನಾನು: ತುಂಬಾ ಸುಲಭ ಸರ್ ಮಕ್ಕಳಿಗೆ ಲಂಬಕೋನ ತ್ರಿಭುಜ. . . . . . . . . .
ಸಂ: ಸರಿ ಹಾಗಾದರೆ ನೀವು ಒಂದು ಉಚಿತ ಬೋಧನೆ (ಡೆಮೊ ಕ್ಲಾಸ್) ಕೊಡಿ. ನಾಳೆ ಶಾಲೆವೇಳೆಗೆ ಬಂದುಬಿಡಿ.
ನಾನು: ಸರಿ ಸರ್.

           ಸಂದರ್ಶನ ಮುಗಿದು ಶಾಲೆಯಿಂದ ಹಿಂತಿರುಗುವಾಗ ಆ ಮರ ನೋಡಿ ಬಹುಷಃ ನನಗೆ ಕೇಳಿದ ಆ ಬೇತಾಳ ಪ್ರಶ್ನೆಗೆ ಇದೇ ಮರ ಕಾರಣವೇನೋ ಅನ್ನಿಸಿತು. ನಿನಗಿಂತ ನಾನು ಸ್ವಲ್ಪ ವೇಗವಾಗಿದ್ದೇನೆ ಎಂದು ಮನದಲ್ಲಿ ನಕ್ಕೆ. ಮರುದಿನ ನನ್ನ ಉಚಿತ ಬೋಧನೆ ಅವರಿಗೆ ಹಿಡಿಸಿತು ಕೊನೆಗೆ 4,000 ಸಂಬಳಕ್ಕೆ ಒಪಪಿದರು. ಆದರೆ ಒಪ್ಪುವಾಗ ಮಾತ್ರ ಆತ ಹೇಳಿದ ಒಂದು ಮಾತು ನನಗೆ ಇಂದೂ ಸವಾಲಾಗಿದೆ ಅದೆಂದರೆ “ನೋಡಿ ಗೌತಮ್ ಸಾರ್ ನಾನು ನಿಮಗೆ 10,000ರೂ ಕೊಡೋಕೆ ತಯಾರಿದ್ದೇನೆ ಆದರೆ ನನಗೆ ನೀವು ಆ ಬೆಲೆಗೆ ತಕ್ಕ ಕೆಲಸ ಮಾಡಬೇಕು.” ನನಗೆ ಒಂದು ಶಾಲೆಯಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಸಾಧನೆ ಬಿಟ್ಟರೆ ಇನ್ನೇನೂ ಕೆಲಸವಿಲ್ಲ ಮತ್ತು ಎಲ್ಲಾ ಶಿಕ್ಷಕರೂ ಅದಕ್ಕೇ ಶ್ರಮಿಸಿವರು ಆದರೆ ಈತ ಮಾತ್ರ ಹಾಗೆ ಹೇಳಿದ್ದು ನನಗೆ ಅರ್ಥವಾಗಲಿಲ್ಲ. ಅದೇನೋ ವ್ಯವಹಾರಿಕ ವಾಕ್ಯ ಅಂದುಕೊಂಡು ಸುಮ್ಮನಾದೆ. ದಿನಾ ಮಾಮೂಲಿನಂತೆ ನನ್ನ ಕೆಲಸ ನಡೆಯುತ್ತಿತ್ತು. ಕೆಲವು ವಾರಗಳ ನಂತರ ನನ್ನ ಕಣ್ಣು ಮತ್ತÉ ಆ ಮರದಮೇಲೆ ಹಾಯಿತು ಅದೇ ಒಣಗಿದಮರ. . . . . . . . . . 

ಮರ ಒಣಗಲು ಕಾರಣಗಳು

           ಈವರೆಗೂ ಆ ಮರವನ್ನು ಚೆನ್ನಾಗಿ ಪರೀಕ್ಷಿಸದ ನಾನು ಆ ಮರಕ್ಕೆ ವಿದ್ಯುತ್ ತಂತಿ ತಗಲಿರಬಹುದೇ ಪರೀಕ್ಷಿಸಿದೆ ಆದರೆ ಯಾವುದೇ ರೀತಿಯ ಆತಂಕಗಳು ಆ ಮರಕ್ಕೆ ಇರಲಿಲ್ಲ. ಮತ್ತೆ ಕಾಂಡದ ತೊಗಟೆಗೂ ಯಾವುದೇ ರೀತಿಯ ಪೆಟ್ಟು ಬಿದ್ದಿರಲಿಲ್ಲ. ಬರುಬರುತ್ತಾ ನನ್ನ ಕುತೂಹಲ ಅಲ್ಲಿದ್ದ ಬೇರೆಯವರನ್ನೂ ಆ ಮರದಬಗ್ಗೆ  ಕೇಳುವಂತೆಮಾಡಿತು. ನಾನು ನನ್ನ ಸಹೋದ್ಯೋಗಿಗಳನ್ನು ಮತ್ತು ಶಾಲೆಯ ಅಕ್ಕ-ಪಕ್ಕದವರನ್ನೂ ಮರದಬಗ್ಗೆ ವಿಚಾರಿಸಿದೆ ಪ್ರತಿಯೊಬ್ಬರೂ  ಒಂದೊಂದು ಕಾರಣ ಹೇಳಿದರು ಅವು ನಿಜಕ್ಕೂ ಅಪರೂಪದ ಕಾರಣಗಳು ಅವುಗಳಲ್ಲಿ ಕೆಲವು ಹೀಗಿದ್ದವು. . . . . .  
1) ಬೇರಿಗೆ ನೀರಿನ ಕೊರತೆ ಮತ್ತು ಕೆಲವು ರಸಾಯನಿಕ ವ್ಯತ್ಯಾಸ ಆಗಿರಬಹುದು.
2) ಆ ಮರ ಮಕ್ಕಳ ಶೌಚಾಲಯಕ್ಕೆ ಬಹಳ ಹತ್ತಿರವಿತ್ತು ಆದ್ದರಿಂದ ಮೂತ್ರ ವಿಸರ್ಜನೆಯಿಂದ ಮೂತ್ರದಲ್ಲಿನ ಯೂರಿಲಿಕ್
   ಆಸಿಡ್‍ನ ಪ್ರಭಾವದಿಂದ ಅದು ಒಣಗಿರಬಹುದು                     
3) ಬಹುಷಃ ಅದಕ್ಕೆ ವಯಸ್ಸಾಗಿರಬಹುದು.
4) ನನಗಂತೂ ಗೊತ್ತಿಲ್ಲ ನನಗೇನು ಕೇಳಬೇಡಿ.
5) ಅದು ಮತ್ತೆ ಚಿಗುರುತ್ತದೆ.
6) ಮಾಟ ಮಂತ್ರದ ಪ್ರಭಾವದಿಂದ ಅದು ಒಣಗಿದೆ ಹೀಗೇ ನಮ್ಮ ಊರಲ್ಲೂ ಆಗಿತ್ತು.
      
              ಹೀಗೆ ಕೇಳಿದವರ ಬಾಯಿಂದ ಅನೇಕ ರೀತಿಯ ಕಾರಣಗಳು ಬಂದವು. ಆದರೆ ನನಗೆ ಹಿಡಿಸಿದ್ದು ಮತ್ತು ನಾನು ನಂಬಿದ ಕಾರಣವೆಂದರೆ “ಅದು ಮತ್ತೆ ಚಿಗುರುತ್ತೆ!.” ಹೀಗೆ ಹಲವು ಕಾರಣಗಳನ್ನು ತಿಳಿದಮೇಲೆ ಇದು ಸರ್ವೇಸಾಮಾನ್ಯ ಎಲ್ಲ ಮರಗಳಲ್ಲೂ ಇಂತಹ ವಿಷೇಶತೆ ಇರುತ್ತದೆ. ಹೊಸಚಿಗುರು ಎಲೆಗಳಿಲ್ಲದ ಮರದಲ್ಲೇ ಚೆನ್ನಾಗಿ ಕಾಣುತ್ತೆ ಅಂದುಕೊಂಡು ನನ್ನ ಕುತೂಹಲಕ್ಕೆ ಪೋರ್ಣವಿರಾಮ ಹಾಕಿಕೊಂಡೆ.

ವರ್ಷದ ಕಟ್ಟ ಕಡೆಯ ದಿನ

            6 ತಿಂಗಳು ಕಳೆಯಿತು ಆಕಸ್ಮಿಕವಾಗಿ ನನ್ನಕಣ್ಣು ಆ ಮರದಕಡೆಗೆ ಹಾಯಿತು, ಯಾವ ಚಿಗುರೂ ಇಲ್ಲ, ಮರ ಹೆಚ್ಚು ಒಣಗಿತ್ತು ಗಾಳಿಬಂದಾಗ ಸಣ್ಣಪುಟ್ಟ ರೆಂಬೆಗಳು ಉದುರುತ್ತಿದ್ದವು. ಒಂದುವೇಳೆ ರೋಗ ಎಂದಾದರೆ ಆ ಮರಕ್ಕೆ ಮಾತ್ರ ಯಾಕೆ ಅದರ ಸಮೀಪದಲ್ಲಿದ್ದ ಮತ್ತು ಅದಕ್ಕೆ ಅಂಟಿಕೊಂಡು ಬೆಳೆದ ಸಣ್ಣ ಗಿಡಗಳಿಗೆ ಯಾಕೆ ಆ ರೋಗ ಅಂಟಲಿಲ್ಲ? ಮತ್ತೆ ನನ್ನ ಕುತೂಹಲ ಮರಿಹಾಕಿತು. ತುಂಬಾ ಯೋಚಿಸಿದೆ ಆದರೆ ಫಲವಿಲ್ಲ, ಬೇರೆಯವರನ್ನು ಕೇಳಿದರೆ “ಹೋಗಲಿ ಬಿಡಿ ಅದರಮೇಲೆ ಯಾಕೆ ಅಷ್ಟು ಕುತೂಹಲ” ಅನ್ನುವ ಪ್ರತಿಕ್ರಿಯೆ. ದಿನಾಲೂ ಮುಂಜಾನೆ ಮತ್ತು ಸಂಜೆಯ ಶಾಲಾ ಪ್ರಾರ್ಥನೆ ನಡೆಯುವಾಗ ಗಂಟುಮುಖ ಹಾಕಿಕೊಂಡು ಎಲ್ಲರನ್ನೂ ದಿಟ್ಟಿಸಿ ನೋಡುತ್ತಿದ್ದಂತೆ ಕಾಣುತಿತ್ತು.

          ಇಂದು ಶನಿವಾರ 31 ಡಿಸೆಂಬರ್ 2011 ವರ್ಷದ ಕಟ್ಟಕಡೆಯದಿನ ಇಂದು ಆ ಬೇವಿನಮರಕ್ಕೆ ಮುಕ್ತಿ ದೊರೆಯಿತು. ಸುಮಾರು 13ರಿಂದ 15ವರ್ಷ ವಯಸ್ಸಾಗಿದ್ದ ಆ ಮರವನ್ನು ಮೂರುಜನ ಆಳುಗಳು ಬಂದು ಕೊಡಲಿಯಿಂದ ಕಡೆದು ಹಗ್ಗದಿಂದ ತಮ್ಮ ಶಕ್ತಿಎಲ್ಲಾ ಹಾಕಿ ಎಳೆದು ಕೊನೆಗೆ ಅದನ್ನು ನೆಲಕ್ಕುರುಳಿಸಿದರು. ಅದು ಬೀಳುವಾಗ ಪ್ರಾರಂಭದಲ್ಲಿ ಸಿಟ್ಟಿನ ಮನುಷ್ಯ ಹಲ್ಲುಕಡೆದಂತೆ ಸದ್ದಾದರೂ ಬೀಳುವಾಗ ಸಿಡಿಲಿನಂತೆ ಸದ್ದುಮಾಡಿತು. ಆದರೆ ಆ ಶಬ್ದ ಕೆಲವರಿಗೆ ಕೇಳಲಿಲ್ಲವಂತೆ ನಂತರ ಅದರಬಗ್ಗೆ ಮಾತನಾಡುವಾಗ ಆ ಮರ ಏನೂ ಶಬ್ದವಿಲ್ಲದೇ ಬಿತ್ತು ಎಂದರು. ಅದನ್ನು ಕಡಿಯುವಾಗ ಒಂದು ಸುಳಿಗಾಳಿ ಆ ಮರದ ಸುತ್ತಲೇ ಜೋರಾಗಿ ಬೀಸುತ್ತಿತ್ತು. ಎಂದೂ ಅಂತಹ ಗಾಳಿ ಶಾಲೆಯ ಹತ್ತಿರ ಯಾರೂ ನೋಡಿರಲಿಲ್ಲವಂತೆ. ಆ ಸುಳಿ ಗಾಳಿ ಆ ಮರದ ಹತ್ತಿರ ಬಹಳ ಹೊತ್ತು ಸುತ್ತಾಡಿ ನಂತರ ಅದರ ಹತ್ತಿರವಿದ್ದ ಮತ್ತೊಂದು ಮರದ ಹತ್ತಿರ ಹೋಗಿ ಮಾಯವಾಯಿತು. ಕೊನೆಗೆ ಆ ಮರವನ್ನು ತುಂಡುತುಂಡುಮಾಡಿ ಜೋಡಿಸಿ ಆಟೋದಲ್ಲಿ ಕೊಂಡೊಯ್ದರು.

            ಕಳೆದ ಮೂರುತಿಂಗಳಿನಲ್ಲಿ ಶಾಲೆಯಲ್ಲಿ ನಡೆದÀ ಕೆಲವು ವಿಚಿತ್ರ ಸಂಗತಿಗಳನ್ನು ನಿಮ್ಮಲ್ಲಿ ಹಂಚಿಕೊಳ್ಳಲು ಇಷ್ಟ ಪಡುತ್ತೇನೆ ಅವೆಂದರೆ. ಎರಡು ತಿಂಗಳ ಹಿಂದೆ ಶಾಲಾ ಮೈದಾನದ ಮಧ್ಯೆ ಕುಂಕುಮ ಇತ್ಯಾದಿಗಳನ್ನು ಹಾಕಲಾಗಿತ್ತು ವಾಮಾಚಾರಕ್ಕೆ ಸಂಬಂಧಿಸಿದ್ದು ಎಂದು ಎಲ್ಲರೂ ಮಾತನಾಡಿದರು. ನಂತರ ಶಾಲೆಯ ಕೆಲವು ತರಗತಿಗಳಲ್ಲಿ ರಾತ್ರಿವೇಳೆ ಕಿಟಕಿಯಿಂದ ಯಾರೋ  ಕುಂಕುಮವನ್ನು ಚೆಲ್ಲಾಡಿದ್ದರು. ನಂತರ ಅದಾದ ಕೆಲವು ದಿನಗಳ ಬಳಿಕ ಶಾಲೆಯ ಪ್ರವೇಶದ ಮೆಟ್ಟಿಲಿನ ಮೇಲೆ ಮಕ್ಕಳು ಮತ್ತು ಕೆಲಸದವರು ಪದೇ ಪದೇ ಬೀಳುತ್ತಿದ್ದರು. ನಾನೂ ಕೆವು ಸಲ ಮೆಟ್ಟಿಲುಗಳನ್ನು ಎಡವಿದ್ದುಂಟು. ಹೀಗೆ ಹಲವು ವಿಚಿತ್ರ ಘಟನೆಗಳು ನಡೆದವು. ಈ ಆಧುನಿಕ ಯುಗದಲ್ಲಿ ಇದಕ್ಕೆಲ್ಲಾ ಯಾರು ತಲೆ ಕೆಡಿಸಿಕೊಳ್ಳÀಬೇಕು. ಯಾರೂ ಅದನ್ನು ದೊಡ್ಡ ಸುದ್ದಿ ಮಾಡಲಿಲ್ಲ. ಆದರೆ ಕೆಲವರು ಶಾಲೆಯ ಪ್ರವೇಶ ಮೆಟ್ಟಿಲುಗಳನ್ನು ಏರುತ್ತಲೇ ಎದುರಿದ್ದ ಕೋಣೆಯಲ್ಲಿ ವಿಷ್ಣುವಿನ ಚಿತ್ರವಿರುವುದರಿಂದ ಯಾವುದೇ ತೊಂದರೆ ಇಲ್ಲವೆಂದು ಹೇಳಿದರು. ಎಂತಹ ದೈವಭಕ್ತಿ ನೋಡಿ! ಕೇವಲ ದೇವರ ವರ್ಣಚಿತ್ರ ಇದ್ದಕೂಡಲೇ ಅಲ್ಲಿ ದೇವರು ನೆಲೆಸಿರುತ್ತಾನಾ? ಅಥವಾ ಕೇವಲ ಅರಿಶಿನ ಕುಂಕುಮಗಳನ್ನು ಚೆಲ್ಲಿದಕೂಡಲೆ ಏನೋ ವೀಪತ್ತು ಇದೆಯೆಂತಲೋ ತಿಳಿಯುತ್ತಾರೆ. ದೈವಭಕ್ತಿ ಎಂದಕೋಡಲೇ ನನ್ನ ಬಾಲ್ಯದ ದಿನಗಳಲ್ಲಿ ಮನೆಯಲ್ಲಿನ ಕೆಲವು ಆಚರಣೆಗಳನ್ನು ಹೇಳಬಯಸುತ್ತೇನೆ.

ದೈವಭಕ್ತಿ
            ದೇವರಿದ್ದಾನೋ ಇಲ್ಲವೂ ಅಥವಾ ದೇವರ ಮೇಲೆ ನಂಬಿಕೆ ಇದೆಯೋ, ಇಲ್ಲವೋ? ಎನ್ನುವುದಕ್ಕಿಂತ ದೇವರನ್ನು ಅವಲಂಬಿಸಲಾಗಿದೆಯೋ ಇಲ್ಲವೋ? ಎಂಬುದು ಮುಖ್ಯ ಪ್ರಶ್ನೆ ಎಂದು ನನಗನ್ನಿಸುತ್ತದೆ. ನಾನು ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟದಕಾರಣ ನಮ್ಮ ಮನೆಯಲ್ಲಿನ ಆಚರಣೆಗಳು ವೀಷೇಶÀವೆನಿಸಿಲ್ಲ ಆದರೆ ನನಗೆ ನೆನಪಿರುವ ಕೆಲವು ಘಟನೆಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ ಅವೆಂದರೆ ನಾನು ಬಾಲ್ಯದಲ್ಲಿದ್ದಾಗ ಸುಮಾರು 5 ಅಥವಾ 6ನೇ ತರಗತಿ ಇರಬಹುದು ಆಗ ಪ್ರತಿ ಭಾನುವಾರ ಮುಂಜಾನೆ ಸುಮಾರು 9 ಗಂಟೆಗೆ ಡಿಡಿ1 ವಾಹಿನಿಯಲ್ಲಿ ‘ಮಹಾಭಾರತ್’ ಎಂಬ ಹಿಂದಿ ಪೌರಾಣಿಕ ಧಾರಾವಾಹಿ ಪ್ರಸಾರವಾಗುತ್ತಿತ್ತು. ಅದು ಪ್ರಾರಂಭವಾಗುತ್ತಿದ್ದಂತೆಯೇ ನಮ್ಮ ಅಜ್ಜನವರು ಮಂಗಳಾರತಿ ಮತ್ತು ಘಂಟೆ ಹಿಡಿದು ದೂರದರ್ಶನಕ್ಕೆ ಮಂಗಳಾರತಿ ಮಾಡುತ್ತಿದ್ದರು ತಕ್ಷಣ ನಾವೆಲ್ಲರೂ ಎದ್ದು ಕೈಮುಗಿಯಬೇಕಿತ್ತು. ಅವರಿಗೆ ತಿಳಿದಿತ್ತೋ ಇಲ್ಲವೋ ಅದರಲ್ಲಿ ನಟಿಸುವವರು ನಿಜಕ್ಕೂ ನಮ್ಮಂತೆ ಮನುಷ್ಯರು ನಾನಾ ಜಾತಿಗೆ ಸೇರಿದ ಕಲಾವಿಧರು ಎಂದು. ನಂತರ ಕಳೆದ ವರ್ಷ ಅಂದರೆ 2010 ರಲ್ಲಿ ನಮ್ಮ ಚಿಕ್ಕಪ್ಪನ ಮನೆಯಲ್ಲಿನ ಕಂಪ್ಯೂಟರ್ ವೈರಸ್ ಹಾವಳಿಯಿಂದ ಕೆಟ್ಟು ನಿಂತಿತ್ತು ಹಾರ್ಡವೇರ್ ಕಲಿತಿದ್ದ ನಾನು ಅದನ್ನು ಸರಿಮಾಡಲು ಹೋದಾಗ ನಮ್ಮ ತಾತ ಅದು ಯಾಕೆ ಕೆಟ್ಟಿದೆ ಅದಕ್ಕೆ ಏನಾಗಿದೆ ಹೀಗೆ ಕೆಲವು ಪ್ರಶ್ನೆ ಕೇಳಿದರು. ನಾನು ಅವರಿಗೆ ಅರ್ಥವಾಗುವಂತೆ ವೈರಸ್ ಅನ್ನೋದು ಒಂದು ಕ್ರಿಮಿ ಇದ್ದಂತೆ ಅದು ಕಂಪ್ಯೂಟರ್‍ನಲ್ಲಿರುವ ಮಾಹಿತಿಯನ್ನು ಹಾಳುಮಾಡುತ್ತೆ ಕಣ್ಣಿಗೆ ಕಾಣಲ್ಲ ಅದು ಒಂದು ಭೂತದ ತರಹ ಎಂದೆ. ತಕ್ಷಣ ಅವರು “ ಅರೆ ಕಂಪ್ಯೂಟರ್ ನಲ್ಲಿ ವಿನಾಯಕನಿದ್ದರೂ ವೈರಸ್ ಹೇಗೆ ಹೋಗತ್ತೆ ಎಂದರು”. ನಿಜ ಅವರ ಕಂಪ್ಯೂಟರ್‍ನ ವಾಲ್‍ಪೇಪರ್ ಒಂದು ವಿನಾಯಕನ ಫೋಟೋ ಆಗಿತ್ತು. ಇಲ್ಲಿ ನಮ್ಮ ತಾತನವರ ದೈವಭಕ್ತಿಯು ಕಾರ್ಯ ಕಾರಣಗಳಿಲ್ಲದೆ ಆ ಒಣಮರದ ಮೌನತೆಗೆ ಸಮನಾಗಿತ್ತು.

            ಹೀಗೆ ಹಲವಾರು ಜನರು ದೇವರ ಮೊರೆ ಹೋಗುವುದಲ್ಲದೇ ದೇವರ ಫೋಟೊ ಇದ್ದರೆ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆÉ ಎಂದುಕೊಂಡಿರುತ್ತಾರೆ. ಆದರೆ ಒಂದು ವಿಷಯ ಮಾತ್ರ ನಿಜ ದೇವರು ಇರುವುದೇ ನಿಜವಾದರೆ ಈ ಭೂಮಿಯ ಮೇಲೆ ನಮಗೆ ಸ್ಥಾನ ಕೊಟ್ಟಿರುವುದಕ್ಕಿಂತ ಹೆಚ್ಚೇನು ಮಾಡಲು ಸಾಧ್ಯವಿಲ್ಲ, ಆದರೆ ಇತ್ತೀಚೆಗಿನ ದಿನಗಳಲ್ಲಿ ಮೊಬೈಲ್ ಫೋನ್ ಕಳಿಯಬಾರದು ವಾಹನಕ್ಕೆ ಆಪಘಾತ ವಾಗಬಾರದು ಎಂಬ ಉದ್ದೇಶದಿಂದ ಹಿಡಿದು ಕೊನೆಗೆ ಭೀಕ್ಷಾಟನೆಗೂ ದೇವರು (ದೇವರ ಭಾವಚಿತ್ರ)ಮುಖ್ಯ ಬಂಡವಾಳವಾಗಿದ್ದಾನೆ.

            ಕೊನೆಗೆ ಈ ಮರ ಒಣಗಿದೆ ಇದು ಅಪಶಕುನವೆನೆಸಿಯೋ ಏನೋ ಅದನ್ನು ಕಡಿಸಿರದು. ನನಗೆ ಆ ಮರಕ್ಕೆ ಹೊಸ ವರ್ಷದ ಶುಭಾಷಯಗಳನ್ನು ಹೇಳಲು ಆಗಲಿಲ್ಲ ಮದ್ಯಾಹ್ನ 12.35ಕ್ಕೆ ಶಾಲೆ ಮುಗಿಯಿತು ಮನೆಗೆ ಹೋಗುವಾಗ ನನಗೆ ಆ ಶಾಲೆಯ ಮೈದಾನದಲ್ಲಿ ಎನೋ ಕೊರತೆ ಕಂಡುಬಂತು. ಯೋಚಿಸುವಷ್ಟರಲ್ಲಿ ಮನೆಯಿಂದ ಕರೆ ಕರೆಬಂತು.
ನನಗೆ ಮತ್ತು ಆ ಮರಕ್ಕೆ ಯಾವುದೇ ಸಂಬಂಧವಾಗಲೀ, ಅದರ ಮೇಲೆ ಯಾವುದೇ ಅನುಕಂಪವಾಗಲೀ ಇರಲಿಲ್ಲ. ನಾನೆಂದೂ ಆಮರಕ್ಕೆ ನೀರೆರೆದಿರಲಿಲ್ಲ. ಕೇವಲ 7ತಿಂಗಳ ಮುಖಪರಿಚಯ. ಅಷ್ಟಕ್ಕೂ ಅದು ತುಂಬಾ ವಿಷೇಶವಾದ ಮರವೇನೂ ಆಗಿರಲಿಲ್ಲ ಒಂದು ಒಣಗಿದ ಬೋಳು ಬೇವಿನಮರ ಅಷ್ಟೇ ಆದರೆ ಆ ಮರದ ಮೇಲೆ ನನಗಿದ್ದ ಕುತೂಹಲ ಮಾತ್ರ ಹಾಗೇ ಉಳಿಯಿತು. ನನಗೆ ಅನಿಸಿದ್ದು ಒಂದೇ “ಅದಕ್ಕೆ ಚಿಗುರಲು ಇನ್ನಷ್ಟು ದಿನಗಳು ಬೇಕಿದ್ದವೋ ಏನೋ?” ಅಂತೂ ಆ ಮರ ಇನ್ನು ಅಲ್ಲಿರುವುದಿಲ್ಲ. 

           ಸಸ್ಯಗಳಿಗೆ ಜೀವವಿದೆ ಎಂದಮಾತ್ರಕ್ಕೆ ಅವಕ್ಕೆ ಸರಿಯಾದ ಪೋಷಣೆ ಕೊಡಬೇಕೆಂದಿಲ್ಲ ಆದರೆ ಅವಕ್ಕೆ ಹಾನಿ ಮಾಡದಹಾಗಿದ್ದರೆ ಸಾಕು. ಆದರೆ ಮನುಷ್ಯ ಹಾಗಲ್ಲ ತನಗೆ ಜೀವವಿರುವುದು ಇನ್ನೊಬ್ಬರನ್ನು ಜೀವಂತವಾಗಿ ನೋಡಲು ಮತ್ತು ಇನ್ನೊಬ್ಬರ ಜೀವನಕ್ಕೆ ಸರಿಯಾದ ಹಾದಿ ಮಾಡಿಕೊಡಲು. 

            ಅದು ಒಂದು ಬೋಳುಮರವೇ ಇರಬಹುದು ಅಥವಾ ಒಂದು ಅಪಶಕುನ ಸೂಚಕವೇ ಆಗಿರಬಹುದು ಆದರೆ ಅದರಿಂದ ನನಗೆ ಒಂದು ಜೀವನ ಪಾಠ ಲಭ್ಯವಾಯಿತು. ನಿಜ! ಒಂದುವೇಳೇ ಆ ಮರದ ಸ್ಥಿತಿಯಲ್ಲಿ ಒಬ್ಬ ಮನುಷ್ಯನೇ ಇದ್ದಿದ್ದರೆ ನಾವು ಆ ಮರವನ್ನು ನೋಡಿದಂತೆ ಸುಮ್ಮನಿರುತ್ತಿರಲಿಲ್ಲ ಆ ಮನುಷ್ಯನಿಗೆ ಸದಾ ನಿಷ್ಪ್ರಯೋಜಕ, ರೋಗಿಷ್ಠ ಮತ್ತು ಮೊದಲಾದ ಬೈಗಳು ಹಾಗೂ ಕೆಲವು ಚುಚ್ಚುಮಾತುಗಳಿಂದ ಅವನ ಮನಸ್ಸಿಗೆ ನೋವು ಕೊಡುತ್ತಿದ್ದೆವು ಅಂದುಕೊಳ್ಳುತ್ತೇನೆ. ಈ ಮರದ ಬೋಳುತನಕ್ಕೆ ಇದ್ದಂತೆ ಮನುಷ್ಯನ ಕೆಲವು ಸೋಲುಗಳಿಗೆ ಸರಿಯಾದ ಕಾರಣಗಳು ಇರಲಿಕ್ಕಿಲ್ಲ ಆದರೆ ಅವನಿಗೆ ಅವನ ಜೀವನದಲ್ಲಿ ಮತ್ತೆ ಹೊಸ ಚಿಗುರು ಮೂಡಲು ಅವಕಾಶ ಮತ್ತು ಅವನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದರೆ ಆ ಮನುಷ್ಯ ದೃಢವಾಗಿ ನಿಲ್ಲಬಹುದು ಮತ್ತು ಅವನಿಂದ ಕೆಲವರಿಗೆ ನೆರಳೂ ಸಿಗುಬಹುದು. ಆದರೆ ನನಗೆ ಈ ಎರಡು ವಿಷಯ ಬದಲಾಗುವುದಿಲ್ಲ ಅನ್ನಿಸುತ್ತೆ ಒಂದು ನಾಯಿ ಬಾಲ ಮತ್ತೊಂದು ಮನುಷ್ಯತ್ವ ಮರೆತ ಕೆಲವು ಮನುಷ್ಯರ ಹೃದಯಗಳು. “ಬದಲಾಗಲು ಮತ್ತು ಹೊಸತನವನ್ನು ಕಂಡುಕೊಳ್ಳಲು ಸಮಯ ಬೇಕು ನಿಜ ಆದರೆ ಸಮಯವೇ ಬದಲಾಗುವುದನ್ನು ಕಾಯುವುದು ವ್ಯರ್ಥ”. ಹಾಗೆ ಸಮಯವನ್ನು ನಂಬಿ ಕುಳಿತಲ್ಲಿ ಈ ಮರಕ್ಕೆ ಆದ ಗತಿ ನಮಗೂ ಬರುವುದಿಲ್ಲ ಎಂಬುದರಲ್ಲಿ  ಯಾವ ಅನುಮಾನವೂ ಇಲ್ಲ, “ಬದಲಾವಣೆ ನಮ್ಮಮೇಲೆ ಪ್ರಭಾವ ಬೀರುವ ಮೊದಲು ನಾವೇ ಬದಲಾವಣೆಯನ್ನು ಪ್ರಭಾವಶಾಲಿಯಾಗಿ ಸ್ವೀಕರಿಸಬೇಕು!”. ಇಂತಹ ಜೀವನಪಾಠ ಕಲಿಸಿದ ಆ ಮರಕ್ಕೆ ನಾನು ಚಿರರುಣಿ….

                                  *-*-*-*-*-*