Thursday, February 9, 2017

#. ಉಳ್ಳ

 #. ಉಳ್ಳ


         "ಚರಕ್..… ಬಳ್……" ಎಂದು ಆಯಿಯ ಕೈಯಿಂದ ಜಾರಿಸಿಕೊಂಡು ಕುದಿಯುತ್ತಿದ್ದ ತೆಂಗಿನೆಣ್ಣೆಯ ಬಂಡಿಯೊಳಗೆ ಬಿದ್ದ ಹಪ್ಪಳವೊಂದು "ಸುಸ್ಸ್…. ಸುಸ್ಸ್ ಸ್ಸ್ ಸ್ಸ್ ಸ್ಸ್……" ಎಂದು ಸದ್ದು ಮಾಡಿ, ತನ್ನಿನಿಯನನ್ನು ಸೇರಿದ ಹೆಣ್ಣು ಮುಸುಗಿನೊಳಗೆ ಮುದ್ದಿಸಿ, ಮುಲುಗಾಡಿ, ಮುರುಟಿ ಮಲಗಿದಂತೆ ಮೊದಲಿನ ಕೈಯಗಲದ ರೂಪ ಕಳೆದುಕೊಂಡು, ಎಪರಾತಪರಾ ಆಕೃತಿಯಹೊಂದಿ, ನಾನಿದುವರೆಗೂ ಲೆಕ್ಕಮಾಡಿಯೇ ಇರದಷ್ಟು ರಂಧ್ರಗಳಿರುವ ಸೌಟಿನಿಂದ ಮುಗುಚಿಹಾಕಲ್ಪಟ್ಟು, ತನ್ಮೂಲಕ ಬಿಸಿತೈಲದಿಂದ ಹೊರಬಿದ್ದು, ನಾಲ್ಕಾರುಸಲ ಮೇಲಕ್ಕೂ ಕೆಳಕ್ಕೂ ಆಡಿಸಲ್ಪಟ್ಟು, ಮೈಗಂಟಿದ ಎಣ್ಣೆಯೆಲ್ಲಾ ಹನಿಹನಿಯಾಗಿ ಬಿದ್ದು ಅವುಗಳ ಸ್ವಸ್ಥಾನವನ್ನು ಸೇರಿದ ಮೇಲೆ, ತಾನು ಪಕ್ಕದ ಅಗಲ ಬಟ್ಟಲಿನಲ್ಲಿದ್ದ ತನ್ನ ಸಹಬಾಂಧವರನ್ನು ಸೇರಿಕೊಂಡಿತು. ಈ ಸಹಜಪ್ರಕ್ರಿಯೆ ನಡೆಯುತ್ತಿದ್ದ ಭೂತಕಾಲದಲ್ಲಿ, ಎಣ್ಣೆಬಂಡಿಯ ಮೇಲೆಹಾದುಹೋಗುವ ನೇರಗೆರೆಯ ಇನ್ನೊಂದು ತುದಿಯಲ್ಲಿ ಸಂಧಿಸುತ್ತಿದ್ದ ಮಷೀಮಯವಾದ ಹೆಂಚನ್ನು ಹೊತ್ತು, ಅದರಷ್ಟೇ ಕರ್ರನೆ ಬಣ್ಣದಿಂದ ಮಿಂಚುತ್ತಿದ್ದ ಪಕಾಸಿನ ತುದಿಯಲ್ಲಿ, ಸಣ್ಣ ಮಳೆಹನಿಯೊಂದು ಮೇಲಿಂದ ನಿಧಾನಕ್ಕೆ ಮದಗಜದಂತಿಳಿದು ಬರುತ್ತಿದ್ದ ಇನ್ನೊಂದು ದೊಡ್ಡಹನಿಗೆ ಕಾಯುತ್ತಾ ಕುಳಿತಿತ್ತು. ಆ ದೊಡ್ಡ ಹನಿಗೆ ಕೂಡ, ತನ್ನ ಅನುಪಸ್ಥಿತಿಯಲ್ಲಿ ಗುರುತ್ವಾಕರ್ಷಣ ನಿಯಮವನ್ನು ಪಾಲಿಸಿ, ಮೇಲಿಂದ ಭುವಿಗೆ ಧೊಪ್ಪನೆ ಬೀಳುವುದು ಸಾಕಷ್ಟು ವಸ್ತುರಾಶಿಯನ್ನು ಹೊಂದಿಲ್ಲದ ತನ್ನ ತಮ್ಮನಿಗೆ ಸಾಧ್ಯವಿಲ್ಲವೆಂದು ತಿಳಿದಿದ್ದರೂ, ಸ್ವಯಂ ತಾನು ಪ್ರಕೃತಿಯ ಅದೇ ನಿಯಮಕ್ಕೊಳಗಾಗಿ ಬಂದು ಸೇರುವಲ್ಲಿ ಆರಿಹೋದ ಸೌದೆತುಂಡುಗಳನ್ನು ಮುಂದೂಡಲೆಂದು ಆಯಿಯ ಹಸ್ತವೊಂದು ನಿಧಾನಕ್ಕೆ ಮುಂದುವರೆಯಿತು. ಅದೇ ಸಮಯಕ್ಕೆ ಬಂಡಿಯಲ್ಲಿನ ಎಣ್ಣೆಯನ್ನು ಬಹುಕಾಲದಿಂದಗಲಿ, ಈಗ ಸರಸವಾಡಲು ಬರುತ್ತಿದೆಯೇನೋ ಎಂಬಂತೆ ಖುಷಿಯೊಂದೊಡಗೂಡಿ ಸೇರಿದ ಆ ಮಳೆಹನಿ, ’ಚಟ್ ಪಟ್ ಚಟ್’ ಸದ್ದನ್ನೊರಡಿಸಿ ಕುದಿಎಣ್ಣೆಯ ಅಣುವೊಂದನ್ನು ಆಯಿಯ ಕೈಮೇಲೆ ಹನಿಸಿತು. ’ಚುರ್ರ್’ ಎಂದ ಕೈಯನ್ನು ಸರ್ರನೆ ಹಿಂದೆಗೆದ ಪರಿಣಾಮದಿಂದ ಬಂಡಿಯ ಕುಂಡೆಗೆ ಬಡಿದ ಕಟ್ಟಿಗೆಯ ತುಂಡಿನ ಹೊಡೆತದ ಪರಿಣಾಮವಾಗಿ, ಕುದ್ದ ಎಣ್ಣೆಯ ಪಾಲೊಂದಿಷ್ಟು ಅಗ್ನಿಗಾಹುತಿಯಾಗಿ ’ಭುಸ್ಸ್’ ಏಂಬ ಜ್ವಾಲೆ ಮೇಲೇರಿತು.

     "ವಿಷ್ಣೋ ವಿಷ್ಣೊ ವಿಷ್ಣೋರಾಜ್ನೇಯಾ ಪ್ರವರ್ತಮಾನಸ್ಯ ಅಧ್ಯಬ್ರಾಹ್ಮಣ ದ್ವಿತೀಯಪರಾರ್ಧೇ......," ಮಧ್ಯಾಹ್ನದ ದೇವಪೂಜೆಯಲ್ಲಿ ತೊಡಗಿದ್ದ ಅಪ್ಪಯ್ಯನಿಂದ ಹೊರಬಿದ್ದ ಮಂತ್ರಾಕ್ಷರಗಳು, ಮನೆಯೊಳಗಿನ ಸಕಲ ಚರಾಚರಗಳ ಕರ್ಣಪಟಲಗಳನ್ನು ಪವಿತ್ರಗೊಳಿಸುವ ಮೊದಲೇ ಸೀಳಿಬಂದಿತ್ತು ರಾಮಯ್ಯನ ಕಿರ್ಗಂಟಲ ಸ್ವರ, "ಅಯ್ಯಾ......, ಓ ಅಯ್ಯಾ......" ನಿಜಹೇಳಬೇಕೆಂದರೆ ಆತನಿನ್ನೂ ಮನೆಯ ಅಂಗಳವನ್ನೇ ತಲುಪಿರಲಿಲ್ಲ. ನಾಲ್ಕು ಮಾರು ದೂರವಿರುವಾಗಲೇ ಅರಚುತ್ತಾ ಬರುವ ಚಟ ರಾಮಯ್ಯನಿಗೆ ಅಂಟಿತ್ತು. ಆತನ ಅಗಲವಾದ, ಛಪ್ಪೈವತ್ತಾರು ತುಂಡಾದ ಪಾದದ್ವಯಗಳು ’ಧೊಫ಼್ ಧೊಫ಼್’ ಎಂದು ಭೂಮಿಗೆ ಅಪ್ಪಳಿಸಿ ಮಾರ್ದನಿಗೊಳಿಸುತ್ತಿದ್ದ ಶಬ್ಧತರಂಗಳೇ ಸಾಕಿದ್ದುವು ಬರುವಿಕೆಯ ಸೂಚನೆಯನ್ನೀಯಲು.
"ಕಲಿಯುಗೇ ಪ್ರಥಮಪರಾರ್ಧೇ ಜಂಬುದ್ವೀಪೇ ಭರತಖಂಡೇ ಭಾರತವರ್ಷೇ......", ಅಪ್ಪಯ್ಯ ಯಾವುದೇ ’ಓ’ಗುಡುವಿಕೆಯ ಉತ್ತರವನ್ನೀಯದೇ ಪೂಜೆಯನ್ನು ಮುಂದುವರೆಸಿದ್ದ.

"ಅಯ್ಯೋ....., ಅಯ್ಯಾ ಅಂದೆ....., ಯಂಥಾ ಮಾಡ್ತಿದ್ರಿ?", ಅಂತೂ ಇಂತೂ ಅಂಗಳ ತಲುಪಿ, ಕೆಳಜಗುಲಿಯ ಪಕ್ಕ ನಿಂತು, ಕಬ್ಬಿಣದ ಸರಳುಗಳಿರುವ ಕಿಟಕಿಯಿಂದ ಮೂಗುತೂರಿಸಿ ನೋಡಿದ. ಅಂಗುಷ್ಟ ಕಿತ್ತುಹೋಗಿ, ಹಿಮ್ಮಡಿಯಲ್ಲಿ ಸವೆದೂ ಸವೆದೂ ತೂತಾಗಿ ಪಾದ ನೆಲದಮೇಲೆಯೇ ಕೂತಿರುತ್ತಿದ್ದ ತನ್ನ ಬಾಟಾ ಚಪ್ಪಲಿಯನ್ನು ತೆಗೆಯದೇ ನಿಂತಿದ್ದಾಗಲೇ ನನಗೆ ಗೊತ್ತಾಗಿತ್ತು, ಇವ ಈ ಸಮಯದಲ್ಲಿ ಒಳಹೊಕ್ಕುವ ಆಸಾಮಿಯಲ್ಲವೆಂದು.
"ಎಂತ ಹಾಕ್ಕಂಡಿದ್ಯ ಕಿವಿಗೆ? ಮಂತ್ರ ಹೇಳ್ತಿರೂದ್ ಕೇಳೂದಿಲ್ಯ?" ಸಲುಗೆಯಿಂದ ಕೇಳಿದೆನೇ ಹೊರತು, ಮಾತಿನಲ್ಲಿ ಕಠೋರತೆಯಿರಲಿಲ್ಲ.

"ಓ...... ಮಾಣಿ!!! ಪುಸ್ತುಕು ಹಿಡ್ಕಂಡ್ ಕೂತ್ಬಿಟ್ಟಿರಿ?" ಕೆಂಬಣ್ಣ ಅಧಿಕವಾಗಿ ಕಪ್ಪಾಗಿ ಕಾಣುತ್ತಿದ್ದ, ಮುಂದಿನೆರಡು ಹಲ್ಲುಗಳನ್ನು ಕಳೆದುಕೊಂಡಿದ್ದ ತನ್ನ ದಂತಪಂಕ್ತಿಯನ್ನು ಪ್ರದರ್ಶಿಸಿದ.
"ಎಂಥ ಭಾರೀ ಅರ್ಜೆಂಟಲ್ ಇದ್ಯೇನಾ? ಒಳ್ಗ್ ಬರೂದಿಲ್ವ?" ಅಡಿಗೆಮನೆಯೊಳಗಿಂದ ಬಂಡಿಯನ್ನಿಳಿಸಿ, ಸೀರೆಸೆರಗನ್ನು ಹಿಂಬದಿಯಿಂದೆಳೆದು ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತಾ ಬಂದ ಆಯಿಯ ಪ್ರಶ್ನೆ.
"ಇಲ್ಯೆ ಅಮ್ಮಾ....., ಇವತ್ ಸಂಜೀಮುಂದ್ಕೆ ನಿಮ್ಮನೀಲಿ ಮೀಟಿಂಗ್ ಅದ್ಯಲಾ. ಅದ್ಕೇ ನೆಂಪ್ ಮಾಡ್ ಕೊಡ್ವ ಅಂತ್ ಬಂದೆ."
"ನಮ್ಮನೇಲ್ ಇರೂದ್ನ್ ನೀ ನೆನಪ್ ಮಾಡ್ ಕೊಡ್ಬೇಕಾ?" ಆಯಿ ನಗುತ್ತಿದ್ದಳು.
"ಹಂಗಲ್ಲ ಅಮ್ಮಾ......, ಸುಮ್ನೆ ಹೇಳ್ದೆ ಅಷ್ಟೆ."

"ಒಳಗ್ ಬಾರ, ಊಟಕ್ಕಾಗದೆ. ಸಂದೀಪಾ....., ಅಲ್ ಹಿತ್ಲಕಡಂಗ್ ಬಾಳೆ ಇದ್ದು ತಕಂಬಾ. ರಾಮಯ್ಯಂಗ್ ಹಾಕು. ಅಪ್ಪಯ್ಯಂದೂ ಪೂಜೆ ಮುಗೀತೇ ಬಂತು, ಬಡ್ಸೂದೇಯ ಈಗ." ಆಯಿ ಹೇಳಿದ ಬಾಳೆಲೆಯನ್ನು ತರಲು ಎದ್ದಿದ್ದೇ ತಡ, ರಾಮಯ್ಯ ಗಾಬರಿಯಲ್ಲೆಂದ.

"ಹ್ವಾಯ್, ಬ್ಯಾಡ ಅಮ್ಮಾ. ನಾ ತಿಮ್ಮಪ್ಪನ್ ಮನೀಗ್ ಹೋಯ್ತೆ. ಇವತ್ ಹಂದಿ ಹೊಡ್ದರೆ ಅಲ್ಲಿ."
"ಅದ್ಕೇ ಅರ್ಜೆಂಟಾಗಿರೂದು ನಿಂಗೆ, ಹೋಗ್ ಮಾರಾಯ." ಎಂದಳು ಆಯಿ. ಬಿಡುಗಡೆ ದೊರಕಿತೆಂಬಂತೆ ತಿರುಗಿ ಧೊಫಧೊಫನೆ ಕಾಲಿಡುತ್ತಾ ಹೊರಟ ರಾಮಯ್ಯ. ಅಂಗಳದಲ್ಲಿ ಮಳೆಗಾಲದ ನೀರುನಿಂತು ಬೆಳೆದ ಹಾವಸದ ಮೇಲೆ ನಡೆದು ಬೀಳಬಾರದೆಂದು, ಅಡಿಕೆ ಮರವನ್ನು ಸಣ್ಣಗೆ ಸೀಳಿ ಹಾಸಿದ್ದ ದಬ್ಬೆಸಂಕದ ಮೇಲೆ ರಭಸದಿಂದ ಕಾಲಿಟ್ಟ ಪರಿಣಾಮವಾಗಿ ಎರಚಲು ಹೊಡೆದು ಈಚೆಪಕ್ಕದ ತುಳಸೀಕಟ್ಟೆಯ ಮೇಲೂ, ಆಚೆಪಕ್ಕದ ಹೊಸದಾಗಿ ನೆಟ್ಟ ಗುಲಾಬಿಗಿಡದ ಮೇಲೂ ಕೆಸರಿನಭಿಷೇಕವಾಯಿತು.
"ನೀ ನಾಕ್ ಸಲ ಆಚೆಗಿಂದ್ ಈಚೆಗ್ ಹೋದ್ರೆ ಸಾಕು, ಸಂಕ ಪೂರ್ತಿ ಪುಡಿ ಹತ್ತಿಸ್ತೆ." ಕೂಗಿದೆ ನಾನು. ಅದು ಕೇಳಿತೆಂಬುದಕ್ಕೆ ಸಾಕ್ಷಿಯಾಗಿ ನಿಧಾನಕ್ಕೆ ನಡೆದು ಹೋದ.
     ಒಂಟಿಯಾಗಿ ಯಾವ ಕೆಲಸವಿಲ್ಲದೇ, ಯಾವುದೋ ತಿಂಗಳ, ವಾರಗೊತ್ತಿಲ್ಲದ ವಾರಪತ್ರಿಕೆಯೊಂದರಲ್ಲಿ ಕಥೆಯನ್ನು ಹುಡುಕುತ್ತಿದ್ದ ನನ್ನ ದೇಹದಲ್ಲಿದ್ದ ಖಾಲಿಮನಸ್ಸು, ಇಂದು ಮಧ್ಯಾಹ್ನ ನಡೆಯಲಿದ್ದ ಮೀಟಿಂಗಿನ ಕಾರಣರೂಪಿ ಮೂಲವಸ್ತುವನ್ನು ಕುರಿತು ಧೇನಿಸಿತು.

            ***************

     ರಾಮಯ್ಯಗೊಂಡನ ಏಕೈಕಪುತ್ರಿ, ಕುಸುಮ. ಆತನಿಗೆ ಬೇರೆ ಗಂಡುಹುಡುಗರೂ ಇಲ್ಲದ ಕಾರಣ ಆಕೆ ಮಗನಂತೆಯೂ ಬೆಳೆದಳು. ಹಳ್ಳಿಯ ವಾತಾವರಣದಲ್ಲಿ ಬೆಳೆಯುವ ಎಲ್ಲಾ ಹುಡುಗ ಅಥವಾ ಹುಡುಗಿಯರಂತೆ ದಿನಪೂರ್ತಿ ಗದ್ದೆ, ಹಕ್ಕಲು, ಕಾಡನ್ನೆಲ್ಲಾ ಸುತ್ತಿದ್ದರಿಂದಲೋ, ಹಸುಗಳನ್ನು ಮೇಯಿಸುತ್ತಾ ಅರ್ಧಂಬರ್ಧ ಬಟ್ಟೆಯನ್ನುಟ್ಟು ಬಿಸಿಲಲ್ಲಿದ್ದುದರಿಂದಲೋ, ಸೌಂದರ್ಯವರ್ಧಕ ಪ್ರಸಾಧನ ಸಾಮಗ್ರಿಗಳ ಬಳಕೆ ತಿಳಿದಿಲ್ಲವಾದ್ದರಿಂದಲೋ, ಅಥವಾ ಆನಿಟ್ಟಿನಲ್ಲಿ ಯೋಚಿಸುವ ಧ್ಯಾಸವೇ ಕುಸುಮಳ ತಾಯಿಯಾದವಳಿಗಿಲ್ಲದುದರಿಂದಲೋ ಏನೋ, ಪಿಯುಸಿಗೆ ಬರುವ ವಯಸ್ಸಿಗೆಲ್ಲಾ ಆಕೆ ಕರ್ರನೆಯ ಬಣ್ಣದಿಂದ ಮಿಂಚುತ್ತಿದ್ದಳು. ’ಬಿರಾಂಬ್ರ ಕೂಸು’ಗಳಿಗೆ ಹೋಲಿಸಿದಾಗ ಕಪ್ಪನೆಯ ಬಣ್ಣದ್ದಾಗಿಯೂ, ’ಸ್ವಜಾತಿ ಮಗು’ಗಳಿಗೆ ಹೋಲಿಸಿದಾಗ ಬೆಳ್ಳಗಾಗಿಯೂ ಬದಲಾಯಿಸುತ್ತಿತ್ತವಳ ಮುಖಾರವಿಂದ. ಹಕ್ಕಲಿನ ಗೇರುಹಣ್ಣು, ಹುಣಿಸೆಹಣ್ಣು, ಹುಳಿಕಾಯಿಹಣ್ಣು, ಮುಳ್ಳಣ್ಣು, ಹಲಸಿನಹಣ್ಣು ಮುಂತಾದವುಗಳ ಪರಿಣಾಮವೋ ಅಥವಾ ಗದ್ದೆಯಲ್ಲಿ ಬೆಳೆದು, ಕುಂಟವಾಣಿ ಊರಿನ ಮಿಲ್ಲಿನಲ್ಲಿ ಸಂಸ್ಕರಣೆಗೊಂಡು ಮನೆಯ ಹಂಡೆಗಳಲ್ಲಿ ತುಂಬಿಟ್ಟಿರುತ್ತಿದ್ದ ಕೊಚ್ಚಕ್ಕಿಯ ಪರಿಣಾಮವೋ ಏನೋ, ಕುಸುಮ ಹೂವಿನಂತಿರದೇ ಬಲಿತ ಕಾಯಿಯಂತೆ ಬೆಳೆದಿದ್ದಳು.

     ಇಂತಿಪ್ಪ ಕುಸುಮಳಿಂದೇನಪ್ಪಾ ತೊಂದರೆ ಶುರುವಾಗಿದೆಯೆಂದೆಣಿಸುವಿರೋ? ಸಮಸ್ತ ಜನಸಮೂಹದ ಕುತೂಹಲ ಸಹಜವಾದುದೇ. ಹಿರಿಯರೆನಿಸಿಕೊಂಡಿದ್ದವರೆಲ್ಲಾ ’ಬರಾ’ ಕಲಿತಿದ್ದು ಸಾಕು ಎಂದರೂ ಕೇಳದೇ ರಾಮಯ್ಯ, ತಾನು ಕಲಿತಿರದ ’ಬರಾ’ವನ್ನು ಮಗಳಿಗೆ ಕಲಿಸಿಯೇ ತೀರುತ್ತೇನೆಂದು ಯೋಚಿಸಿಯೋ ಅಥವಾ ಹೆಚ್ಚೆಚ್ಚು ’ಬರಾ’ ಕಲಿತರೆ ಎಲ್ಲೋ ಒಂದೆಡೆ ನೌಕರಿ ಸಿಗಬಹುದೆಂಬ ಕಾತುರದಿಂದಲೋ ಏನೋ ಅಂತೂ ಮಗಳನ್ನು ಭಟ್ಕಳ ಪೇಟೆಯ ಕಾಲೇಜಿಗೆ ಸೇರಿಸಿಯೇಬಿಟ್ಟಿದ್ದ. ಈ ಸುಮನಸ್ಸಿನ ಕುಸುಮಳು ಕಾಲೇಜನ್ನು ಮುಗಿಸಿ, ಒಂದೆರಡು ಗಲ್ಲಿಗಳನ್ನು ಹಾಯ್ದು, ರಸ್ತೆದಾಟಿ, ಬಸ್ ನಿಲ್ದಾಣ ಸೇರಿ, ಒಂದ್ಹತ್ತು ನಿಮಿಷ ಬಸ್ಸಿಗೆ ಕಾದು, ಹತ್ತಿ, ಊರಲ್ಲಿಳಿದು ಬರುವ ಸಂಧರ್ಭದಲ್ಲಿ ಯುವಕರೀರ್ವರು ಕುಚೋದ್ಯಕ್ಕೋ, ಆಸೆಯಿಂದಲೋ, ಪ್ರೀತಿಹೆಚ್ಚಾಗಿಯೋ ಅಥವಾ ಕಾಮದಹುಚ್ಚಿನಿಂದಲೋ ಏನೋ ಬೈಕೊಂದರಲ್ಲಿ ಬೆನ್ನತ್ತತ್ತೊಡಗಿದರು. ಈ ಬೆನ್ನತ್ತುವಿಕೆ, ಹಳ್ಳಿಗಾಡಿನ ಕಗ್ಗಾಡಿನ ’ಗವ್’ ಎನ್ನುವ ರಸ್ತೆಯಲ್ಲಿಯೂ ಮುಂದರಿದು ಆಕೆಯ ಮನೆಯನ್ನು ಸಹ ಗುರುತಿಟ್ಟಿದ್ದರು. ಒಂದೆರಡುದಿನ ಇದೇ ವೃತ್ತ ಪುನರಾವರ್ತಿಸಲು, ಕುಸುಮ ಭಯಾವಿಹ್ವಲದಿಂದ ತಂದೆಯಲ್ಲಿ ದೂರಿತ್ತಿದ್ದಳು. ಮಾರನೇದಿನ ಬಸ್ಸುಬರುವ ಹೊತ್ತಿಗೆ ಅವಳಿಳಿಯುವ ಜಾಗಕ್ಕೇ ಹೋಗಿ ಕರೆತಂದ ರಾಮಯ್ಯನೂ, ಬೈಕ್ನಲ್ಲಿ ಹಿಂಬಾಲಿಸುತ್ತಿದ್ದವರನ್ನು ನೋಡಿದ್ದ. ಒಮ್ಮೆ ಹೊಂಚುಹಾಕಿ ಅಡ್ಡಗಟ್ಟಿ ಕೇಳಿದಾಗ, ಹೆದರಿ ಓಡಿದವರು ಮತ್ತೆ ಹಿಂಬಾಲಿಸತೊಡಗಿದ್ದರು. ಇಂಥ ಆಗು-ಹೋಗುಗಳ ನಡುವೆ ನಿನ್ನೆ ನಡೆದ ಘಟನೆ ಕೊಂಚ ಆತಂಕಕಾರಿಯಾಗಿತ್ತು. ಕಾಡಿನರಸ್ತೆಯಲ್ಲಿ ನಡೆದು ಬರುತ್ತಿದ್ದವಳ ಮಾತನಾಡಿಸಲೆತ್ನಿಸಿ ಸೋತ ಹುಡುಗನೊಬ್ಬ ಬೈಕಿನಿಂದಿಳಿದು ಕೈಹಿಡಿದಿದ್ದ. ಇನ್ನೊಬ್ಬ ಚೂಡಿದಾರದ ವೇಲಿಗೆ ಕೈಹಾಕಿ ಎಳೆದಿದ್ದ. ಕೂಡಲೇ ಮಡಚಿ ಹಿಡಿದಿದ್ದ ಕೊಡೆಯ ಗಟ್ಟಿಹಿಡಿಯಿಂದ ರಪ್ಪನೆ ಮುಖಕ್ಕೆ ಬಾರಿಸಿದವಳು ಕಾಡು-ಮೇಡು ಬಿದ್ದು, ಬೇಲಿ ಹಾಯ್ದು, ಬಟ್ಟೆ ಹರಿದುಕೊಂಡು, ನಮ್ಮನೆ ಅಂಗಳ ಸೇರಿದ್ದಳು. ಅವಳ, ಮನೆಗೆ ಸೇರಿಸಿದ್ದ ಅಪ್ಪಯ್ಯ, ಮಾರನೇದಿನ ಸಣ್ಣ ಮಾತುಕತೆಯೊಂದನ್ನು ಕರೆದಿದ್ದ.

             **********

     ಆಗಷ್ಟೇ ಆಗಸ ಗುಡುಗಿ, ಭಿರ್ರೆಂದು ಸುರಿದು ತಣ್ಣಾಗಾಗಿದ್ದರೂ, ಯೌವ್ವನದ ಹೆಣ್ಣಿನ ಕೇಶರಾಶಿಯಷ್ಟು ಕಪ್ಪನೆಯ ಮೋಡಗಳು, ಪರಸ್ಪರ ಚುಂಬಿಸಲು ಶುರುಮಾಡಿದ್ದವು. ಮತ್ತೆ ಮಳೆಸುರಿಯುವುದು ಖಾತ್ರಿಯಾಗಿತ್ತು. ಊಟಮಾಡಿದ ಬಟ್ಟಲುಗಳನ್ನು ತೊಳೆದು, ಜಾಗವನ್ನು ಸಾರಿಸಿ, ಒರೆಸಿ, ಬಟ್ಟೆಯನ್ನು ಅಂಗಳಕ್ಕೆ ಹರಡಲು ಬಂದ ಆಯಿ, "ಮತ್ತ್ ಜೊರ್ಗುಡ್ತು ಅನ್ಸ್ತು. ಈ ಮಳೆ ಕಾಟದಿಂದ ಸಾಕಾತಪಾ." ಉಸ್ಸೆಂದು ನಿಟ್ಟುಸಿರು ಬಿಟ್ಟಳು. ಮಟಮಟ ಮಧ್ಯಾಹ್ನದಲ್ಲೂ ಬಿಸಿಲಿನ ರೇಖೆಗಳನ್ನು ಕಾಣದೇ ಬಹುಶಃ ವಾರವಾಗಿದ್ದಿರಬಹುದು. ಚಿರ್ರನೆ ಚೀರುವ ಸಹಸ್ರ ಮರಗಪ್ಪೆಗಳಿಂದಲೂ, ಜೀರ್ದುಂಬಿಗಳಿಂದಲೂ ವಾತಾವರಣ ಯಾವತ್ತೂ ಶಾಂತತೆಯಿಂದ ಕೂಡಿರುತ್ತಲೇ ಇರಲಿಲ್ಲ. ಅಂಗಳದ ಮುಂಭಾಗದಲ್ಲಿ ಬೆಳೆದಿದ್ದ ಲಂಟಾನಾ ಪೊದೆಗಳ ನಡುವಿದ್ದ ಮುಳ್ಳುಕಾರೆಗಿಡದ ಸಹಿತವಾಗಿ ಎಲ್ಲವೂ ಅಪ್ಪಯ್ಯನ ಹೊಸಕತ್ತಿಯ ಹೊಡೆತಕ್ಕೆ ತುತ್ತಾಗಿದ್ದುದರ ಪರಿಣಾಮವಾಗಿ, ಮನೆಯೊಳಗಿದ್ದ ಕತ್ತಲೆಯ ಮುಸುಕು ಹೊರಗಿಲ್ಲದೇ, ಬೆಳರುಬೆಳರಾಗಿ ಮಂದಪ್ರಕಾಶ ಹರಡಿತ್ತು. ಅಂಗಳದಲ್ಲಿ ಅರ್ಧಪಾದ ಮುಳುಗುವಷ್ಟು ನಿಂತಿದ್ದ ನೀರು, ಹಂಚಿನಿಂದಿಳಿದು ಬೀಳುವೆಡೆಯಲ್ಲೆಲ್ಲಾ ಆಗಿದ್ದ ಹೊಂಡಗಳು ಮಳೆಗಾಲದ ಶಕ್ತಿಸಾಮರ್ಥ್ಯಗಳಿಗೆ ಸಾಕ್ಷಿಯಾಗಿದ್ದವು. ನೊಣವೊಂದು ಮುಚ್ಚಿದ್ದ ಕಣ್ಣುರೆಪ್ಪೆಯಮೇಲೆ ಕೂತಿದ್ದರಿಂದ ಅರೆನಿದ್ದೆಗಣ್ಣಲ್ಲಿ ಎದೆಯಮೇಲಿದ್ದ ಕೈಯನ್ನೆತ್ತಿ "ಶ್ ಶ್ ಶ್ ಶ್" ಎನ್ನುತ್ತಾ ಮುಖದ ಮೇಲೆ ಗಾಳಿಯಲ್ಲಾಡಿಸಿದ ಅಪ್ಪಯ್ಯ. ಎಲ್ಲ ನೊಣಗಳೂ ತನ್ನ ದೇಹವನ್ನು ಬಿಟ್ಟುಹೋಗುತ್ತಿವೆಯೇನೋ ಎಂಬಂತೆ. ಒಮ್ಮೆ ರೆಪ್ಪೆಯ ಜಾಗವನ್ನು ಬಿಟ್ಟುಹಾರಿದ ನೊಣ, ಗಾಳಿಯಲ್ಲಿಯೇ ನಾಲ್ಕು ಸುತ್ತು ಹೊಡೆದು, ಮತ್ತದೇ ಜಾಗಕ್ಕೆ ಬಂದು ಪ್ರತಿಷ್ಠಾಪನೆಗೊಂಡಿತು.
"ಥೋ....., ಸಾಯ್ತು ಈ ನೆಳ. ಒಂಚೂರು ವರ್ಗೂಲು ಕೊಡ್ತಿಲ್ಲೆ." ಎನ್ನುತ್ತಾ ಎದ್ದು ಕುಳಿತ. ಅದೇ ಸಮಯಕ್ಕೆ ಸರಿಯಾಗಿ ದೊಡ್ಡದೊಡ್ಡ ಬಿಂಬಲಕಾಯಿಯಂತಹ ಮಳೆಹನಿಗಳು ಬೀಳತೊಡಗಿದ್ದವು. ಅವು ಬೀಳುವ ರಭಸಕ್ಕೆ, ತಲೆಯ ಮೇಲೆ ಕೂದಲಿಲ್ಲದೇ ಮರಳುಗಾಡಾಗಿರುವವರು ಒಮ್ಮೆ ಬೆಚ್ಚಿಬೀಳುತ್ತಾರೆ. ಹಾಗಿತ್ತು ಮಳೆಹನಿಗಳ ಹೊಡೆತ. ಇಂತಿಪ್ಪ ವರ್ಷದಿಂದ ತಪ್ಪಿಸಿಕೊಳ್ಳಬೇಕೆಂಬ ಯಾವ ಪೂರ್ವನಿಯೋಜಿತ ಯೋಚನೆಗಳೂ ಇಲ್ಲದೇ, ಹಾಗೊಮ್ಮೆ ತಪ್ಪಿಸಿಕೊಂಡರೂ ಅಥವಾ ನೆನೆದರೂ, ಅದರಿಂದ ಏನೂ ವ್ಯತ್ಯಾಸವನ್ನನುಭವಿಸದ ಎಲ್ಲ ಹಳ್ಳಿಗಾಡಿನ ಜನರಂತೆ ರಾಮಯ್ಯನೂ ಗದ್ದೆಯ ತುದಿಯಲ್ಲಿ ದಪ್ಪದಪ್ಪನೆ ಹೆಜ್ಜೆಯನ್ನಿಡುತ್ತಾ, ಆಕಡೆ ನಡೆಯುವ ಕ್ರಿಯೆಯೂ ಈ ಕಡೆ ಓಡುವ ಕ್ರಿಯೆಯೂ ಅಲ್ಲದ ಮಧ್ಯಮವಾದ ’ನಡೆದೋಟ’ದೊಂದಿಗೆ ದೌಡಾಯಿಸುತ್ತಿರುವುದು, ನನ್ನ ಮತ್ತು ಅಪ್ಪಯ್ಯನ ಕಣ್ಣಿಗೆ ಬಿತ್ತು.
"ಬರಬ್ಬರಿ ಸಮಾರಾಧ್ನೆ ಆಯ್ದು ಅನ್ಸ್ತು ಹಂದಿದು. ಒಳ್ಳೆ ಮಜಬೂತ್ ಹಂದಿನೇಯಾ" ಅಪ್ಪಯ್ಯ ಉಸುರಿದ.
"ನಮ್ಮನೆ ತೋಟಕ್ ಬತ್ತಿತ್ತಲ, ಅದೇ ಅಪ್ಪುಲೂ ಸಾಕು", ಕುರ್ಚಿಯಮೇಲೆ ಕುಕ್ಕುರುಗಾಲಲ್ಲಿ ಕುಳಿತು, ಮೊಣಕಾಲಿನಮೇಲೆ ಗಲ್ಲವನ್ನಿಟ್ಟು ಹೇಳಿದೆ.

"ಅದೇ ಆಯ್ಕು. ನಾ ಅಲ್ ಹೊಳೆ ಕಡು ಬಳಿಗ್ ಸೊಪ್ಪು ಕೊಯ್ಯಕರ್ ನೋಡ್ದೆ."
ರಾಮಯ್ಯ ಗದ್ದೆಯಂಚಿಗೆ ಬಂದಿದ್ದ. ಆತ ಕಾಲಿಡುತ್ತಿದ್ದ ರಭಸಕ್ಕೆ ಎರಡೂಕಡೆ ಹಾರುತ್ತಿದ್ದ ಕೆಸರು ನೀರು, ಮೊಣಕಾಲಿನ ಮೇಲೆಳೆದು ಕಟ್ಟಿದ್ದ, ಕೆಂಪುಬಣ್ಣಕ್ಕೆ ತಿರುಗಿದ್ದ ಬಿಳಿಪಂಚೆಯನ್ನು ಸಂಪೂರ್ಣ ಕೆಂಪಾಗಿಸಿದ್ದವು. ಆತನ ಬಾಟಾಚಪ್ಪಲಿಯೂ ತಾನೇನೂ ಕಮ್ಮಿಯಿಲ್ಲವೆನ್ನುವಂತೆ ಹಿಂದಿನಿಂದ ’ಸರಕ್ ಚರಕ್ ಸರಕ್’ ಎಂದು ಎರಚಲು ಹೊಡೆದು, ಹಾಕಿದ್ದ ಅಂಗಿಯ ಬೆನ್ನಹಿಂದಿನ ಅರ್ಧಭಾಗವನ್ನು ಕೆಸರುಮಯವಾಗಿಸಿತ್ತು.

"ಮಂಗ ಅಂದ್ರೆ ತನ್ನ್ ಬಿಟ್ರೆ ಬೇರೆ ಯಾರು ಇಲ್ಲೆ ಅಂಬ. ಅದೆಂಥಕ್ ಓಡ್ತಿದ್ನೋ ಗುತ್ತಿಲ್ಲೆ. ಮಳೆಗಿಂತ ಕೆಳಗಿದ್ದ್ ನೀರೇ ಸಮಾ ಒದ್ದೆ ಮಾಡ್ತಿದ್ದು" ನಾನೆಂದೆ. ಅಪ್ಪಯ್ಯ ಒಮ್ಮೆ ಮುಗುಳ್ನಕ್ಕ. ಮೊದಲಿನಂತೇ ಸಂಕದ ಮೇಲೆ ಗಡಿಬಿಡಿಯಿಂದ ಓಡಿಬಂದ ರಾಮಯ್ಯ, ಬಾಗಿಲಿಗೆದುರಾಗಿ ಅಂಗಳದ ಅಂಚಲ್ಲಿ ಚಪ್ಪಲಿಯನ್ನೆಸೆದು ಒಳಗೆ ನುಗ್ಗಿದವ, ಹೊಕ್ಕುತ್ತಿರುವಾಗಲೇ ಕೂಗಿದ.
"ಅಮ್ಮೋ....., ಚಾ ಗೀ ಏನಾರೂ ಅದ್ಯಾ?"

"ಕೂರೂದಿಲ್ವ ನೀನು? ಚಾ ಕೊಟ್ರೆ ಹಂಗೇ ಹೋಗ್ತ್ಯಾ ಹೇಳು?" ಒಳಗಿನಿಂದಲೇ ತೂರಿಬಂದ ಆಯಿಯ ಪ್ರಶ್ನೆಗೆ ಉತ್ತರವೆಂಬಂತೆ ಜಗುಲಿಯ ಮೂಲೆಯೊಂದರಲ್ಲಿ, ಮೇಲಕ್ಕೆ ಕಟ್ಟಿದ್ದ ಲುಂಗಿಯನ್ನು ನಿಡಿದಾಗಿ ಇಳಿಬಿಟ್ಟು ಕುಳಿತ.
"ಏನಂತದೆ ಹಂದಿ?" ಅಪ್ಪಯ್ಯನ ಪ್ರಶ್ನೆ.

"ಮಸ್ತ್ ಹಂದಿ ಅಯ್ಯಾ....., ಇತ್ಲ ಬದಿ ತ್ವಾಟದಗೆಲ್ಲಾ ಬಳಚೀಬಳಚೀ ಡುಮ್ಮಗಾಗಿತ್ತೆ. ಪಾಪ, ಆ ಕರಿಗೊಂಡರ ಮನೆ ಸ್ವಾಮಯ್ಯ ಬಿದ್ದಿ ತೊಡೆ ಸಿಗ್ದ್ಕಂಡನೆ. ಆರ್ರೂ ಬಿಡ್ಲಿಲ್ಲೆ, ಇವತ್ ಬೆಳ್ಗಾಗೂದ್ರೊಳ್ಗೆ ಹಂದಿ ಹರೂಕ್ ಹಾಜಿರ್ರು, ಕ್ಕಿ...ಕ್ಕಿ....ಕ್ಕಿ....ಕ್ಕಿ...", ಎಂದು ನಕ್ಕ. ಸೋಮಯ್ಯ ಹಂದಿಬೇಟೆಯ ನಡುವೆ ಬಿದ್ದು, ಬೆತ್ತದ ಹಿಂಡಿನಲ್ಲಿ ಹೊರಳಿಹೋಗಿ, ಮೈಯೆಲ್ಲಾ ಗಾಯಮಾಡಿಕೊಂಡು, ತೊಡೆ ಸಿಗಿಸಿಕೊಂಡ ವಿಷಯ ಮುಂಜಾನೆಯೇ ತಿಳಿದಿತ್ತು.

"ಚೋದಿಮಗಂದು ಹಂದಿ....., ನಮ್ ಬಾಳಿತೋಟ ಎಲ್ಲಾ ಸತ್ಯನಾಶ ಮಾಡ್ಹಾಕಿತ್ತು. ಬೇಲಿ ಹಾಕ್ ಹಾಕ್ ನನ್ ರಟ್ಟೆ ಎಲ್ಲಾ ಸೋತ್ ಹೋಗಿತ್ತು ಮಾರಾಯಾ", ಅಪ್ಪಯ್ಯನ ದನಿಯಲ್ಲಿ ಹತಾಶೆಯೊಂದಿಗೆ ಧನ್ಯವಾದದ ಸುಳಿಯೊಂದು ತಿರುಗುತ್ತಿತ್ತು.

     ರಾಮಯ್ಯ ಮನೆಯೊಳಕ್ಕೆ ಹೊಕ್ಕುವುದನ್ನೇ ಕಾಯುತ್ತಿತ್ತೊ ಎಂಬಂತೆ ಭೋರ್ರೆಂದು ಶುರುವಾದ ಮಳೆ, ಕುಳಿರ್ಗಾಳಿಯೊಂದಿಗೆ ಎರಚಲನ್ನು ಕಿಟಕಿ ಮತ್ತು ಬಾಗಿಲುಗಳ ಮೂಲಕ ತಂದೆರಚಿತು. ಕಿಟಕಿಯಿಂದ ಮಾರುದೂರವೇ ಕುಳಿತಿದ್ದ ನನಗೆ ಮತ್ತು ಅಪ್ಪಯ್ಯನಿಗೆ ತಾಕಲಿಲ್ಲವಾದರೂ, ಅದರ ಬುಡದಲ್ಲೇ ಕುಳಿತಿದ್ದ ರಾಮಯ್ಯ, ಒಮ್ಮೆ ಚಳಿಯಿಂದ ನಡುಗಿ ಮುದುರಿದ. ವಾಯುವಿಹಾರಕ್ಕೆಂದೋ, ಸಂಗಾತಿಯನ್ನು ಹುಡುಕುತ್ತಲೋ ಅಥವಾ ಎಳೆದೂರ್ವೆಯನ್ನು ತಿಂದು ಕಕ್ಕಲೋ ಹೊರಗೆಹೋಗಿದ್ದ ಬೆಕ್ಕು ಧುತ್ತನೆ ಬಾಗಿಲ ಮೂಲಕವಾಗಿ ಒಳಗೆ ಬಂದು, ಜಗುಲಿಯಲ್ಲೊಮ್ಮೆ ನಿಂತು, ಪ್ರೇಕ್ಷಕರಾಗಿ ಕುಳಿತಿದ್ದ ಸಮಸ್ತ ಜನರನ್ನೊಮ್ಮೆ ನೋಡಿ, ಮೀಸೆಯಲ್ಲಾಡಿಸಿ, "ಆ.....," ಎಂದು ಬಾಯಿತೆರೆದು, ಬಿರಬಿರನೆ ಮೈಕುಡುಗಿದುದರಿಂದ ತುಪ್ಪಳದ ಮೇಲಿದ್ದ ಮಳೆಹನಿಗಳು, ಕೆಲವು ಕೂದಲುಗಳ ಸಮೇತ ಸುತ್ತೆಲ್ಲಾ ದಿಕ್ಕಿಗೆ ಪಸರಿಸಿದವು. ಮುಂಗಾಲನ್ನೊಮ್ಮೆ ನೆಕ್ಕಿ, ಮತ್ತೆ ಎಲ್ಲರತ್ತ ಕೊಂಕುನೋಟದಿಂದ ನೋಡಿ, "ಮಿಯ್ಯಾಂವ್....., ಕುರ್ರ್ ರ್ರ್ ರ್ರ್.....," ಎನ್ನುತ್ತಾ ತನ್ನೊಡತಿಯೆಡೆಗೆ ಸೊಂಟತಿರುಗಿಸುತ್ತಾ ಹೊರಟುಹೋಯಿತು.

     ಈ ಮಾರ್ಜಾಲವ್ಯಾಪಾರ ನಡೆದ ಕೆಲವು ಸಮಯದ ನಂತರದವರೆಗೂ ಜಗಲಿಯಲ್ಲಿ ನೀರವಮೌನ ಆವರಿಸಿತ್ತು. ಅಡುಗೆಮನೆಯೊಳಗಾಗುತ್ತಿದ್ದ ಸಣ್ಣಪ್ರಮಾಣದ ಶಬ್ದಗಳೂ ಹೊರಗೆ ಬರಲಾರದಷ್ಟು ದೊಡ್ಡ ಶಬ್ದವನ್ನು ’ಜಿಟಿ ಜಿಟಿ’ ಸುರಿಯುತ್ತಿದ್ದ ಮಳೆ ಹೊರಡಿಸುತ್ತಿತ್ತು. ಇಂಥ ಸಂದರ್ಭದಲ್ಲಿ ಮಳೆಯ ಶಬ್ದವನ್ನಲ್ಲದೇ ಬೇರೇನನ್ನೂ ಕೇಳದ ಕಿವಿ, ನಗರದ ಬಗೆಬಗೆ ವಾಸನಾರೂಪಗಳಿಂದ ಮುಕ್ತವಾದ ಹಳ್ಳಿಯ ನಿರ್ವಾಸನಾ ಪರಿಸರದಲ್ಲಿದ್ದ ನಾಸಿಕ, ಹಿತವಾದ ಚಳಿರ್ಗಾಳಿಯನ್ನನುಭವಿಸುತ್ತಿದ್ದ ಚರ್ಮರಂಧ್ರಗಳು, ಮಂಜನ್ನೊಡಗೂಡಿ ಸುರಿಯುವ ಹನಿಯನ್ನು ಮಾತ್ರವೇ ಕಾಣಬಲ್ಲ ನೇತ್ರದ್ವಯಗಳು....... ಹೀಗೆ ಮುಂತಾಗಿ ಮಾನವನ ನವರಂಧ್ರಗಳೂ ತಮ್ಮ ಕಾರ್ಯವ್ಯಾಪ್ತಿಯಲ್ಲೊಮ್ಮೆ ವಿಶ್ರಾಂತಿಪಡೆದಾಗ, ಯೋಚಿಸಲು ಯಾವ ಕಾರ್ಯಕಾರಣ ಸಂಭಂಧಗಳೂ ಇಲ್ಲದ ಮನಸ್ಸು ಸ್ಥಗಿತಗೊಂಡು, ಹಳೆಯ ಹತ್ತುಹಲವು ಜನ್ಮಗಳ ಪುಣ್ಯಾವಷೇಶವೇನಾದರೂ ಉಳಿದಿದ್ದಲ್ಲಿ, ಅವರವರ ಪಾಲಿಗೆ ತಕ್ಕುದಾಗಿ ಪ್ರತಿಯೊಬ್ಬರೂ ಆ ಭೂಮವ್ಯೂಹದಲ್ಲೊಂದಾಗಿ ನಿರ್ವಿಕಲ್ಪ ಸಮಾಧಿಯ ಹನಿಯೊಂದರ ಅಣುವನ್ನನುಭವಿಸಿ, ಮುಖದ ಮೇಲೊಂದು ಸಂತೃಪ್ತನಗೆ ಸೂಸುವುದರಲ್ಲಿ ಯಾವುದೇ ಸಂದೇಹವಿರಲಿಲ್ಲ.

     ಅದರೀ ತನು, ಮನ, ಕಾರ್ಯಕಾರಣ ಸಂಬಂಧ, ಭೂಮಾನುಭೂತಿ, ಸಮಾಧಿ ಮುಂತಾದವುಗಳೊಮ್ಮೆಯೂ ಚಿತ್ತವೃತ್ತಿಯಲ್ಲಿ ಸುಳಿಯದ, ಅವುಗಳ ನಾಮಾರ್ಥ-ಭಾವಾರ್ಥಗಳೂ ಗೊತ್ತಿಲ್ಲದ ರಾಮಯ್ಯನೆಂಬೋ ವ್ಯಕ್ತಿಯೂ ಸಹ ಅರಿವಿಲ್ಲದೇ ತನ್ನ ತಾನು ಮರೆಯಬೇಕಾದ ಆ ಕ್ಷಣದಲ್ಲಿ......, ಅದೋ....., ಆತನೇನು ಮಾಡುತ್ತಿದ್ದಾನೆ!!? ಇವ್ಯಾವುಗಳ ಹಂಗಿಲ್ಲದೇ ಮುದುರುಕುಳಿತಿದ್ದವ, ಒಳಗಿನಿಂದ ಲೋಟ ತುಂಬಿ ಬರಬಹುದಾದ ಬಿಸಿ ಹಬೆಯಾಡುವ ಚಹಕ್ಕಾಗಿ ಬಗ್ಗಿ ಬಗ್ಗಿ, ಒಂಟೆಯ ಕತ್ತನ್ನೆತ್ತರಿಸಿ ನೋಡುತ್ತಾ, ಆಗಾಗ ನೊಣಗಳನ್ನೋಡಿಸುತ್ತಾ ಕಾಲಕಳೆಯುತ್ತಿದ್ದಾನೆ. ಕೊನೆಗೂ ಆತನ ಮನದಲ್ಲಿ ಆಸ್ಥೆಯ ಗೋಪುರಗಳನ್ನೆಬ್ಬಿಸಿದ ಆ ಕಾರಣವಸ್ತುವಿನ ಆಗಮನವಾಯಿತು. ಬಟ್ಟಲಿನಲ್ಲಿ ಎರಡು ಲೋಟ ಚಹಾ ತಂದ ಆಯಿ, ಒಂದನ್ನು ಅಪ್ಪಯ್ಯನಿಗೂ ಇನ್ನೊಂದನ್ನು ರಾಮಯ್ಯನಿಗೂ ಕೊಟ್ಟಳು.
"ಮಾಣಿ....., ನೀ ಒಳ್ಗ್ ಬಾರ" ಎಂದಾಗಲೇ ಅರಿವಾಗಿತ್ತು, ನಿನ್ನೆಮಾಡಿದ ಶಿರ ಕಪಾಟಿನ ಡಬ್ಬಿಯ ಸಮೂಹದಲ್ಲೆಲ್ಲೋ ಅಡಗಿ ಕುಳಿತಿದೆಯೆಂದು.

     ಈ ಚಹಾಕುಡಿಯುವಿಕೆಯ ನಡುವೆಯೊಂದಿಷ್ಟು ಮಳೆ-ಬೆಳೆ ಸಂಬಂಧೀ ಮಾತುಕತೆಗಳಾಗುತ್ತಿರುವಾಗಲೇ, ಕರಿಗೊಂಡರ ಮನೆಯಿಂದ ಕುಂಟುತ್ತಿದ್ದ ಸೋಮಯ್ಯ ಮತ್ತು ಹನುಮಂತನಾಯ್ಕನ ಮಗ ಲಕ್ಷ್ಮಣನಾಯ್ಕನ ಸವಾರಿ ನಿಧಾನಕ್ಕೆ ಕಂಬಳಿಕೊಪ್ಪೆಯನ್ನು ಹೊದ್ದು ಆಗಮಿಸಿತ್ತು. ಸೊಂಟದಲ್ಲಿ ’ಖಣ್ ಖಣ್’ ಎಂದು ಸದ್ದನ್ನೊರಡಿಸುತ್ತಾ ಕತ್ತಿಯೊಂದಿಗೆ ನೇತಾಡುತ್ತಿದ್ದ ಕತ್ತಿಕೊಕ್ಕೆ, ಯಾವುದೋ ಕೆಲಸ ಮುಗಿಸಿಯೋ ಅಥವಾ ಶುರುಮಾಡಲೋ ಹೊರಟಿರುವರೆಂಬುದನ್ನು ಸೂಚಿಸುತ್ತಿತ್ತು. ಅವರೀರ್ವರಿಗೂ ಲೋಟಭರ್ತಿ ಚಾ ಹಸ್ತಾಂತರವಾಗಿ, ತನ್ಮೂಲಕ ಜಿಹ್ವಾಚಾಪಲ್ಯ ಮತ್ತು ’ಬಾಯಾಸರಿಕೆ’ ತಣಿಸಲ್ಪಟ್ಟು, ತೊಳೆದ ಲೋಟಗಳು ತಿರುಗಿ ಅಡುಗೆಮನೆಯೊಳಗೆ ಆಗಮಿಸಿದವು.
ಸೋಮಯ್ಯ ದನಿಯೆಳೆದ,"ಅಯ್ಯಾ....., ಬಾಯ್ಗೆ ಏನಾರೂ?"
"ಏ....., ಕೇಳ್ತನೆ? ಮೂರ್ ಕವಳ ರೆಡಿಮಾಡೆ." ಅಪ್ಪಯ್ಯ ಕುಳಿತಿದ್ದವನು ಕದಲದೇ ಹೇಳಿದ.
"ಅಯ್ಯೋ, ಸುಮ್ನೆ ಕೂತ್ಕಂಡ್ ಇದ್ರಲಿ. ನಿಮ್ಗೇ ಕೊಡುಲ್ ಆಗ್ತಿಲ್ಯಾ? ನಂಗ್ ಈಗ ಪಾತ್ರೆ ತೊಳ್ದಿ ದನುಗೆಲ್ಲಾ ಅಕ್ಕಚ್ಚ್ ಕೊಡ" ಆಯಿಯ ಕೆಲಸಗಳ ಪಟ್ಟಿ ಮುಂದುವರೆದಿತ್ತು.

"ಆತು, ಕೊಡ್ತೆ." ಎಂದವನು ಎದ್ದುಹೋಗಿ ಎರಡು ಹಣ್ಣಡಿಕೆ ಆರಿಸಿತಂದು ನನಗೆ ಕೊಟ್ಟ. ಮೋಟು ಕತ್ತಿಯಿಂದ ನಿಧಾನಕ್ಕೆ ಅಡಿಕೆ ಕೆರೆದಾದ ಮೇಲೆ, ಭಾಗಮಾಡಿ ಎಲೆಯೊಂದಿಗೆ ಮೂವರಿಗೂ ಕೊಡಲಾಯಿತು.
"ಮಾಣಿ....., ಹೊಗೆಸಪ್ಪು?" ರಾಗವೆಳೆಯುವ ಸರದಿ ಲಕ್ಷ್ಮಣನಾಯ್ಕನದು.

"ನಮ್ಮನೀಲ್ ಕವಳ ಹಾಕ್ವರು ಯಾರೂ ಇಲ್ವಲ. ನಿಂಗೇ ಗೊತ್ತದೆ, ಹೊಗೆಸಪ್ಪೆಲ್ಲಾ ಇರೂದಿಲ್ಲ ಹೇಳಿ" ಅಪ್ಪಯ್ಯನ ಮಾತು ಮುಗಿಯುವ ಮುನ್ನವೇ ರಾಮಯ್ಯನ ಲುಂಗಿಯ ಗಂಟಿನಲ್ಲಿ ಮುದುರಿ ಮಲಗಿದ್ದ ಹೊಗೆಸೊಪ್ಪಿನ ಎಳೆಯೊಂದು ಹೊರಬಂದು ಮೂರು ತುಂಡಾಗಲ್ಪಟ್ಟು ಎಲ್ಲರ ಕೈಸೇರಿತು.

’ಛಟ್’ ಎಂದು ತೊಡೆಯ ಮೇಲಿದ್ದ ಸೊಳ್ಳೆಯನ್ನು ಹೊಡೆದ ಲಕ್ಷ್ಮಣನಾಯ್ಕನ ಅಂಗೈಯೆಲ್ಲಾ ರಕ್ತಮಯವಾಗಿತ್ತು. ಮೊಣಕಾಲಿಗೆ ಒರೆಸಿಕೊಂಡವನೇ, ಹೊಗೆಸೊಪ್ಪನ್ನು ಅದೇ ಕೈಯ್ಯಲ್ಲಿ ಮುದ್ದೆಮಾಡಿ, ಆಗಲೇ ಬಾಯಿಸೇರಿದ್ದ ಎಲೆಯ ಜೊತೆ ಸೇರಿಸಿದ.
     ವರಾಹದೇಹದ ಬಾಡೂಟ, ನೆರೆದಿದ್ದ ಮೂವರಲ್ಲೂ ತನ್ನ ವರ್ಚಸ್ಸನ್ನು ತೋರಿಸುತ್ತಿದ್ದುದರಿಂದ ಅವರ್ಯಾರ ಮನಸ್ಸೂ ವಿಷಯದ ಗಂಭೀರತೆಯೆಡೆಗೆ ಹೊರಳದೇ ವಾತಾವರಣ ಲಘುವಾಗಿತ್ತು.
ಸನ್ನಿವೇಶವನ್ನು ಪರಿವರ್ತಿಸುವ ನಿಟ್ಟಿನಲ್ಲಿ ಹೊರಳಿಬಂತು ಅಪ್ಪಯ್ಯನ ಸ್ವರ, "ಎಂಥಾ ಮಾಡೂದಾ ಈಗ?" ಏಕವಚನದಲ್ಲಿ ಸಂಭೋದಿಸಿದ್ದರೂ ಪ್ರಶ್ನೆ ಮೂವರಿಗೂ ಅನ್ವಯವಾಗುತ್ತಿತ್ತು.

"ಇದುವರೆಗೂ ಇಲ್ಲದ ರೋಷವನ್ನು ಆಹ್ವಾನಿಸಿಕೊಂಡ ಸೋಮಯ್ಯ, "ಅಯ್ಯಾ...., ಆ ಸೂಳೆಮಕ್ಳಿಗೆ ನಾಕು ಬಿಟ್ರೆ ಸರಿ ಆಯ್ತರೆ" ಎಂದ.

"ಹೌದ್ ಮಾರ್ರೆ...., ಅವ್ರ್ ಮತ್ತ್ ಇತ್ಲಬದಿಗ್ ಕಾಲ್ ಇಡೂಕಾಗ." ಲಕ್ಷ್ಮಣನಾಯ್ಕನ ದನಿಯೆತ್ತರಿಸಿತ್ತು.
"ಅಲ್ಲಾ..., ಹೊಡುದ್ ದೊಡ್ಡ್ ಮಾತಲ್ಲ. ನಾಳೆ ಕೇಸ್-ಗೀಸ್ ಆದ್ರೆ ಎಂತಾ ಮಾಡ್ತ್ರಿ?"
"ಅಯ್ಯಾ...., ಹಂಗರೆ ನಾಳಿ ನನ್ ಮಗ್ಳ್ ಮಾನ ಹೋದ್ರೆ ಯಂಥಾ ಮಾಡೂದು, ಹೇಳಿ ಕಾಂಬ?" ಕೃದ್ಧನಾದ ರಾಮಯ್ಯ, ಅಪ್ಪಯ್ಯನೇ ಅಪರಾಧಿಯೆಂಬಂತೆ ಮಾತನಾಡಿದ್ದ.
"ಹಂಗಲ್ವಾ ಹ್ವಾ...., ಅವ್ರು ಹೇಳೂದ್ರಗೆ ಎಂಥ ತಪ್ಪದೆ? ಇವತ್ ಹೊಡ್ದ್ ಕಳ್ಸದ್ರೆ, ಕಡೀಗ್ ನಮ್ನೇ ಒಳಗ್ ಹಾಕ್ರೆ ಮಾಡೂದೆಂಥದ? ಬಗೀಲ್ ಮಂಡಿ ಓಡ್ಸು." ಲಕ್ಷ್ಮಣನಾಯ್ಕನ ಕಳಕಳಿಯ, ದೂರಾಲೋಚನಾ ಬುದ್ಧಿಯ ಪ್ರದರ್ಶನವಾಗತೊಡಗಿತ್ತು.

"ನೀವ್ ಯಂಥಾ ಮಾಡೂಕ್ ಹಣ್ಕೀರೋ ನಾಕಾಣೆ, ನಮ್ಮನೀಲ್ ಒಂದ್ ಕೇಪಿನ್ ಕೋವಿ  ಅದೆ. ಇವತ್ತಲ್ಲ ನಾಳೆ ಹೊಡ್ದ್ ಹಾಕ್ತೆ ಆ ಬೋಳಿಮಕ್ಳನ್ನ." ರಾಮಯ್ಯನ ಕಣ್ಣಿನಲ್ಲಾಗಲೇ ಶರಾವತಿ ನದಿಯ ಅಣೆಕಟ್ಟಿನಂತೆ ನೀರುಕಟ್ಟಿ, ಇಳಿಯಲು ಶುರುವಾಗಿತ್ತು. ಮೂಗಂತೂ ಭೋರ್ಗರೆಯುತ್ತಿದ್ದ ರಭಸಕ್ಕೆ, ಕೆಂಬಣ್ಣ ಹೊಂದಿದ ಲುಂಗಿಯ ತುದಿಯಿಂದ ಒರೆಸಲ್ಪಟ್ಟು, ತಾನೂ ಸಹ ಅದೇ ಬಣ್ಣಕ್ಕೆ ಪರಿವರ್ತನೆಗೊಂಡಿತು.

"ನೀಯೆಂಥದ ಮಾರಾಯಾ...., ಗಂಡಸಾಗಿ ಹಿಂಗೆಲ್ಲಾ ಮರಕುದಾ? ನಾವೆಲ್ಲಾ ಇಲ್ವಾ ಇಲ್ಲಿ? ಯಂಥದಾರೂ ಉತ್ತರ ಕಂಡ್ ಹಿಡ್ವ ಬಿಡು" ಅಪ್ಪಯ್ಯನ ಸಮಾಧಾನದ ಮಾತುಗಳೇನೂ ಆತನಿಗೆ ಸಾಂತ್ವನವನ್ನೀಯಲಿಲ್ಲವಾದರೂ ಒಂದ್ಹತ್ತು ಸೆಕೆಂಡ್ಗಳ ತರುವಾಯ ಸುಮ್ಮನಾದ. ಎಲ್ಲರನಡುವೆಯೂ ಕೆಲವು ನಿಮಿಷಗಳ ಕಾಲ, ಮೌನವೆಂಬುದು ಸತ್ತ ದೇಹದಂತೆ ದಿಂಡುಗಡೆದು ಬಿದ್ದಿತ್ತು. ಯಾರೊಬ್ಬರೂ ಮಾತನಾಡುತ್ತಿರಲಿಲ್ಲ. ಕೇವಲ ನೀಳ ಉಸಿರಾಟದ ’ಸುಸ್ಸ್ ಸುಸ್ಸ್’ ಎಂಬ ಸ್ವರ ಕೇಳಿಬರುತ್ತಿತ್ತು. ಕುಳಿತಿದ್ದವರ ಉದರಬಂಡೆಗಳೆಲ್ಲವೂ ಮೇಲಕ್ಕೂ ಕೆಳಕ್ಕೂ, ಗಾಳಿಬೀಸಿದ ಬಾಳೆ ಅಲ್ಲಾಡುವಂತೆ, ಏರಿಳಿಯುತ್ತಿದ್ದವು. ಅಂಗಣದಲ್ಲಿ ಉದ್ದಕ್ಕೆ ಹರಡಿದ್ದ ಸಂಕದ ಅಗ್ರಭಾಗದಲ್ಲಿ ಹುಲುಸಾಗಿ ಬೆಳೆದಿದ್ದ ಕೋಟೆಹೂವಿನ ಗಿಡದಿಂದೊಂದು ಹೂವು ಆಗಸಕ್ಕೆದುರಾಗಿ ಮುಖಮಾಡಿ ಅರಳಿನಿಂತಿತ್ತು. ಮಳೆಹನಿಗಳ ನೀರು, ಅದರ ಕೊಳವೆಯಂತಹ ಭಾಗದಲ್ಲಿ ತುಂಬಿದಾಗ ತೂಕ ಹೆಚ್ಚಿ ಕೆಳಕ್ಕೆ ಬಾಗಿ ತನ್ನೊಡಲಲ್ಲಿರುವ ನೀರನ್ನೆಲ್ಲಾ ವಮನಿಸಿ, ಮತ್ತೆ ತನ್ನ ಸಹಜಾವಸ್ಥೆಗೆ ಜಿಗಿಯುತ್ತಿತ್ತು. ಅಪ್ಪಯ್ಯ ನಿಧಾನಕ್ಕೆ ಕೆಮ್ಮಿ, ಮಾತಿಗೆ ಮೊದಲಾದ.

"ಸೋಮಯ್ಯಾ....., ನಿಮ್ಮನೆ ರವಿ ಬರಲಿಲ್ವಾ ಇನ್ನೂ ಮನೆಗೆ?" ಯುವಕರೀರ್ವರ ಪೂರ್ವಾಪರತೆಯನ್ನೂ, ಕೌಟುಂಬಿಕ ಹಿನ್ನೆಲೆಯನ್ನೂ, ಹಣಬಲವನ್ನೂ ತಿಳಿಯಲು ರವಿಯನ್ನು ಹಿಂದಿನದಿನ ರಾತ್ರಿಯೇ ನೇಮಿಸಲಾಗಿತ್ತು. ಆತ, ಮುಂಜಾನೆಯೇ ಭಟ್ಕಳಕ್ಕೆ ಹೋಗಿದ್ದವ ಇನ್ನೂ ಬಂದಿರಲಿಲ್ಲ.
"ನಾ ಇತ್ಲಗ್ ಬರ್ಬೇಕಿರೆ ಅಂವ ಮನೀ ಹೊಕ್ದ. ಊಟ-ಗೀಟ ಮಾಡ್ಕಂಡ್ ಬರ್ವ. ಇಷ್ಟೊತ್ತಿಗ್ ಬರ್ಬೇಕಾಗಿತ್ತಪ." ಮಾತನಾಡುತ್ತಲೇ ಬಗ್ಗಿ, ಬಾಗಿಲೆಡೆಯಿಂದ ಗದ್ದೆಯ ಬದುವಿನ ದಾರಿಯತ್ತ ವೀಕ್ಷಿಸಿದ ಸೋಮಯ್ಯ.
"ಹಾ....., ಬಂದ ನೋಡಿ. ನಾ ಹೇಳಿದ್ದು ಸಮಾ ಆತು" ದೂರದಲ್ಲೇ ಕಂಡಿತ್ತು ರವಿಯ ಮಬ್ಬು ದೇಹ. ಆತನೊಂದಿಗೆ ನಿಧಾನಕ್ಕೆ ಅಣ್ಣಪ್ಪನೂ ನಡೆದುಬಂದ. ಆಧುನಿಕತೆಯ ಪ್ರಭಾವ ಎಲ್ಲ ಯುವಕರಂತೇ ರವಿಯ ಮೆಲೂ ಆಗಿತ್ತು. ಲುಂಗಿಯ ಜಾಗವನ್ನು ಬರ್ಮಾಚಡ್ಡಿಯೂ, ಕಂಬಳಿಕೊಪ್ಪೆಯ ಜಾಗವನ್ನು ಕೊಡೆಯೂ ಆಕ್ರಮಿಸಿದ್ದವು. ಎಲ್ಲರಂತೆ "ಅಯ್ಯಾ" ಎಂದು ಸಂಭೋಧಿಸದೇ "ಭಟ್ರೇ" ಎನ್ನುತ್ತಿದ್ದನಾತ. ಅವನೊಂದಿಗಿದ್ದ ಅಣ್ಣಪ್ಪನೆಂಬಾಕೃತಿ, ಪಕ್ಕಾ ಹಳ್ಳಿಗನದ್ದೆಂದು ನೋಡಿದವರಾರಾದರೂ ಹೇಳಬಹುದು.

     ಅವರಿಬ್ಬರೂ ಬಂದು ಪ್ರತಿಷ್ಟಾಪಿತರಾದಾಗ "ಬೇಡ, ಬೇಡ"ವೆಂದರೂ ಬಂದ ಚಹಾವನ್ನು "ಬೇಡಾಗಿತ್ತು, ಬೇಡಾಗಿತ್ತು" ಎನ್ನುತ್ತಲೇಕುಡಿದು ಮುಗಿಸಿದರು. ದೇವಕೈಂಕರ್ಯಗಳನ್ನೆಲ್ಲಾ ಮುಗಿಸಿ ಗರ್ಭಗುಡಿಯಿಂದ ನಿಧಾನಕ್ಕೆ ಭಕ್ತರೆಡೆಗೆ ಚಿತ್ತೈಸುವ ಅರ್ಚಕರಂತೆ ಎಲ್ಲರೆಡೆಗೊಮ್ಮೆ ನೋಡಿ ಮುಗುಳ್ನಕ್ಕು ಸುಮ್ಮನೆ ಕುಳಿತ ರವಿ, ಬೇಕಾದವರೇ ತನ್ನನ್ನು ಕೇಳಲಿ ಎಂಬಂತೆ.
"ಪಾರ್ಟಿ ಹೆಂಗೆ?" ಅಪ್ಪಯ್ಯನೇ ಮುಹೂರ್ತವಿಟ್ಟ.
"ಬಿಗಿ ಅದೆ ಭಟ್ರೆ" ಉತ್ತರ ನಿಗೂಡವಾಗಿತ್ತು.
"ಯಂಥ ಬೊಗಳ ಬೇಗೆ. ಅಧಿಕ್ಷಣಿ ಕಾಣು....., ನಾವ್ ಸಾಯ್ತೇ ಕೂತ್ಕಂಡವೆ ಇಲ್ಲಿ. ಇವಂಗ್ ಮಸ್ಗಿರಿ." ಲಕ್ಷ್ಮಣನಾಯ್ಕ ಒದರಿದ. ಮಹತ್ತನ್ನು ವರ್ಣಿಸುತ್ತಿರುವೆನೆಂಬಂತೆ ದೀರ್ಘವಾಗಿ ಉಸಿರನ್ನೆಳೆದು, ಒಮ್ಮೆ ಎಡಗೈಯಿಂದ ಹಿಂತಲೆ ಕೆರೆದುಕೊಂಡು ಮೊದಲಿಟ್ಟ ರವಿ.
"ಒಬ್ಬ ಸಬ್ ಇನ್ಸ್ಪೆಕ್ಟರ್ ಮಗ, ಮತ್ತೊಬ್ಬ ಅವ್ನ್ ಬಾವ, ಅತ್ತಿ ಮಗ. ಅವ್ನ್ ಅತ್ತಿ ಅಂದ್ರೆ ಆ ಮತ್ತೊಬ್ಬ್ ಹುಡುಗ್ನ ಅಬ್ಬಿ ಇರೂದ್ ಎಲ್ಲಿ ಮಾಡೀರಿ? ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೇಲಿ, ಅದೂ ಡಿಸ್ಟ್ರಿಕ್ಟ್ ಆಫೀಸರ್ ಅಂಬ್ರು" ಆತನ ಸುದ್ದಿಕೋಶದ ಚೂರುಪಾರುಗಳೂ ಕೂಡ ಮುಗಿದಿದ್ದವು. ಎಲ್ಲರ ಮುಖದಲ್ಲಿ ಚಿಂತೆಯ ಮಾಯಾಮುಸುಗು ಆವರಿಸಿತ್ತು. ರಾಮಯ್ಯ ಮತ್ತೆ ಹನಿಗಣ್ಣಾಗಿದ್ದ. ಉಳಿದಿಬ್ಬರ ದೇಹದಲ್ಲಿ ಭೀತಿಯೂ ಸಹ ಬಾಯ್ಕೆಳೆದುಕೊಂಡು ಕುಳಿತಿತ್ತು. ಆಯಿ, ಒಳಗಿದ್ದವಳು ಪಾಕಶಾಲೆಯ ಬಾಗಿಲ ಮೆಟ್ಟಿಲಮೇಲೆ ನಿಂತು ಇಣುಕುತ್ತಿದ್ದಳು.
ಮುಂದೇನು ಮಾಡುವುದು?
ಮುಂದೇನು ಮಾಡುವುದು?
ಮುಂದೇನು ಮಾಡುವುದು?
ಅಪ್ಪಯ್ಯನೇನೋ ದೀರ್ಘಾವಲೋಕನೆಯ ಸಾಗರದಿಂದ ಮುತ್ತೊಂದನ್ನು ಹೆಕ್ಕಿತೆಗೆದಂತೆ ಸಣ್ಣದಾಗಿ ಉಸುರಿದ.
"ಉಳ್ಳ ಹಾಕ್ವನಾ?"
"ಆಂ!!!!??" ಎಲ್ಲರೂ ಒಟ್ಟಿಗೇ ಕೂಗಿದ್ದರು. ನನಗೂ ಮಹದಾಶ್ಚರ್ಯವಾಗಿತ್ತು. ನಿಧಾನವಾಗಿ ಉಪಾಯದ ರೂಪುರೇಷೆಯೆಲ್ಲವೂ ಹೊರಬಿತ್ತು. ಎಲ್ಲರೂ ಬೇರೆದಾರಿಯಿಲ್ಲವೆಂಬಂತೆ ತಲೆದೂಗಿದರು. ಕುಸುಮಳನ್ನು ಕರೆದು, ಅವಳೇನು ಮಾಡಬೇಕೆಂದು ವಿವರಿಸಲಾಯಿತು. ಭಯಮಿಶ್ರಿತ ಅನಿವಾರ್ಯತೆಯಿಂದವಳು ಒಪ್ಪಿದಳು. ಮುಂದಿನದು ಕೇವಲ ಕಾರ್ಯಾಚರಣಾ ಭಾಗವಾಗಿತ್ತು. ಹಾವೂ ಸಾಯಬಾರದು, ಕೋಲೂ ಮುರಿಯಬಾರದು. ಅಸಲಿಗೆ ಹಾವು ಮತ್ತು ಸರ್ಪಬಳಗಕ್ಕೆ ಕೋಲು ಯಾವುದೆಂಬುದೇ ಗೊತ್ತಾಗಬಾರದು......

             **********

     ಆವತ್ತು ಬಸ್ಸಿನಿಂದಿಳಿದು ನಿಧಾನಕ್ಕೆ ನಡೆದುಬರುತ್ತಿದ್ದ ಕುಸುಮಳನ್ನು, ಬಲಿಪಶುವಾಗಲಿದ್ದ ಯುವಕರಿಬ್ಬರನ್ನು ಹೊತ್ತ ಬೈಕ್ ಹಿಂಬಾಲಿಸುತ್ತಿತ್ತು. ಈ ಮೂವರೂ ವ್ಯಕ್ತಿಗಳನ್ನು ಮರದ ಹಳುಗಳೆಡೆಯಿಂದ, ಯಾವುದೇ ಅನಮಾನಾಸ್ಪದಕ್ಕೆಡೆಗೊಡದಂತೆ ನಾನು ಮತ್ತು ಅಣ್ಣಪ್ಪ ಹಿಂಬಾಲಿಸುತ್ತಿದ್ದೆವು. ಏನಾದರೂ ಅಚಾತುರ್ಯವಾದರೆ ಕೂಡಲೇ ಕುಸುಮಳ ಸಹಾಯಕ್ಕಾಗಮಿಸುವುದು ನಮ್ಮ ಕರ್ತವ್ಯವಾಗಿತ್ತು. ಆಗಸ ತೂತಾಗುವಂತೆ ಸುರಿದಿದ್ದ ಮಳೆ ಆ ಸಮಯದಲ್ಲೇ ನಿಂತಿತ್ತಾದರೂ, ಅದು ನಮ್ಮ ಯೋಜನೆಗೆ ಯಾವ ತೊಂದರೆಗಳನ್ನೂ ಉಂಟುಮಾಡುತ್ತಿರಲಿಲ್ಲ. ಹಿಂಬಾಲಿಸುತ್ತಿದ್ದವರೀರ್ವರೂ ಅದ್ಯಾವುದೋ ಅಶ್ಲೀಲ ಹಾಸ್ಯದೊಂದಿಗೆ ನಗುತ್ತಿದ್ದರು. (ಅಶ್ಲೀಲ ಹಾಸ್ಯವೆಂಬುದು ನನ್ನ ಊಹೆಯಷ್ಟೆ.) ಅವರ ಮುಖದಲ್ಲಿ ಹೆಣ್ಣನ್ನು, ಅದರಲ್ಲೂ ನಮ್ಮೂರಿನ ಹೆಣ್ಣನ್ನು ಬಳಸಿ ಬಿಸಾಡುವ ಭಾವನೆ ಕಾಣುತ್ತಿತ್ತೇ ವಿನಃ ಇನ್ಯಾವುದೇ ಉದಾತ್ತ ಚಿಂತನೆಯಿರಲಿಲ್ಲ. ಸೂಚನೆಯಂತೆಯೇ ಕುಸುಮ ಕೂಡ ಆಗಾಗ ಹಿಂದಿರುಗಿ ಮುಗುಳ್ನಗುತ್ತಾ, ವಯ್ಯಾರದಿಂದ ನಿಧಾನವಾಗಿಯೇ ನಡೆಯುತ್ತಿದ್ದಳು. ಕಾನುಗಪ್ಪೆಗಳ ಮೊರೆತ ಮತ್ತು ಪಕ್ಕದಲ್ಲೇ ಹರಿಯುತ್ತಿದ್ದ ಚಿಕ್ಕ ಝರಿಯ ಭೋರ್ಗರೆತ, ಏಕತಾನತೆಯನ್ನು ಮರೆಮಾಚುತ್ತಿತ್ತು. ಮರಕುಟಿಕ ಹಕ್ಕಿಯ "ಕುಟ್ಟೂ.... ಕುಟ್ಟೂ.... ಕುಟ್ಟ್" ಶಬ್ದ, ನಡೆಯುತ್ತಿರುವ ಮತ್ತು ನಡೆಯಲಿರುವ ನಾಟಕ ಸನ್ನಿವೇಶಕ್ಕೆ ಸಾಕ್ಷಿಯಾಗಿತ್ತು.

     ಅಂತೂ ಇಂತೂ ಕೊನೆಗೂ ನಾವು ನಿರ್ಧರಿಸಿದ್ದ ಬಲಿಪೀಠದ ಜಾಗಕ್ಕೆ ಕುರಿಮಾನವರಿಬ್ಬರ ಆಗಮನವಾಯಿತು. ಹಾವಿನಂತೆ ಸುತ್ತೀಬಳಸಿ ಮುಂದರಿಯುತ್ತಿದ್ದ ರಸ್ತೆಯ ಒಂದು ಬದಿಯಲ್ಲಿ ಕಾಡಿನೊಳಕ್ಕೆ ಅಗಚುವ ಕಾಲ್ದಾರಿಯೊಂದು ಎಳೆಯ ಬಾಳೆಪಟ್ಟೆಯಂತೆ ಬಿದ್ದಿತ್ತು. ಅಲ್ಲಲ್ಲಿ ಸವೆದು, ಹಸಿರುಹುಲ್ಲಿನಿಂದಾವೃತವಾಗಿದ್ದ ಆ ದಾರಿ ಎಲ್ಲೋ ಕೆಲವೊಮ್ಮೆ ಮಾತ್ರ ಬಳಕೆಯಾಗುತ್ತಿತ್ತಲ್ಲದೇ ದಿನಬಳಕೆಯ ಸಂಚಾರೀಮಾರ್ಗವಾಗಿರಲಿಲ್ಲ. ಕುಸುಮ ಅಲ್ಲಿಯೇ ನಿಂತವಳು, ಒಮ್ಮೆ ತಿರುಗಿ ನೋಡಿದಳು. ತನ್ನ ನೀಳಜಡೆಯನ್ನು ಮುಂದಕ್ಕೆಳೆದು ಕೈಬೆರಳಿಗೆ ಸುತ್ತುತ್ತಾ ತಲೆಬಗ್ಗಿಸಿ ಕಾದಳು. ಹೆಣ್ಣಿನ ಮನಸ್ಸನ್ನು ಬಲ್ಲ ಯಾರಿಗಾದರೂ ಅರ್ಥವಾಗುತ್ತದೆ, ಅದೊಂದು ಮೌನರೂಪೀ ಆಹ್ವಾನವಿಧಾನವೆಂದು. ಹಸಿದ ತೋಳಗಳಂತೆ ಕಾಯುತ್ತಿದ್ದವರು ಮುಂಬಂದು ನಿಧಾನಕ್ಕೆ ಮಾತಿಗೆ ಶುರುವಿಟ್ಟರು. ಆ ಮೂವರ ನಡುವಿನ ’ಪಿಸಿಪಿಸಿ ಗುಸುಗುಸು’ ವಾಕ್ ಶಬ್ದಗಳು, ದೂರದಲ್ಲಿ ಗವ್ವೆನ್ನುವ ಕಾಡಿನ ನಡುವೆ ಕುಳಿತು ನೋಡುತ್ತಿದ್ದ ನಮ್ಮೀರ್ವರಿಗೆ ಕೇಳಿಸುವ ಸಾಧ್ಯತೆಯೇ ಇರಲಿಲ್ಲ.

     ಅಣ್ಣಪ್ಪ ಮತ್ತು ನಾನು ಕುಕ್ಕುರುಗಾಲಲ್ಲಿ ಕುಳಿತಿದ್ದೆವು. ಆತ ಹಾಕಿದ್ದ ಚಡ್ಡಿಯಲ್ಲಿ ತೂತುಗಳನ್ನು ಎಣಿಸುವುದಕ್ಕಿಂತ ಬಟ್ಟೆಯೆಲ್ಲಿದೆಯೆಂದು ನೋಡುವುದೇ ಸುಲಭಸಾಧ್ಯವಾದ ಕಾರ್ಯವಾಗಿತ್ತು. ಆಗಸದಲ್ಲಿನ ಚುಕ್ಕಿಯಂತೆ ಕಂಗೊಳಿಸುತ್ತಿದ್ದ ಸಹಸ್ರಾರು ತೂತುಗಳ ಮಧ್ಯೆ ಚಕ್ರವರ್ತಿಯಂತೆ ಘನಗಾಂಭೀರ್ಯದಿಂದ ಶೋಭಿಸುತ್ತಿತ್ತು, ತೊಡೆಸಂದಿಯ ನಡುವಿನ ಬೃಹತ್ ಮೊರದಂತ ತೂತು. ತಾನಿದ್ದ ಪರಿಸರದಿಂದ ಬಿಡುಗಡೆ ಪಡೆದು ಆ ಕಾಡಿನ ಸ್ವಚ್ಛಗಾಳಿಯನ್ನು ಸವಿಯಲೆಂದೋ ಅಥವಾ ಸುತ್ತಲಿನ ತಂಬೆಲರ ಗಾಳಿಯಲ್ಲಿ ಹಾರಾಡಲೆಂದೋ ಹವಣಿಸುತ್ತಿದ್ದ ಆತನ ದೇಹದ ಬಹುಮುಖ್ಯ ಸ್ಥಳದಲ್ಲಿದ್ದ ಮರ್ಮಾಂಗವೊಂದು , ಭಟ್ಕಳದ ಶೆಟ್ಟರಂಗಡಿಯ, ಆಗತಾನೇ ಬೆಳೆದ ಕಡುಗಪ್ಪು ಬಣ್ಣದ ಕದಳೀಕಾಯಿಯಂತೆ ಹೊರಬಂದು ನೇತಾಡುತ್ತಿತ್ತು. ಅದನ್ನು ವೀಕ್ಷಿಸಿದವರಾರಾದರೂ, ಆತ ಕುಳಿತ ಭಂಗಿಗೂ, ಆತನ ಮುಗ್ಧಮುಖಕ್ಕೂ, ಬೃಹತ್ ವಿಶ್ವಸೃಷ್ಟಿಯಲ್ಲಿ ಮಗುವಂತೆ ಕುಳಿತು, ತನ್ನೊಳಗೊಂದು ಬ್ರಹ್ಮಾಂಡ ಅಡಗಿದೆಯೆಂಬ ಜ್ನಾನವಿಲ್ಲದ ಅಣ್ಣಪ್ಪನಂಥಾ ಅಣ್ಣಪ್ಪನನ್ನು ನೋಡಿ ಕನಿಕರಪಟ್ಟು ನಕ್ಕು ಸುಮ್ಮನಾಗುವರಲ್ಲದೇ ಹೊರತು, ಅಶ್ಲೀಲ ಯಾ ಅಸಹ್ಯ ಭಾವನೆಯನ್ನಂತೂ ತೋರಲಾರರು. ಇಂತಿಪ್ಪ ಸಮವಯಸ್ಕೀ ಪೆದ್ದು ಅಣ್ಣಪ್ಪನನ್ನು ನೋಡಿ ನಗು ತಡೆಯಲಾರದ ನಾನು, ಬಾಯಿಗೆ ಬಲಗೈಯನ್ನು ಭದ್ರವಾಗಿಟ್ಟು, ಎಡಗೈ ಮೊಣಕಟ್ಟಿನಿಂದ ಬಲವಾಗೊಮ್ಮೆ ತಿವಿದ ರಭಸಕ್ಕೆ ಹೊರಳಿಬೀಳುವ ಹಂತದಲ್ಲಿದ್ದವ ಕೈಯೂರಿ ಕುಳಿತ. ಹುಬ್ಬುಗಂಟಿಕ್ಕಿ ನನ್ನೆಡೆಗೆ ನೋಡಿ, ’ಏನು?’ ಎಂಬಂತೆ ತಲೆಯನ್ನು ಮೇಲಕ್ಕಲ್ಲಾಡಿಸಿದ. ಪ್ರಶ್ನಿಸುತ್ತಿದ್ದವನ ಅಜ್ನಾನವನ್ನು ಕೈದೋರಿ ನಿವಾರಿಸಿದೆ. ಕೂಡಲೇ ಸರಿಪಡಿಸಿಕೊಳ್ಳಲು ಎದ್ದುನಿಲ್ಲಲಿದ್ದವನನ್ನು ಎಳೆದು ಕೂರಿಸಿದೆ. ಕೂತ ರಭಸಕ್ಕೆ ಒಣಗಿದೆಲೆಗಳು ’ಚರ್ ಚರ್’ ಎಂದ ಸದ್ದು ರಸ್ತೆಯಲ್ಲಿದ್ದ ಮೂವರನ್ನು ಮುಟ್ಟಲಿಲ್ಲ. ಆತನೇನಾದರೂ ನಿಂತಿದ್ದಲ್ಲಿ, ಸುತ್ತಲಿದ್ದ ಪೊದೆ ಅಥವಾ ನಾವು ಕುಳಿತಿದ್ದ ಹಳುವೇ ಗಡಗಡನೆ ನಡುಗಿ, ವ್ಯವಸ್ಥಿತವಾಗಿ ಹಾಕಿದ್ದ ನೀಲಿನಕ್ಷೆಯೆಲ್ಲವೂ ನೀರಲ್ಲಿ ಮಾಡಿದ ಹೋಮದಂತೆ ವ್ಯರ್ಥವಾಗುತ್ತಿತ್ತು. ತನ್ನ ಮಾನ ಮುಚ್ಚಿಕೊಳ್ಳಲು ಭೂಮಿತಾಯಿಯನ್ನೇ ಆಸರೆಯಾಗಿ ಪಡೆದ ಅಣ್ಣಪ್ಪ, ಕುಕ್ಕುರುಗಾಲಿನ ಭಂಗಿಯಿಂದ ಪದ್ಮಾಸನ ಸ್ಥಿತಿಗೆ ಬದಲಾಯಿಸಲ್ಪಟ್ಟ. ರಸ್ತೆಯ ಮಧ್ಯದಲ್ಲಿ ನಡೆಯುತ್ತಿದ್ದ ಸಂಭಾಷಣೆ ಮುಗಿದು, ಕುಸುಮ ನಿಧಾನಕ್ಕೆ ಕಾಡಿನ ಕಾಲ್ದಾರಿಯಲ್ಲಿ ನಡೆಯಲು ಮೊದಲಾಗಿದ್ದಳು. ಅವಳನ್ನೇ ಹಿಂಬಾಲಿಸುತ್ತಿದ್ದ ಯುವಕರೀರ್ವರು ಪರಸ್ಪರ ಪಿಸುಗುಡುತ್ತಾ ನಗುತ್ತಿದ್ದರು. ಮಾರುದೂರದಲ್ಲಿ ಅನಾಥವಾಗಿ ನಿಂತಿತ್ತವರ ದ್ವಿಚಕ್ರವಾಹನ. ಫಕ್ಕನೆ ಅಣ್ಣಪ್ಪ ಪದ್ಮಾಸನದಿಂದೆದ್ದು ಅತ್ತಲೂ ಇತ್ತಲೂ ಕುಂಡೆಯನ್ನಲ್ಲಾಡಿಸಿ ಮತ್ತದೇ ಭಂಗಿಯಲ್ಲಿ ಕುಳಿತ.

ಏನಾಯಿತೆಂಬಂತೆ ಆಶ್ಚರ್ಯದಿಂದವನೆಡೆಗೆ ನೋಡಿದ ನನ್ನನ್ನುದ್ದೇಶಿಸಿ," ಕಟ್ಟಿರುವೆ ಮಾರ್ರೆ, ಕುಂಡಿ ಒಳ್ಗೆಲ್ಲಾ ಕಚ್ತದೆ" ಎಂದ. ನನಗರ್ಥವಾಯಿತು. ಆತನ ಸಹಸ್ರಾರು ತೂತುಮಯ ಜರಡಿಯಂತಹ ಚಡ್ಡಿಯೊಳಗೆ ಯಾವುದೋ ಒಂದು ಅದೃಶ್ಯರೂಪಿ ಇರುವೆ ಪ್ರವೇಶಿಸಿ, ಸುಮ್ಮನಿರದೇ, ಎರಡು ಬೃಹತ್ ಪರ್ವತಗಳ ಕಣಿವೆ ಪ್ರದೇಶದ ಅನಾಮಿಕ ಸಂದಿಯಲ್ಲೆಲ್ಲೋ ತನ್ನ ಹಲ್ಲಿನ ಪ್ರತಾಪವನ್ನು ಪ್ರದರ್ಶಿಸತೊಡಗಿತ್ತು. ಇದೇ ಕಾರಣಸಂಬಂಧದಿಂದಲೇ ಆತ, ತನ್ನ ಬಲಗೈನ ಎರಡು ಬೆರಳುಗಳನ್ನು ಆ ಜಾಗಕ್ಕೆ ತೂರಿಸಿ, ಅತ್ತಿತ್ತ ಅಲ್ಲಾಡಿಸಿ ಸಣ್ಣ ಪ್ರಮಾಣದ ಸಂಶೋಧನೆಯನ್ನು ನಡೆಸಿದ್ದ. ಈ ಕೆಲಸವನ್ನು ಮುಗಿಸಿ ಕುಳಿತ ಮರುಕ್ಷಣವೇ ತನ್ನ ಜಾಗವನ್ನು ಸ್ಥಳಾಂತರಿಸಿ ಬೇರೆಡೆಗೆ, ಬಹುಶಃ ಪ್ರಪಾತದ ಇನ್ನೂ ಆಳ ಪ್ರದೇಶಕ್ಕೆ ಪಾದಬೆಳೆಸಿದ ಇರುವೆಮಹಾಶಯ ಇನ್ನೊಂದು ಅನಾಮಿಕ, ಅಗೋಚರ, ಗುದದ್ವಾರದ ವ್ಯುತ್ಪತ್ತಿ ಸ್ಥಳದಲ್ಲಿ ತನ್ನ ವಿಶ್ವರೂಪದರ್ಶನವನ್ನು ಮೆರೆದಿದ್ದ. "ಅಂಯ್ಯಕ್" ಎಂಬ ಉದ್ಘೋಶದೊಂದಿಗೆ ಸಟಕ್ಕನೆ ಮೇಲೆದ್ದ ಅಣ್ಣಪ್ಪ ತನ್ನ ಸಮಸ್ತ ಬಲಗೈಯನ್ನು ಹೆಬ್ಬೆರಳ ಸಹಿತವಾಗಿ ಚಡ್ಡಿಯೊಳಗೆ ತೂರಿಸುವುದಕ್ಕೂ, ಬಲಭಾಗದಲ್ಲಿ ಪವಡಿಸಿದ್ದ ನನಗೆ ಆತನ ಕೈಹಿಡಿಯಲಾರದೇ ಚಡ್ಡಿಯನ್ನೆಳೆದು ಕೂರಿಸುವ ಪ್ರಯತ್ನ ಮಾಡಿದುದರ ಕಾರಣದಿಂದಾತ ದಿಗಂಬರನಾಗುವುದಕ್ಕೂ, "ಸರಕ್..... ಧಡ್" ಎಂದು ದಾರಿಯಲ್ಲಡಗಿಸಿದ್ದ ಕುಣಿಕೆಗೆ ಕಾಲುಸಿಕ್ಕು ಕಾಮುಕರಿಬ್ಬರೂ ತಲೆಕೆಳಗಾಗಿ ತೇಲುವುದಕ್ಕೂ ಸರಿಹೋಯಿತು.
"ಅಯ್ಯಯ್ಯೋ...., ಶಿಟ್....., ಹೆಲ್ಪ್....., ಹೆಲ್ಪ್....."

"ಹೆಲ್ಪ್...., ಹೆಲ್ಪ್....." ಯಾರ್ಯಾರು ಏನೆಂದು ಕೂಗಿದರೆಂದು ನನಗೂ ತಿಳಿಯಲಿಲ್ಲ. ಅರಚುವಿಕೆಗೆ ಒಮ್ಮೆ ಕಾಡೇ ಅಲ್ಲಾಡಿತು. ಪಕ್ಕದಲ್ಲೆಲ್ಲೋ ಸದ್ದಿಲ್ಲದೇ ಬಿದ್ದಿದ್ದ ಹಂದಿಯೊಂದು ಧಡ ಧಡನೆ ಓಡಿತು. ಸುತ್ತಲಿನ ಸಮಸ್ತ ಹಕ್ಕಿ ಪರಿವಾರವೆಲ್ಲವೂ ಒಮ್ಮೇಲೆ ಗಾಳಿಗೆ ಹಾರಿದವು. ಕುಸುಮಳಾಗಲೇ ಓಡುತ್ತಾ ಮನೆತಲುಪಿದ್ದಿರಬಹುದು. ಅಣ್ಣಪ್ಪನಿನ್ನೂ ಕಿಸಿ ಕಿಸಿ ನಗುತ್ತಲೇ ಕಾಲಗಲಿಸಿ ತನ್ನ ಹುಡುಕಾಟದ ತುರಿಸುವಿಕೆಯನ್ನು ಮುಂದುವರೆಸಿದ್ದ. ಕಾಡಿನೊಳಗೇ ನಿಧಾನಕ್ಕೆ ಮುಂದರಿದು, ರಸ್ತೆಗಿಳಿದು, ನಮ್ಮಂತೆಯೇ ಅಡಗಿಕುಳಿತಿದ್ದ ಉಳಿದವರನ್ನು ಸೇರಿಕೊಂಡಿದ್ದೆವು.

            **********


     ಅಪ್ಪಯ್ಯ ಉಳ್ಳ ಹಾಕಬೇಕೆಂದಾಗ ಎಲ್ಲರೂ ಆಶ್ಚರ್ಯಪಟ್ಟರಲ್ಲವೇ? ಉಳ್ಳ ಎಂದರೆ ಒಂದು ರೀತಿಯ ಸರಗುಣಿಕೆ. ಹಳ್ಳಿಯಲ್ಲಿ ಗದ್ದೆಗೆ ಧಾಳಿಯಿಡುವ ’ಹುಂಡಾನಕ್ಕಿ’ಯನ್ನು, ಚಿಕ್ಕಪುಟ್ಟ ಪ್ರಾಣಿಗಳಾದ ಮೊಲ, ಕಾಡುಕೋಳಿ ಮುಂತಾದವುಗಳನ್ನು ಹಿಡಿಯಲು ಬಳಸುತ್ತಾರೆ. ಆಯಾಪ್ರಾಣಿಗಳನ್ನು ಆಹಾರದ ಮೂಲಕ ಆಕರ್ಷಿಸಿ, ಸಜೀವವಾಗಿ ಕುಣಿಕೆಗೆ ಸಿಕ್ಕಿಬೀಳುವ ತೆರದಲ್ಲಿ ಹೆಣೆದಿರುತ್ತಾರೆ. ಒಮ್ಮೆ ನಿಗದಿತ ಜಾಗಕ್ಕೆ ಕಾಲಿಟ್ಟು ಸಿಕ್ಕಿಬಿದ್ದ ಪ್ರಾಣಿ, ಬಿಡಿಸುವವರೆಗೂ ತಪ್ಪಿಸಿಕೊಳ್ಳಲಾರದು. ಆದರೆ ದೊಡ್ಡ ಪ್ರಾಣಿಗಳನ್ನು ಹಿಡಿಯುವುದಕ್ಕೆ ಬಲವಾದ ಹಗ್ಗ ಮತ್ತು ಸಮರ್ಥ ಕುಣಿಕೆಯ ಹೆಣೆಯುವಿಕೆ ಅವಶ್ಯವಾದ್ದರಿಂದ ಮತ್ತು ಕೋವಿಯನ್ನು ಬಳಸುವುದೇ ಸುಲಭವಾದ್ದರಿಂದ ಈ ಉಳ್ಳವನ್ನು ಪ್ರಯೋಗಿಸುವುದಿಲ್ಲ. ಅದರಲ್ಲೂ ಮನುಷ್ಯರಿಗೆ ಉಳ್ಳ ಹಾಕುವುದೆಂದರೆ ಹೊಸ ಪ್ರಯೋಗವೇ ಸರಿ. ಅದರೂ ಕೂಡ ’ಉಳ್ಳಪ್ರವೀಣ’ರಾದ ಸೋಮಯ್ಯ ಮತ್ತು ಅಣ್ಣಪ್ಪರಿಬ್ಬರೂ ಕಾಡಿನ ಬಿಳಲುಗಳನ್ನು ಹೆರೆದು ತಂದು ರಾತ್ರಿಯೆಲ್ಲಾ ಕುಳಿತು ಉಳ್ಳಮಾಡಿ, ಬೆಳ್ಳಂಬೆಳ್ಳಿಗ್ಗೆಯೇ ಸರಿಯಾದ ನಿಗದಿತ ಜಾಗದಲ್ಲಿ ಪ್ರಯೋಗಿಸಿದ್ದರು. ಅದರ ಯಾವುದೇ ರೂಪರೇಖೆಗಳನ್ನು ಹೊರಪ್ರಪಂಚಕ್ಕೆ ಕಾಣದಂತೆ ಮುಚ್ಚಿ, ಕುಸುಮಳನ್ನು ಕರೆದು ಅವಳೇನು ಮಾಡಬೇಕೆಂಬುದನ್ನು ವಿವರಿಸಿದ್ದರು. ಬೆಳಿಗ್ಗೆಯೇ ಪ್ರಯೋಗಿಸಿಟ್ಟ ಉಳ್ಳಕ್ಕೆ ಬೇರಾವ ಪ್ರಾಣಿಗಳೂ ಸಿಲುಕದಂತೆ ಕಾಯುವ ಕೆಲಸವನ್ನು  ರಾಮಯ್ಯ ಮತ್ತು ಲಕ್ಷ್ಮಣನಾಯ್ಕರಿಗೆ ಒಪ್ಪಿಸಲಾಗಿತ್ತು. ಈ ಲೋಕವ್ಯಾಪಾರದ ಅರಿವಿಲ್ಲದೇ ಬಂದ ದುರಾದೃಷ್ಟವಂತರಿಬ್ಬರೂ ಉಳ್ಳಕ್ಕೆ ಸಿಕ್ಕು ತಲೆಕೆಳಗಾಗಿ ನೇತಾಡುತ್ತಿದ್ದರು.

               **********

     ಇನ್ನೂ ನಾಟಕ ಮುಗಿದಿರಲಿಲ್ಲ. ಆಗಷ್ಟೇ ರಂಗೇರತೊಡಗಿತ್ತು. ಪಕ್ಕದಲ್ಲಿದ್ದ ರಸ್ತೆಯ ಎರಡೂ ಕೊನೆಗಳಲ್ಲಿ ಅಡ್ಡಲಾಗಿ ಮರದಂಥ ಗಿಡವೊಂದನ್ನುರುಳಿಸಿ ಮುಚ್ಚಲಾಯಿತು. ಹಾಗೆಯೇ, ಬೇರೊಂದು ಬಳಸುದಾರಿಯನ್ನು ಹಿಡಿಯುವಂತೆ ಹಳ್ಳಿಯ ಅನಕ್ಷರಸ್ಥ ತಪ್ಪು ತಪ್ಪು ಕನ್ನಡ ಭಾಷೆಯ ಸೂಚನಾಫಲಕವೊಂದನ್ನು ತೋರಿಸಲಾಯಿತು. ಆ ರಸ್ತೆಯಲ್ಲಿ ತಿರುಗಾಡುವ ಯಾರಾದರೂ ಇವರೀರ್ವರ ಕೂಗನ್ನು ಕೇಳಿ, ತಪ್ಪಿಸುವುದು ನಮಗೆ ಬೇಕಾಗಿರಲಿಲ್ಲ. ಇದೆಲ್ಲ ಕೆಲಸವೂ ನುರಿತ ಕೈಗಳಿಂದ ಕ್ಷಣಾರ್ಧದಲ್ಲಿ ಮುಗಿದುಹೋಯಿತು. ಸೂರ್ಯರಶ್ಮಿಯೂ ನೆಲಮುಟ್ಟದ, ಪಟ್ಟಣದಿಂದ ಇಪ್ಪತ್ತು ಕಿಲೋಮೀಟರ್ ದೂರದ ಹಳ್ಳಿಯ ಆ ಕಗ್ಗಾಡಿನಲ್ಲಿ ಮೊಬೈಲ್ ಸಂಪರ್ಕ ಸಿಗುವುದಂತೂ ಕನಸಿನಮಾತೇ ಸರಿ.

     ಮುಸ್ಸಂಜೆ ಹೊತ್ತಲ್ಲಿ ಸಿಕ್ಕುಬಿದ್ದು, ಕೂಗಿಕೂಗಿ ಸುಸ್ತಾಗಿ ಅಳುತ್ತಿದ್ದವರಿಗೆ ರಾತ್ರಿಯಲ್ಲಿ ಭಯಂಕರ ಅನುಭವಗಳು ಕಾದಿದ್ದವು. ಮಳೆಯೂ ಕೂಡ, ತನ್ನ ಶಿಕ್ಷೆಯ ಪಾಲನ್ನು ಕೊಡಲು ಶುರುಮಾಡಿತ್ತು. ಮಾಮೂಲಿನಂತೆ ಮಿಂಚುವ ಮಿಂಚು, ಗುಡುಗುಗಳು ವಾತಾವರಣಕ್ಕೆ ರೌದ್ರಭಯಂಕರತೆಯನ್ನಿತ್ತಿದ್ದವು. ಮಿಂಚಿಗೆ ಪ್ರತಿಯೊಂದು ಮರ ಗಿಡಗಳೂ ಸಾವಿರ ಕೈಗಳ ಪ್ರೇತಾತ್ಮಗಳಂತೆ ಕಾಣುತ್ತಿದ್ದವು. ಮುಂದಿನ ಕಾರ್ಯವಿದ್ದದ್ದು ಅಣ್ಣಪ್ಪನ ಪಾಲಿಗೆ. ಕಾಡಲ್ಲೇ ಹುಟ್ಟಿ ಬೆಳೆದ ಆತ, ಬಗೆಬಗೆಯ ಪ್ರಾಣಿಗಳ ಕೂಗನ್ನು ಹೊರಡಿಸುವುದರಲ್ಲಿ ನಿಷ್ಣಾತ. ಬಾವಲಿಯಂತೆ ನೇತಾಡುತ್ತಿದ್ದವರು ಜೀವನದಲ್ಲೇ ಕೇಳದಿದ್ದ, ಕೇಳಲೂ ಆಗದ ಕರ್ಕಶ ಶಬ್ದಗಳನ್ನು ಕೇಳಿದ್ದರು. ಇವೆಲ್ಲವೂ ನಾಟಕೀಯವೆಂದೆನಿಸಿ, ಹಾಸ್ಯಮಯವಾಗಿದ್ದರೂ ಆವತ್ತಿನ ಘಳಿಗೆಯಲ್ಲಿ, ಅಂಥ ಪರಿಸರದಲ್ಲಿ, ಇಡೀ ದೇಹದ ಭಾರವನ್ನು ಕಾಲುಗಳಿಗೆ ಬಿಟ್ಟು, ಗಾಳಿಯಲ್ಲಿ ತೇಲುತ್ತಾ, ಯಮಗಟ್ಟಿಯ ಆ ಬಳ್ಳಿಗಳಿಂದ ಬಿಡಿಸಿಕೊಳ್ಳಲು ಹರಸಾಹಸಪಡುತ್ತಿದ್ದವರಿಗೆ ನರಕವಾಗಿ ಪರಿಣಮಿಸಿತ್ತು. ಮಾಯೆಯ ಬಲೆಗೆ ತುತ್ತಾಗಿ, ಭಯದ ಬಂಧನಕ್ಕೊಳಗಾಗಿ ಊಳಿಡುತ್ತಿದ್ದ ಅವರ ಮನಸ್ಸು ಸತ್ಯ-ಅಸತ್ಯಗಳ ನಡುವಿನ ವ್ಯತ್ಯಾಸವನ್ನು ಗುರುತಿಸದೇ, ಅಣ್ಣಪ್ಪನ ಬಗೆಬಗೆ ಸ್ವರವನ್ನೂ ಕೂಡ ನಿಜವೆಂದೇ ಭ್ರಮಿಸಿ, ಹೆದರಿ, ಬೆದರಿದ್ದವು. ಮಿಂಚಿದಾಗ ಕಂಡ, ಅವರ ತಲೆಯಿಂದ ಕೆಳಕ್ಕೆ ಸುರಿಯುತ್ತಿದ್ದ ದ್ರವವನ್ನು ಮಳೆನೀರೋ, ಮೂತ್ರವೋ ಎಂದು ಗುರುತಿಸಲಾಗಲಿಲ್ಲ. ಇಂತಿಪ್ಪ ರಾತ್ರಿ ಕಳೆದು ಬೆಳಗಾಯಿತು. ರಾತ್ರಿಯಿಡೀ ಉಭಯ ಕಡೆಯವರಿಗೂ ನಿದ್ರೆಯಿರಲಿಲ್ಲ. ಒಬ್ಬರಿಗೆ ಭಯ ಕಾರಣವಾದರೆ, ಇನ್ನೊಬ್ಬರಿಗೆ ಭಯದ ಹುಟ್ಟಿಸುವಿಕೆಯ ಕೆಲಸ ಕಾರಣವಾಗಿತ್ತು.

             **********

     ಅಸಾಧ್ಯ ನೋವಿಗೋ ಅಥವಾ ಎದೆನಡುಗಿಸಿದ ಭಯಕ್ಕೋ ಮೂರ್ಛೆಹೋಗಿದ್ದವರನ್ನು ಬೆಳಿಗ್ಗೆ ಇಳಿಸಿ, ತಟ್ಟಿ ಎಬ್ಬಿಸಲಾಯಿತು. ಆ ಹೊತ್ತಿಗೆಲ್ಲಾ ರಸ್ತೆಯ ಎರಡೂ ಕೊನೆಗೆ ಕಡಿದು ಬೀಳಿಸಿದ್ದ ಗಿಡಗಳನ್ನು ಕುರುಹೂ ಇಲ್ಲದಂತೆ ನಾಶಪಡಿಸಲಾಗಿತ್ತು. ಇಬ್ಬರಿಗೂ ಕುಡಿಯಲು ನೀರನ್ನೂ, ತಿನ್ನಲು ಆಹಾರವನ್ನೂ ಕೊಡಲಾಯಿತು. ವಿಷಯ ತಿಳಿದಕೂಡಲೇ ಓಡಿಬಂದ ಸಮಾಜದ ದೊಡ್ಡವ್ಯಕ್ತಿಗಳೆನೆಸಿಕೊಂಡವರು ತಮ್ಮತಮ್ಮ ಸುಪುತ್ರರನ್ನು ಅಪ್ಪಿ ಮುದ್ದಾಡಿದರು. ಪ್ರಾಣಿಗೆಂದು ಉಳ್ಳಹಾಕಿದ್ದು, ರಾತ್ರಿಯಿಡೀ ನಿರ್ಲಕ್ಷಿಸಿದ್ದು, ಬೆಳಿಗ್ಗೆ ಕಾಪಾಡಿದರೂ ಉತ್ತಮ ಚಿಕಿತ್ಸೆ ನೀಡದಿದ್ದುದು, ಒಳ್ಳೆಯ ಆಹಾರ ಕೊಡದಿದ್ದುದು, ಮಲಗಿಸಲು ಬೆಡ್ ಒದಗಿಸದೇ ಕಂಬಳಿಯನ್ನಿತ್ತಿದ್ದು ಹೀಗೆಮುಂತಾದ ಕಾರಣಗಳಿಗಾಗಿ ಊರವರನ್ನು ಹೀನಾಮಾನ ಬಯ್ದಿದ್ದರು. ಕೂಗಾಟ ನಡೆಯುತ್ತಿದ್ದ ವೇಳೆ ರಾಮಯ್ಯ ಮತ್ತು ಲಕ್ಷ್ಮಣನಾಯ್ಕರಿಬ್ಬರೂ ಪರಸ್ಪರ ಮುಸಿಮುಸಿ ನಗುತ್ತಿದ್ದರು. ಅಂಬುಲೆನ್ಸಿನೊಳಗೆ ಸ್ಟ್ರೆಚರ್ನೊಂದಿಗೆ ಮಲಗಿಸುವಾಗ ನಾನೂ ಕೈನೀಡಿದೆ. ನಂತರ ಅವರೀರ್ವರ ಕಿವಿಯಲ್ಲುಸುರಿದೆ, "ಮುಂದೆ ಮತ್ತೊಮ್ಮೆ ಈ ರಸ್ತೆಯಲ್ಲಿ ಬಂದರೆ ಕಾಲಿಗೆ ಬಿದ್ದದ್ದು ಕುತ್ತಿಗೆಗೆ ಬೀಳುತ್ತದೆ ಹುಶ್ಯಾರ್.....,"
"ಏನೋ ಅದು? ಏನ್ ಹೇಳ್ತಿದಿಯಾ?" ಅವರಲ್ಲೊಬ್ಬನ ಅಪ್ಪನೆನಿಸಿಕೊಂಡವ ಅರಚಿದ.

ಶುಭ್ರ ಬಿಳಿಲುಂಗಿಯುಟ್ಟಿದ್ದ ನಾನು ಅಷ್ಟೇ ಶುಭ್ರವಾಗೆಂದೆ, "ನಥಿಂಗ್ ಮೋರ್ ಸರ್. ಜಸ್ಟ್ ವಿಶಿಂಗ್ ದೆಮ್ ಟು ಗೆಟ್ ವೆಲ್ ಸೂನ್" ಆ ಹಳ್ಳಿಗಾಡಿನಲ್ಲೂ ನೂತನ ನಾಗರೀಕತೆ ಪಸರಿಸಿದ್ದು ನೋಡಿ ಅಚ್ಚರಿಗೊಂಡರೂ, ವಿದ್ಯಾಭ್ಯಾಸವನ್ನು ವಿಚಾರಿಸಿದವರು ಹೊರಟುಹೋದರು. ಅವರಿಗೂ ಗೊತ್ತಾಗಿತ್ತು, ಇನ್ನೂ ಹೆಚ್ಚು ಕೂಗಾಡಿದರೆ ಸಮರ್ಥ ಉತ್ತರ ಕೊಡಲೊಬ್ಬ ಎದುರಾಳಿ ಇದ್ದಾನೆಂದು. ಮಳೆಬಿಟ್ಟ ಆಗಸದಲ್ಲಿ ಮತ್ತೆ ಬಾಲನೇಸರನ ಆಗಮನವಾಗಿತ್ತು. ಸುತ್ತಲೆಲ್ಲ ಪ್ರಖರ ಬೆಳಕು ಪಸರಿಸುತ್ತಿದ್ದ ಸಮಯದಲ್ಲಿ, ಕತ್ತಲನ್ನು ಹೊತ್ತ ಗಾಡಿ ಹೊರಟಿತು. ಅಣ್ಣಪ್ಪ ನಗುತ್ತಾ ಫಲವನ್ನು ಬಯಸದೇ ಟಾ ಟಾ ಮಾಡುತ್ತಿದ್ದ.

               **********

     ನಾವೆಲ್ಲರೂ ಸೇರಿ ಹೂಡಿದ್ದ ಉಪಾಯದಲ್ಲೊಂದು ಬೃಹತ್ ದೊಡ್ಡ ತಪ್ಪಿತ್ತು. ಆದರೆ ಅದರಿಂದ ಯಾರಿಗೂ ತೊಂದರೆಯಾಗುವ ಸ್ಥಿತಿಯಿರಲಿಲ್ಲ. ಅದೇನೆಂದು ನಮಗೂ ಗೊತ್ತಿತ್ತು, ಉಳ್ಳಕ್ಕೆ ಬಿದ್ದವರಿಗೂ ಗೊತ್ತಿತ್ತು. ಕುಣಿಕೆಗೆ ಸಿಕ್ಕ ಇಬ್ಬರನ್ನೂ ನೋಡಿದ ಕುಸುಮ, ಕೂಡಲೇ ಮನೆಗೆ ತಿಳಿಸಿ ಊರವರನ್ನು ಕರೆತಂದು ತಪ್ಪಿಸಬಹುದಾಗಿತ್ತು. ಆದರೆ ಅದಾಗದಿದ್ದಾಗಲೇ ಅವರಿಗೆ ತಿಳಿದುಹೋಗಿತ್ತು, ತಾವು ಮೊದಲೇ ತಮಗೆಂದೇ ತಯಾರಿಸಿದ ಬಲೆಗೆ ಸಿಕ್ಕುಬಿದ್ದಿದ್ದೀವೆಂದು. ಆ ಭಯವೂ ಮತ್ತು ನಮಗೇನೂ ಆಗಲಾರದೆಂಬ ಧೈರ್ಯವೂ ಅವರಲ್ಲಿತ್ತು. ಈ ನಿಟ್ಟಿನಲ್ಲೇನಾದರೂ ತಮ್ಮ ಹೆತ್ತವರಿಂದ ವಿಚಾರಣೆ ನಡೆದಲ್ಲಿ ಮುಂದೊಮ್ಮೆ ತಮಗೆ ಸಂಚಕಾರವಿದೆಯೆಂದರಿತು ತಡೆಹಿಡಿದಿದ್ದರು. ಸೂಚ್ಯವಾಗಿ ತಪ್ಪು ತಮ್ಮದಿದೆಯೆಂದು ತಿಳಿಸಿದ್ದರು.

     ಮುಂದೆಂದೂ ಭಟ್ಕಳದಲ್ಲೆಲ್ಲೂ ಅವರನ್ನು ನಾನು ನೋಡಿದ್ದಿಲ್ಲ. ಎರಡು ತಿಂಗಳ ನಂತರ ಇನ್ಸ್ಪೆಕ್ಟರ್ರಿಗೆ ಚಿತ್ರದುರ್ಗದ ತಾಲೂಕೊಂದಕ್ಕೆ ವರ್ಗವಾಯಿತೆಂದು ಕೇಳಲ್ಪಟ್ಟೆ. ಅಧಿಕಾರದ ಗದ್ದುಗೆಯಲ್ಲಿದ್ದವರಿಂದ ಮುಂದಾಗಬಹುದಾದ ತೊಂದರೆಗಳಿಂದ ಮುಕ್ತರಾಗಿ ನಿಟ್ಟುಸಿರಿಟ್ಟಿದ್ದೆವು. ಕುಸುಮಳೀಗ ಧೈರ್ಯದಿಂದ ಒಬ್ಬಳೇ ಅದೇ ದಾರಿಯಲ್ಲಿ ತಿರುಗಾಡುತ್ತಾಳೆ. ತನಗೇನಾದರೂ ತನ್ನವರು ಕೈಬಿಡಲಾರರೆಂಬ ಯೋಚನೆಯೊಂದು ಗಟ್ಟಿಯಾಗಿ ಅವಳ ಪ್ರಜ್ನಾವಲಯದಲ್ಲಿ ಪ್ರತಿಷ್ಠಾಪನೆಗೊಂಡಿದೆ. ಅಣ್ಣಪ್ಪನೀಗಲೂ ತೂತಾದ ಚಡ್ಡಿಯನ್ನು ಹಾಕುವುದನ್ನು ಬಿಟ್ಟಿಲ್ಲ.------ಸಂದೀಪ ಪರಮೇಶ್ವರ ಹೆಗ್ಡೆ.